ಬೆಂಗಳೂರು : ನಿಮ್ಮ ಮೊಬೈಲ್ ಫೋನ್ ಪಾಸ್ವರ್ಡ್ ಅಥವಾ ಪಿನ್ ನಂಬರ್ ಅನ್ನು ಆತ್ಮೀಯ ಸ್ನೇಹಿತರಿಗಾದರೂ ನೀಡುವ ಮುನ್ನ ಒಮ್ಮೆ ಯೋಚಿಸಿ. ಏಕೆಂದರೆ, ಬೆಂಗಳೂರಿನಲ್ಲಿ ಸ್ನೇಹಿತನ ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡ ಯುವಕನೊಬ್ಬ, ಅವನ ಮೊಬೈಲ್ ಬಳಸಿ ಬರೋಬ್ಬರಿ 4.5 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಶಾಪಿಂಗ್ ಮಾಡಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ನಡೆದಿದ್ದೇನು ?: ಬೆಂಗಳೂರಿನ ಕೋರಮಂಗಲದಲ್ಲಿ ಈ ಘಟನೆ ನಡೆದಿದೆ. ಆರೋಪಿ ನವೀನ್ ವೆಮುಲ ತನ್ನ ಸ್ನೇಹಿತ ಚಿಂತನ್ ಅರೋರಾನ ಮೊಬೈಲ್ ಫೋನ್ ಪಾಸ್ವರ್ಡ್ ತಿಳಿದುಕೊಂಡಿದ್ದ. ಸ್ನೇಹಿತನಿಗೆ ತಿಳಿಯದಂತೆ ಅವನ ಮೊಬೈಲ್ನಲ್ಲಿರುವ ಇ-ಕಾಮರ್ಸ್ ಆಪ್ ಮತ್ತು ಕ್ರೆಡಿಟ್ ಕಾರ್ಡ್ ವಿವರಗಳನ್ನು ಬಳಸಿ ಸರಣಿ ಶಾಪಿಂಗ್ ಮಾಡಿದ್ದಾನೆ. ಈ ಮೂಲಕ ದುಬಾರಿ ಐಫೋನ್ಗಳು, ಸ್ಮಾರ್ಟ್ ವಾಚ್ಗಳು ಮತ್ತು ಇತರ ಐಷಾರಾಮಿ ವಸ್ತುಗಳನ್ನು ಆರ್ಡರ್ ಮಾಡಿದ್ದಾನೆ.
ಸ್ನೇಹಿತನ ಬ್ಯಾಂಕ್ ಖಾತೆಯಿಂದ ಹಣ ಕಟ್ ಆದ ಸಂದೇಶಗಳು ಬಂದಾಗ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ. ತಕ್ಷಣ ಸಂತ್ರಸ್ತ ಯುವಕ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಸಿದಾಗ ಈ ಕೃತ್ಯ ಎಸಗಿದ್ದು ಮತ್ಯಾರೋ ಅಲ್ಲ, ತನ್ನದೇ ಆಪ್ತ ಗೆಳೆಯ ಎಂಬುದು ತಿಳಿದು ಶಾಕ್ ಆಗಿದ್ದಾನೆ.
ಇಬ್ಬರು ಸ್ನೇಹಿತರು ಬೆಂಗಳೂರಿನ ಕೋರಮಂಗಲದ ಕೆ ಹೆಚ್ ಬಿ ಎ ಕಾಲೋನಿಯಲ್ಲಿ ಬಾಡಿಗೆ ರೂಮ್ ನಲ್ಲಿ ವಾಸವಾಗಿದ್ದರು. ಇಬ್ಬರು ಕೂಡ ಆತ್ಮೀಯ ಸ್ನೇಹಿತರಾಗಿದ್ದರಿಂದ ಪಾಸ್ ವರ್ಡ್ ಗಳನ್ನು ಹಂಚಿಕೊಂಡಿದ್ದರು. ನವೀನ್ ಬರೋಬ್ಬರಿ 4,45,870 ರೂ ಹಣ ಖರ್ಚು ಮಾಡಿ ಹಲವು ವಸ್ತುಗಳನ್ನು ಆರ್ಡರ್ ಮಾಡಿದ್ದಾನೆ ಅಲ್ಲದೇ ಹಲವು ಖಾತೆಗೆ ಹಣ ವರ್ಗಾವಣೆ ಮಾಡಿದ್ದಾನೆ. ಸದ್ಯ ಚಿಂತನ್ ಕೋರಮಂಗಲ ಪೊಲೀಸರಿಗೆ ದೂರು ನೀಡಿದ್ದಾನೆ.

