HomeLatest Newsಸದನದಲ್ಲಿ ಎಲ್ಲದಕ್ಕೂ ಸಿಎಂ ಅವರೇ ಉತ್ತರ ಕೊಡುವುದಾದರೆ ಸಚಿವರು ಕತ್ತೆ ಕಾಯಲು ಇದ್ದಾರೆಯೇ? ಇದು ಡಿ.ಕೆ.ಶಿವಕುಮಾರ್‌...

ಸದನದಲ್ಲಿ ಎಲ್ಲದಕ್ಕೂ ಸಿಎಂ ಅವರೇ ಉತ್ತರ ಕೊಡುವುದಾದರೆ ಸಚಿವರು ಕತ್ತೆ ಕಾಯಲು ಇದ್ದಾರೆಯೇ? ಇದು ಡಿ.ಕೆ.ಶಿವಕುಮಾರ್‌ ಅವರ ಗೂಂಡಾಗಿರಿ ಸರ್ಕಾರ: ಆರ್.ಅಶೋಕ್ ಕಿಡಿ

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ನೂರಾರು ಕೋಟಿ ರೂಪಾಯಿ ಲೂಟಿ ಮಾಡಿರುವ ಆರೋಪ ಹೊತ್ತಿರುವ ಸಚಿವ ಬಿ.ನಾಗೇಂದ್ರ ರಾಜೀನಾಮೆ ನೀಡುವವರೆಗೂ ಅಧಿಉವೇಶನ ನಡೆಸಲು ಬಿಡುವುದಿಲ್ಲ ಎಂದು ವಿಪಕ್ಷ ನಾಯಕ ಆರ್‌.ಅಶೋಕ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್.ಅಶೋಕ್, ಸದನದಲ್ಲಿ ಎಲ್ಲದಕ್ಕೂ ಮುಖ್ಯಮಂತ್ರಿಯೇ ಉತ್ತರ ಕೊಡುವುದಾದರೆ ಸಚಿವರು ಕತ್ತೆ ಕಾಯಲು ಇದ್ದಾರೆಯೇ? ಜನರ ತೆರಿಗೆ ಹಣದಲ್ಲಿ ಸಚಿವರಿಗೆ ಕಾರು, ಮನೆ ಎಲ್ಲವನ್ನೂ ನೀಡುತ್ತಾರೆ. ಇದು ಚಕ್ರಾಧಿಪತ್ಯ ಅಲ್ಲ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ರಚಿಸಿದ ಸಂವಿಧಾನಕ್ಕೆ ಗೌರವ ನೀಡುವುದಾದರೆ ಸಚಿವರಿಗೆ, ಮುಖ್ಯಮಂತ್ರಿಗೆ ಯಾವ ಅಧಿಕಾರ ಇದೆ ಎಂದು ತಿಳಿದುಕೊಳ್ಳಬೇಕು. ಮುಖ್ಯಮಂತ್ರಿಯೇ ಉತ್ತರ ಕೊಡುವುದಾದರೆ ಎಲ್ಲ ಸಚಿವರನ್ನು ಅಧಿವೇಶನದಿಂದ ಹೊರಕ್ಕೆ ಹಾಕಬೇಕು ಎಂದರು.

ಇದು ಸಿಎಂ ಡಿ.ಕೆ.ಶಿವಕುಮಾರ್‌ ಅವರ ಗೂಂಡಾಗಿರಿ ಸರ್ಕಾರ. ಅಧಿವೇಶನ ನಡೆಸುವ ಹೊಣೆ ಇದ್ದಲ್ಲಿ ಮೊದಲು ನಾಗೇಂದ್ರ ಅವರ ರಾಜೀನಾಮೆ ಪಡೆಯಬೇಕು. ಈ ಅಧಿವೇಶನದಲ್ಲಿ ಬಿಡದಿ ಟೌನ್‌ಶಿಪ್‌, ಕೆಪಿಎಸ್‌ಸಿ ಮೊದಲಾದ ವಿಷಯಗಳ ಬಗ್ಗೆ ಚರ್ಚೆ ಮಾಡಬೇಕಿದೆ. ಆದರೆ ಚರ್ಚೆಯಾಗಬೇಕೆಂದರೆ ಮೊದಲು ರಾಜೀನಾಮೆ ಪಡೆಯಬೇಕು ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಿಜೆಪಿ ವತಿಯಿಂದ ಎಲ್ಲ ಜಿಲ್ಲಾಕೇಂದ್ರಗಳಿಂದ ಹೋರಾಟ ಆರಂಭಿಸಲಾಗುತ್ತಿದೆ. ಪ್ರತಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಕಾರ್ಯಕರ್ತರು ಹೋರಾಟ ನಡೆಸುತ್ತಾರೆ. ವಿಧಾನಸಭೆ ಅಧಿವೇಶನದ ಒಳಗೆ ಹಾಗೂ ಹೊರಗೆ ಹೋರಾಟ ಮಾಡಲಾಗುವುದು. ಕಳೆದ ಬಾರಿ ಸಚಿವ ಬಿ.ನಾಗೇಂದ್ರ ಅವರನ್ನು ಕಿತ್ತುಹಾಕಿದ್ದು ಏಕೆ ಹಾಗೂ ಈಗ ಮರಳಿ ಸಚಿವರಾಗಿದ್ದು ಏಕೆ ಎಂದು ಸ್ಪಷ್ಟನೆ ನೀಡಬೇಕು. ನಾಗೇಂದ್ರ ಅವರು ಪ್ರತಿ ದಿನ ಕೋರ್ಟ್‌ನಲ್ಲೇ ಇರಬೇಕಾಗುತ್ತದೆ. ಅವರಿನ್ನೂ ಆರೋಪಿಯಾಗೇ ಇದ್ದಾರೆ. ಸಿಬಿಐನಲ್ಲಿ ಮೂರು ಪ್ರಕರಣಗಳು ಇನ್ನೂ ನಡೆಯುತ್ತಿದೆ. ಲೋಕಾಯುಕ್ತದಲ್ಲಿ ಐದು ಪ್ರಕರಣ ದಾಖಲಾಗಿದೆ. ಎಸ್‌ಐಟಿಯಲ್ಲಿ ಒಂದು ಪ್ರಕರಣ ಇದೆ. ಕಾರವಾರದಲ್ಲಿ ಸಿಐಡಿ ಪ್ರಕರಣವಿದೆ. ಚೆನ್ನೈನಲ್ಲೂ ಪ್ರಕರಣ ನಡೆಯುತ್ತಿದೆ. ಒಟ್ಟು 31 ಪ್ರಕರಣಗಳು ವಿಚಾರಣೆಯಲ್ಲಿದೆ. ಹೀಗಿರುವಾಗ ಅವರು ವಿಧಾನಸೌಧಕ್ಕೆ ಯಾವಾಗ ಬರುತ್ತಾರೆ? ಇಲಾಖೆಯ ಕೆಲಸ ಯಾವಾಗ ಮಾಡುತ್ತಾರೆ? ಎಂದು ಪ್ರಶ್ನಿಸಿದರು.

ವಾಲ್ಮೀಕಿ ನಿಗಮದ ಪ್ರಕರಣದಲ್ಲಿ 187 ಕೋಟಿ ರೂ. ಹಗರಣದಲ್ಲಿ 89 ಕೋಟಿ ರೂ. ಅಕ್ರಮ ನಡೆದಿರುವುದನ್ನು ಮಾಜಿ ಸಿಎಂ ಸಿದ್ದರಾಮಯ್ಯ ಒಪ್ಪಿಕೊಂಡಿದ್ದರು. ಇದನ್ನು ಚುನಾವಣೆಗೆ ಬಳಸಿಕೊಂಡಿರುವುದು ಜಗಜ್ಜಾಹೀರಾಗಿತ್ತು. ದಲಿತರ ಈ ಹಣವನ್ನು ತಿಂದವರನ್ನು ಸಂಪುಟದಲ್ಲಿ ಇಟ್ಟುಕೊಂಡರೆ ಇಡೀ ಸಂಪುಟ ಕಳಂಕಿತ ಎಂದಾಗುತ್ತದೆ. ಬಹುಶಃ ನಾಗೇಂದ್ರ ಅವರು ಮುಖ್ಯಮಂತ್ರಿ, ಹೈಕಮಾಂಡ್‌ ನ್ನು ಬ್ಲ್ಯಾಕ್‌ ಮೇಲ್‌ ಮಾಡಿರಬಹುದು ಎಂದರು.

ವಿಧಾನಪರಿಷತ್‌ ಸಭಾಪತಿಯ ವಿರುದ್ಧ ಅವಿಶ್ವಾಸ ಮಂಡಿಸುವ ಬದಲು ಅವರ ಕಚೇರಿಗೆ ನುಗ್ಗಿ ಬೆದರಿಕೆ ಹಾಕಿ ರಾಜೀನಾಮೆ ಪಡೆಯಲಾಗಿದೆ. ಸಿಎಂ ಡಿ.ಕೆ.ಶಿವಕುಮಾರ್‌ ಸಭಾಪತಿ ಹುದ್ದೆಯನ್ನು ಒದ್ದು ಕಿತ್ತುಕೊಂಡಿದ್ದಾರೆ. ಸಿಎಂ ಅಧಿಕಾರವನ್ನು ಕೂಡ ಒದ್ದು ಕಿತ್ತುಕೊಂಡಿದ್ದಾರೆ ಎಂದು ಹೇಳಿದರು.

ಸ್ವಚ್ಛ ಬೆಂಗಳೂರು ಹೆಸರಲ್ಲಿ ಕಾಂಗ್ರೆಸ್‌ ಹೊಸ ಲೂಟಿ ಶುರು ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಹಿಂದೆಯೇ ಸ್ವಚ್ಛ ಭಾರತ್‌ ಕಾರ್ಯಕ್ರಮ ಆರಂಭಿಸಿದ್ದರು. ರೀಲ್ಸ್‌ ಮಾಡಿಕೊಂಡಿರುವ ಸಚಿವ ಕೃಷ್ಣ ಭೈರೇಗೌಡ ಸ್ವಚ್ಛ ಮಾಡಲು ತೆರಿಗೆ ಹಾಕುತ್ತಿದ್ದಾರೆ. ಈಗಾಗಲೇ ಇರುವ ತೆರಿಗೆಯಲ್ಲೇ ಕಸದ ನಿರ್ವಹಣೆಯೂ ಸೇರಿರುತ್ತದೆ. ಖಾಲಿ ನಿವೇಶನದಲ್ಲಿ ಕಸ ಇದ್ದರೆ ವಿವಿಧ ರೀತಿಯ ತೆರಿಗೆ ದರಗಳನ್ನು ನಿಗದಿಪಡಿಸಲಾಗಿದೆ. ಬೆಂಗಳೂರಲ್ಲಿ ಅಭಿವೃದ್ಧಿ ಮಾಡದೆ ಜನರಿಂದ ತೆರಿಗೆ ಮಾತ್ರ ವಸೂಲಿ ಮಾಡಲಾಗುತ್ತಿದೆ ಎಂದರು.

ರಸ್ತೆ ಬದಿ ನಿಂತಿರುವ ಕಾರುಗಳನ್ನು ಖಾಲಿ ಮಾಡಿಸುತ್ತೇನೆ ಎಂದಿದ್ದರು. ಈ ರೀತಿ ಒಂದು ಲಕ್ಷಕ್ಕೂ ಅಧಿಕ ಕಾರ್‌ಗಳಿವೆ. ಅದನ್ನು ಏನು ಮಾಡಿದ್ದಾರೆ ಎಂದು ತಿಳಿದಿಲ್ಲ. ಪಾದಚಾರಿ ಮಾರ್ಗ ತೆರವು ಬೆಳಗ್ಗೆ ಮಾಡಿದರೆ, ಸಂಜೆ ಮತ್ತೆ ಅಲ್ಲಿ ಬೀದಿ ಬದಿ ವ್ಯಾಪಾರಿಗಳು ಬಂದಿರುತ್ತಾರೆ. ಈಗ ಕಸದಿಂದ ಸ್ವಾತಂತ್ರ್ಯ ಎಂದು ಹೇಳಿ ತೆರಿಗೆ ಹಾಕುತ್ತಿದ್ದಾರೆ. ಕಸವಿಲ್ಲದ ಒಂದು ರಸ್ತೆಯೂ ನಗರದಲ್ಲಿಲ್ಲ. ಐದು ತಿಂಗಳಿಂದ 20 ಲಕ್ಷ ಫಲಾನುಭವಿಗಳಿಗೆ ಪಿಂಚಣಿಗಳನ್ನು ನೀಡಿಲ್ಲ. ಈ ರೀತಿ ಹಣವೇ ಇಲ್ಲದ ಸ್ಥಿತಿ ಇರುವಾಗ ಜನರಿಂದಲೇ ಹಣ ಲೂಟಿ ಮಾಡುತ್ತಿದ್ದಾರೆ ಎಂದರು.

ನಗರದ ರಸ್ತೆಗಳಲ್ಲಿ ಇನ್ನೂ ಗುಂಡಿಗಳಿವೆ. 7 ಕಿ.ಮೀ. ಉದ್ದದ ರಸ್ತೆಯಲ್ಲಿ 300 ಗುಂಡಿಗಳಿವೆ. ಇದನ್ನು ದುರಸ್ತಿ ಮಾಡಿ ಜನರಿಗೆ ಅನುಕೂಲ ಮಾಡಿಕೊಡಲಿ. ಮನೆ ತೆರಿಗೆ ಸಂಗ್ರಹಿಸಿದ ನಂತರ ಬೇರೆ ಯಾವುದೇ ತೆರಿಗೆ ಹಾಕಬಾರದು. ಇತ್ತೀಚೆಗೆ ಫ್ಲ್ಯಾಟ್‌ಗಳಿಗೆ 40 ರೂ. ಇದ್ದ ಕಸದ ಶುಲ್ಕವನ್ನು 400 ರೂ. ಗೆ ಏರಿಸಿದ್ದಾರೆ. ಈಗ ಹೊಸ ಟೆಂಡರ್‌ ಕೂಡ ಮಾಡಿದ್ದಾರೆ. ಇದು ಸರ್ಕಾರವೇ ಮಾಡುತ್ತಿರುವ ದರೋಡೆಯಾಗಿದೆ. ಜಿಬಿಎ ಚುನಾವಣೆ ಬಂದರೆ ಕಾಂಗ್ರೆಸ್‌ನಿಂದ ಸ್ವಾತಂತ್ರ್ಯ ಎಂಬ ತೀರ್ಪನ್ನು ಜನರು ನೀಡುತ್ತಾರೆ ಎಂದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular