ಇಂಡಿಯನ್ ಪ್ರೀಮಿಯರ್ ಲೀಗ್ 2026 ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಮಾರ್ಚ್ 28ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ಉದ್ಘಾಟನಾ ಪಂದ್ಯದ ಮೂಲಕ ಟೂರ್ನಿಗೆ ಚಾಲನೆ ದೊರಕಲಿದೆ.
ಇನ್ನು ಟೂರ್ನಿಗೆ ಸಮೀಪಿಸುತ್ತಿದ್ದಂತೆ ಎಲ್ಲ ಫ್ರಾಂಚೈಸಿಗಳು ತಮ್ಮ ತಂಡಗಳ ಜರ್ಸಿಗಳನ್ನು ವಿಭಿನ್ನವಾಗಿ ಆನ್ಲೈನ್ ಮೂಲಕ ಲಾಂಚ್ ಮಾಡತೊಡಗಿವೆ. ಅತ್ತ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಿನ್ನೆ ( ಮಾರ್ಚ್ 22 ) ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ‘ರೋರ್ 2026’ ಎನ್ನುವ ಕಾರ್ಯಕ್ರಮವನ್ನು ಅಭಿಮಾನಿಗಳಿಗೋಸ್ಕರ ಆಯೋಜಿಸಿ ಗಮನ ಸೆಳೆದಿದೆ.
ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಐಪಿಎಲ್ ಇತಿಹಾಸದಲ್ಲಿ ಸಿಎಸ್ಕೆ ಪರ ಕಣಕ್ಕಿಳಿದ ಹಲವು ಆಟಗಾರರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಕ್ರೀಡಾಂಗಣದಲ್ಲಿ ಕೆಲ ಎಸೆತಗಳ ಆಟವನ್ನಾಡಿ ರಂಜಿಸಿದರು.
ಇನ್ನು ಈ ಕಾರ್ಯಕ್ರಮದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಆರಂಭವಾಗುತ್ತಿದ್ದಂತೆಯೇ ಕೆಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ಸಿಎಸ್ಕೆ ‘ಆರ್ಸಿಬಿ ಅನ್ಬಾಕ್ಸ್ ಈವೆಂಟ್’ ಕಾಪಿ ಮಾಡಿದೆ ಎಂದು ಆರೋಪಿಸಿ ಟ್ರೋಲ್ ಮಾಡಿದ್ದಾರೆ. ಅಲ್ಲದೇ ಕಾಪಿ ಮಾಡಿ ಕಾರ್ಯಕ್ರಮ ಆಯೋಜಿಸಿದರೂ ಆರ್ಸಿಬಿಯ ಹಾಗೆ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳು ನೆರೆದಿಲ್ಲ ಎಂದು ಕಾಲೆಳೆದಿದ್ದರು.
ಆದರೆ ಈ ಟ್ರೋಲ್ಗಳಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಗಳು ಸಿಎಸ್ಕೆ ಫ್ರಾಂಚೈಸಿ ಈ ಕಾರ್ಯಕ್ರಮದಲ್ಲಿ ತಾವು ಗೆದ್ದಿರುವ ಎಲ್ಲ ಟ್ರೋಫಿಗಳನ್ನು ಮೈದಾನಕ್ಕೆ ತಂದು ಇಡುವ ಮೂಲಕ ತಮ್ಮ ಬಳಿ 7 ಟ್ರೋಫಿಗಳಿವೆ ಎಂದು ಕಾರ್ಯಕ್ರಮ ಕಾಪಿ ಟ್ರೋಲ್ ಮಾಡಿದ ಆರ್ಸಿಬಿ ಅಭಿಮಾನಿಗಳಿಗೆ ಭರ್ಜರಿ ಕೌಂಟರ್ ಕೊಟ್ಟಿದೆ ಎಂದು ಬರೆದುಕೊಂಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ ವಿವಿಧ ಆಟಗಾರರು ಐಪಿಎಲ್ 2010ರ ಟ್ರೋಫಿ, 2010ರ ಚಾಂಪಿಯನ್ಸ್ ಲೀಗ್ ಟ್ರೋಫಿ, 2011ರ ಐಪಿಎಲ್ ಟ್ರೋಫಿ, 2014ರ ಚಾಂಪಿಯನ್ಸ್ ಲೀಗ್ ಟ್ರೋಫಿ, 2018ರ ಐಪಿಎಲ್ ಟ್ರೋಫಿ, 2021ರ ಐಪಿಎಲ್ ಟ್ರೋಫಿ ಹಾಗೂ 2023ರ ಐಪಿಎಲ್ ಟ್ರೋಫಿಗಳನ್ನು ಮೈದಾನದ ಮಧ್ಯಕ್ಕೆ ತಂದಿಟ್ಟು ತಾವು ಗೆದ್ದಿರುವ 7 ಟ್ರೋಫಿಗಳನ್ನು ಅಭಿಮಾನಿಗಳಿಗೆ ಪ್ರದರ್ಶಿಸಿದ್ದಾರೆ.

