ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುವುದರ ವಿರುದ್ಧ ರಾಜ್ಯದಲ್ಲಿ ಪ್ರತಿಭಟನೆಗಳು ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ಆಗಸ್ಟ್ 3ರಂದು ತಮಿಳುನಾಡು ಸಿಎಂ ವಿಜಯ್ ಕರ್ನಾಟಕ ಭೇಟಿ ಮುಂದೂಡಿಕೆಯಾಗುವ ಸಾಧ್ಯತೆ ದಟ್ಟವಾಗಿದೆ.
ರಾಜ್ಯದಲ್ಲಿ ಬರ ಪರಿಸ್ಥಿತಿಯಲ್ಲಿಯೂ ತಮಿಳುನಾಡಿಗೆ ಪ್ರತಿದಿನ 3,500 ಕ್ಯೂಸೆಕ್ ನಂತೆ 15 ದಿನಗಳ ಕಾಲ 4 ಟಿಎಂಸಿ ನೀರು ಹರಿಸುವಂತೆ CWRC ಹಾಗೂ CWMA ಆದೇಶ ಹೊರಡಿಸಿರುವ ಬೆನ್ನಲ್ಲೇ ರಾಜ್ಯದಲ್ಲಿ ರೈತರು, ಕನ್ನಡಪರ ಸಂಘಟನೆಗಳು ಹಾಗೂ ಬಿಜೆಪಿ ನಾಯಕರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದು, ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಹನಿ ನೀರು ಬಿಡಬಾರದು ಎಂದು ಆಗ್ರಹಿಸುತ್ತಿದ್ದಾರೆ. ರಾಜ್ಯದಲ್ಲಿ ಕುಡಿಯುವ ನೀರಿಗೆ ಸಂಕಷ್ಟ ಎದುರಾಗಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ನೀರು ಬಿಡಲು ಮುಂದಾಗಬಾರದು. ಅಲ್ಲದೇ ರಾಜ್ಯಕ್ಕೆ ತಮಿಳುನಾಡು ಸಿಎಂ ವಿಜಯ್ ಬರುವ ಅವಶ್ಯಕತೆಯೇ ಇಲ್ಲ ಎಂದು ಪಟ್ಟು ಹಿಡಿದಿವೆ.
ಈ ಹಿನ್ನೆಲೆಯಲ್ಲಿ ಇಂತಹ ಸಂದರ್ಭದಲ್ಲಿ ತಮಿಳುನಾಡು ಸಿಎಂ ವಿಜಯ್ ರಾಜ್ಯಕ್ಕೆ ಬರುವುದು ಬೇಡ, ಬೇರೊಂದು ದಿನ ಬರುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡ ಮನವಿ ಮಾಡಿದ್ದಾರೆ.
ಈ ಬಗ್ಗೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಿಎಂ ಡಿ.ಕೆ.ಶಿವಕುಮಾರ್, ತಮಿಳುನಾಡು ಸಿಎಂ ಆಗಸ್ಟ್ 3ರಂದು ಕರ್ನಾಟಕಕ್ಕೆ ಬರುವ ದಿನಾಂಕ ನಿಗದಿಯಾಗಿತ್ತು. ಹಲವು ವಿಚಾರಗಳ ಬಗ್ಗೆ ಚರ್ಚಿಸಲು ಬರುವುದಾಗಿ ಹೇಳಿದ್ದರು. ಆದರೆ ಇಂತಹ ಸಂದರ್ಭದಲ್ಲಿ ಅವರು ರಾಜ್ಯಕ್ಕೆ ಬರುವುದು ಬೇಡ. ಆಗಸ್ಟ್ 3ರ ಬದಲಾಗಿ ಬೇರೊಂದು ದಿನ ಬರಲಿ. ಬೇರೆ ದಿನಾಂಕವನ್ನು ಫಿಕ್ಸ್ ಮಾಡುವಂತೆ ಸಿಎಂ ವಿಜಯ್ ಅವರಿಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

