ಬೆಂಗಳೂರು: ಜನಾರ್ದನ ರೆಡ್ಡಿ ಬಳ್ಳಾರಿಗೆ ಕಾಲಿಡೋವರೆಗೂ ಒಂದೇ ಒಂದು ಗಲಾಟೆ ಇರಲಿಲ್ಲ. ಸಣ್ಣ ಅಹಿತಕರ ಘಟನೆಯೂ ಆಗಿರಲಿಲ್ಲ. ಸಣ್ಣ ಎಫ್ಐಆರ್ ಇರಲಿಲ್ಲ. ಅವರು ಬಂದಮೇಲೆ ಗಲಭೆ ಆಗಿದೆ. ಹೀಗಾಗಿ ಅವರಿಗೆ ಮಾತನಾಡುವ ಹಕ್ಕಿಲ್ಲ. ಕಾಂಗ್ರೆಸ್ ಪಕ್ಷ ಶಾಸಕ ಭರತ್ ರೆಡ್ಡಿ ಬೆನ್ನಿಗೆ ನಿಲ್ಲಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ನಾವು ನಮ್ಮ ಕಾರ್ಯಕರ್ತನನ್ನು ಕಳೆದುಕೊಂಡಿದ್ದೇವೆ. ಇದಕ್ಕೆ ಕಾರಣ ಯಾರು ಎಂಬುದು ತನಿಖೆಯಿಂದ ಹೊರಬರಲಿದ್ದು, ಕಾನೂನು ತನ್ನ ಕ್ರಮ ಕೈಗೊಳ್ಳಲಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತದೆ ಎಂದರು.
ಮೊದಲ ಬಾರಿಗೆ ಬಳ್ಳಾರಿಯಲ್ಲಿ ನಮ್ಮ ಸರ್ಕಾರ ವಾಲ್ಮೀಕಿ ಮಹರ್ಷಿಯವರ ಪುತ್ಥಳಿ ನಿರ್ಮಿಸುತ್ತಿದೆ. ನಮ್ಮ ಶಾಸಕರು ಅದರ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ನಗರದ ಎಲ್ಲೆಡೆ ಅದರ ಪೋಸ್ಟರ್ ಗಳನ್ನು ಹಾಕಿದ್ದಾರೆ. ಅದರಲ್ಲಿ ತಪ್ಪೇನಿದೆ? ನಮ್ಮ ಮನೆ ಮುಂದೆಯೂ ಬಿಜೆಪಿಯವರು ಪೋಸ್ಟರ್ ಹಾಕುತ್ತಿರುತ್ತಾರೆ. ಅದನ್ನು ನಾನು ಬೇಡ ಎನ್ನಲು ಸಾಧ್ಯವೇ? ಈ ಪೋಸ್ಟರ್ ಹಾಕುವುದರಿಂದ ಬಿಜೆಪಿಯವರಿಗೆ ಆಗಿರುವ ತೊಂದರೆ ಆದರೂ ಏನು? ಅವರು ಸರ್ಕಾರಿ ಜಾಗದಲ್ಲಿ ಹಾಕಿದ್ದಾರೆ? ಇದರಲ್ಲಿ ರೆಡ್ಡಿ ಜಗಳಕ್ಕೆ ಬರುವ ಅಗತ್ಯವೇನಿತ್ತು. ನಾವು ನಮ್ಮ ಕಾರ್ಯಕರ್ತನನ್ನು ಕಳೆದುಕೊಂಡಿದ್ದೇವೆ. ಇದಕ್ಕೆ ಕಾರಣ ಬಿಜೆಪಿಯವರು. ಈ ಪ್ರಕರಣದ ತನಿಖೆ ನಡೆಯುತ್ತಿದ್ದು, ಈ ಬಗ್ಗೆ ಸಿಎಂ, ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಮಾತನಾಡಿದ್ದಾರೆ. ಪೊಲೀಸರ ತನಿಖೆಯಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ ಎಂದರು.
ಪಕ್ಷದ ವತಿಯಿಂದ ಈ ಘಟನೆ ಬಗ್ಗೆ ಅಧ್ಯಯನ ನಡೆಸಲು ಹೆಚ್.ಎಂ. ರೇವಣ್ಣ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ನಿಯೋಗ ಕಳುಹಿಸಿದ್ದೇವೆ. ಬಿಜೆಪಿಯವರಿಗೆ ಬಳ್ಳಾರಿಯಲ್ಲಿ ನಮ್ಮ ಪಕ್ಷದ ಗೆಲುವು ಅರಗಿಸಿಕೊಳ್ಳಲು ಆಗುತ್ತಿಲ್ಲ. ಸೋತ ನಂತರ ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಅವರು ತಬ್ಬಾಡುತ್ತಿದ್ದಾರೆ. ಅವರ ನಡುವೆ ಏನೇನೂ, ಎಷ್ಟಿದೆ ಎಂಬುದು ಗೊತ್ತಿದೆ. ಮತ್ತೆ ಬಳ್ಳಾರಿಯಲ್ಲಿ ತಮ್ಮ ರಿಪಬ್ಲಿಕ್ ತರಲು ಪ್ರಯತ್ನಿಸುತ್ತಿದ್ದಾರೆ. ನಾವು ಅದಕ್ಕೆ ಅವಕಾಶ ನೀಡುವುದಿಲ್ಲ. ನಮ್ಮ ಕಾರ್ಯಕರ್ತರಿಗೆ ನಮ್ಮ ಸಿಎಂ ಈಗಾಗಲೇ ನಿರ್ದೇಶನ ನೀಡಿದ್ದಾರೆ. ಜನಾರ್ದನ ರೆಡ್ಡಿ ಅವರು ಅಲ್ಲಿಗೆ ಬರುವವರೆಗೂ ಅಲ್ಲಿ ಒಂದೇ ಒಂದು ಗಲಾಟೆ ನಡೆದಿರಲಿಲ್ಲ ಎಂದು ಹೇಳಿದರು.
ಈ ಪ್ರಕರಣದ ಬೆನ್ನಲ್ಲೇ ಎಲ್ಲಾ ಖಾಸಗಿ ಗನ್ ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಗನ್ ವಿತರಣೆ ವಿಚಾರದಲ್ಲಿ ಕೈಗೊಳ್ಳಬೇಕಾಗಿರುವ ಕ್ರಮಗಳನ್ನು ಸಿದ್ಧಪಡಿಸಿ, ನಿಯಮಾವಳಿ ರೂಪಿಸುತ್ತೇವೆ ಎಂದರು.
ನನ್ನ ಹತ್ಯೆಗೆ ಸಂಚು ರೂಪಿಸಿದ್ದರು ಎಂಬ ಶಾಸಕ ಜನಾರ್ದನ ರೆಡ್ಡಿ ಆರೋಪ ವಿಚಾರವಾಗಿ ಮಾತನಾಡಿದ ಡಿಸಿಎಂ, ಅವರು ಡ್ರಾಮಾ ಮಾಸ್ಟರ್. ಅವರು ಮೊದಲೇ ಸಿನಿಮಾ ನಿರ್ಮಾಪಕರಲ್ಲವೇ? ಡ್ರಾಮಾ ಮಾಡುತ್ತಾರೆ. ಕೋಟೆ ನಿರ್ಮಿಸಿಕೊಂಡು ನೂರು ಜನ ಭದ್ರತಾ ಸಿಬ್ಬಂದಿ ಹೊಂದಿರುವವರನ್ನು ಯಾರು ಹತ್ಯೆ ಮಾಡುತ್ತಾರೆ? ಎಂದು ಪ್ರಶ್ನಿಸಿದರು. ಜನರಿಗೆ ಬೇರೆಯದೇ ರೀತಿಯ ಭಯವಿದೆ. ಜನಾರ್ಧನ ರೆಡ್ಡಿ ಅವರ ಕುಟುಂಬದವರಿಗೆ ಸೋಲು ಅರಗಿಸಿಕೊಳ್ಳಲು ಆಗುತ್ತಿಲ್ಲ. ಅದಕ್ಕೆ ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದರು.
ಎಸ್ಪಿ ಸೇರಿದಂತೆ ಅಧಿಕಾರಿಗಳ ವರ್ಗಾವಣೆ ವಿಚಾರವಾಗಿ, ನನಗೆ ಈ ಘಟನೆ ತಿಳಿದ ತಕ್ಷಣೆ ಎಸ್ಪಿ ಜೊತೆ ಮಾತನಾಡಿದ್ದೇನೆ. ಎಸ್ಪಿ ಯಾವ ಪರಿಸ್ಥಿತಿಯಲ್ಲಿ ಮಾತನಾಡಿದರು ಎಂಬುದು ನನ್ನ ಅನುಭವಕ್ಕೇ ಬಂದಿದೆ. ಅವರು ಏನು ಉತ್ತರ ನೀಡಿದ್ದಾರೆ ಎಂಬುದು ಗೊತ್ತಿದೆ. ಈ ಹಿಂದೆ ಇದ್ದ ಎಸ್ಪಿ, ಐಜಿ ಮತ್ತು ಶಾಸಕರ ಜತೆಗೂ ಮಾತನಾಡಿದ್ದೇನೆ. ಬೇರೆ ನಾಯಕರ ಜತೆಗೂ ಮಾತನಾಡಿದ್ದೇನೆ. ಶ್ರೀರಾಮುಲು ಕೂಡ ನನಗೆ ಕರೆ ಮಾಡಿ ಈ ಘಟನೆ ಬಗ್ಗೆ ಮಾಹಿತಿ ನೀಡಿದ್ದರು. ನಾನು ತಕ್ಷಣವೇ ಪೊಲೀಸರಿಗೆ ಎಚ್ಚರಿಸಿದ್ದೇನೆ. ಇಲ್ಲಿ ರಾಜಕೀಯ ಮುಖ್ಯವಲ್ಲ. ಶಾಂತಿ ನೆಲೆಸುವುದು ಬಹಳ ಮುಖ್ಯ. ಬಳ್ಳಾರಿಯ ಜನ ನೆಮ್ಮದಿಯ ವಾತಾವರಣ ನಿರ್ಮಾಣವಾಗುತ್ತಿದೆ ಎಂದುಕೊಂಡಿದ್ದರು. ನಮಗೆ ಅದು ಮುಖ್ಯ. ಪಕ್ಷದ ಅಧ್ಯಕ್ಷನಾಗಿ ನನಗೆ ನನ್ನದೇ ಆದ ಜವಾಬ್ದಾರಿ ಇದೆ ಎಂದು ತಿಳಿಸಿದರು.

