ಬೆಂಗಳೂರು: ಆರ್ಥಿಕ ಅಭಿವೃದ್ಧಿಗೆ ಪೂಜೆ ಮಾಡಿಸಬೇಕು, ದೀಕ್ಷೆ ನೀಡುತ್ತೇನೆ ಎಂದು ಕರೆದೊಯ್ದು ಬ್ಯೂಟಿಷಿಯನ್ ಒಬ್ಬರ ಮೇಲೆ ಜ್ಯೋತಿಷಿಯೊಬ್ಬ ನಿರಂತರವಾಗಿ ಅತ್ಯಾಚಾರ ಎಸಗಿರುವ ಹೇಯ ಘಟನೆ ಬೆಂಗಳೂರಿನ ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹೀಗೆ ಪೂಜೆ, ದೀಕ್ಷೆ ನೆಪದಲ್ಲಿ ಗಂಡ ಮತ್ತು ಮಗನ ಮೇಲೆ ವಾಮಾಚಾರ ಮಾಡಿಸಿ ಅವರು ರಕ್ತ ಕಾರಿ ಸಾಯುವಂತೆ ಮಾಡುವುದಾಗಿ ಬೆದರಿಸಿ ಆರೋಪಿ ಮಹಿಳೆ ಮೇಲೆ ದೌರ್ಜನ್ಯ ಎಸಗಿದ್ದಾನೆ.
ಮೋಹನ್ ಕುಮಾರ್ ಎಂಬಾತನ ವಿರುದ್ಧ ದೂರು ದಾಖಲಾಗಿದೆ. ಈ ಬಗ್ಗೆ ಸಂತ್ರಸ್ತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.
ರಾಜಾಜಿನಗರದಲ್ಲಿ ಬ್ಯೂಟಿಷಿಯನ್ ಟ್ರೈನಿಂಗ್ ಸೆಂಟರ್ ನಡೆಸುತ್ತಿದ್ದ ಮಹಿಳೆಗೆ, ತನ್ನ ಸಹೋದರಿಯ ಅಡ್ಮಿಷನ್ ನೆಪದಲ್ಲಿ ಆರೋಪಿ ಮೋಹನ್ ಕುಮಾರ್ ಎಂಬಾತ ಪರಿಚಯವಾಗಿದ್ದ.
ಮಹಿಳೆಯ ಆರ್ಥಿಕ ಅಭಿವೃದ್ಧಿಗೆ ಪೂಜೆ ಮಾಡಿಸಬೇಕು ಎಂದು ನಂಬಿಸಿದ್ದ ಆರೋಪಿ, 2025ರ ಜನವರಿ 30ರಂದು ರಾಮನಗರದ ಪಿರಮಿಡ್ ವ್ಯಾಲಿಗೆ ಕರೆದೊಯ್ದು ನಿರ್ಜನ ಪ್ರದೇಶದಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.
ನಂತರ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಪೂಜೆಗೆಂದು ಕರೆದೊಯ್ದು ವಾಪಸ್ಸಾಗುವಾಗ ಕಾರಿನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಕುಟುಂಬದ ಮೇಲೆ ಮಾಟ-ಮಂತ್ರ ಮಾಡಿಸುವುದಾಗಿ ಬೆದರಿಕೆಯೊಡ್ಡಿದ್ದಾನೆ.
ಫೆಬ್ರವರಿ 10ರಂದು ದೀಕ್ಷೆ ನೀಡುವುದಾಗಿ ಹೇಳಿ ಮಹಿಳೆಯ ಮನೆಗೆ ಬಂದಿದ್ದ ಜ್ಯೋತಿಷಿ, ಗಂಡ ಮತ್ತು ಮಗನನ್ನು ಮನೆಯಿಂದ ಹೊರಗೆ ಕಳುಹಿಸಿ ಮಹಿಳೆಯ ಮೇಲೆ ದೌರ್ಜನ್ಯ ಎಸಗಿದ್ದಾನೆ. ತಾನು ಹೇಳಿದಂತೆ ಕೇಳದಿದ್ದರೆ ಕುಟುಂಬವನ್ನೇ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ.
ಆರೋಪಿ ಮೋಹನ್ ಕುಮಾರ್ ಬೆದರಿಕೆ ಹಿಂಸೆಗೆ ಬೇಸತ್ತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಸಿ.ಕೆ. ಅಚ್ಚುಕಟ್ಟು ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ತನ್ನ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದಾನೆ.

