ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷವು “ಆತಂಕಕಾರಿ” ಮತ್ತು “ಕಳವಳಕಾರಿ” ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಈ ಯುದ್ಧವು ಭಾರತದ ಆರ್ಥಿಕತೆ, ರಾಷ್ಟ್ರೀಯ ಭದ್ರತೆ ಮತ್ತು ಮಾನವೀಯತೆಯ ಮೇಲೆ ಗಂಭೀರ ಸವಾಲುಗಳನ್ನು ಒಡ್ಡಿದೆ ಎಂದು ಲೋಕಸಭೆಯಲ್ಲಿ ಸೋಮವಾರ ತಿಳಿಸಿದ್ದಾರೆ.
ಪಶ್ಚಿಮ ಏಷ್ಯಾ ಪ್ರದೇಶವು ಭಾರತದ ಕಚ್ಚಾ ತೈಲ ಮತ್ತು ಅನಿಲ ಪೂರೈಕೆಯ ಪ್ರಮುಖ ಮೂಲವಾಗಿದೆ. “ಹಾರ್ಮುಜ್ ಜಲಸಂಧಿಯ (Strait of Hormuz) ಮೂಲಕ ಹಡಗುಗಳ ಸಂಚಾರ ಕಷ್ಟಕರವಾಗಿದೆ. ಇದು ಕಚ್ಚಾ ತೈಲ ಮತ್ತು ರಸಗೊಬ್ಬರಗಳ ಆಮದಿನ ಮೇಲೆ ಪರಿಣಾಮ ಬೀರಿದೆ. ಹಡಗು ಮಾರ್ಗಗಳ ಮೇಲೆ ನಾವು ತೀವ್ರ ನಿಗಾ ಇಟ್ಟಿದ್ದೇವೆ” ಎಂದು ಪ್ರಧಾನಿ ಹೇಳಿದರು.
ಗಲ್ಫ್ ದೇಶಗಳಲ್ಲಿ ಸುಮಾರು ಒಂದು ಕೋಟಿ ಭಾರತೀಯರು ವಾಸಿಸುತ್ತಿದ್ದಾರೆ. ಅವರ ಸುರಕ್ಷತೆಯೇ ಸರ್ಕಾರದ ಮೊದಲ ಆದ್ಯತೆ ಎಂದು ಮೋದಿ ತಿಳಿಸಿದರು. “ಯುದ್ಧ ಆರಂಭವಾದಾಗಿನಿಂದ ಇದುವರೆಗೆ 3,75,000ಕ್ಕೂ ಹೆಚ್ಚು ಭಾರತೀಯರು ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಿದ್ದಾರೆ. ಇರಾನ್‌ನಿಂದಲೇ ಸುಮಾರು 1,000 ಭಾರತೀಯರು ಮರಳಿದ್ದು, ಅದರಲ್ಲಿ 700ಕ್ಕೂ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳಿದ್ದಾರೆ” ಎಂದು ಅವರು ಮಾಹಿತಿ ನೀಡಿದರು.
ಈ ಯುದ್ಧವು ಕೇವಲ ಒಂದು ಪ್ರದೇಶಕ್ಕೆ ಸೀಮಿತವಾಗಿಲ್ಲ, ಇದು ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದೆ. “ಕಳೆದ ಮೂರು ವಾರಗಳಿಂದ ಈ ಸಂಘರ್ಷ ನಡೆಯುತ್ತಿದೆ. ಅಗತ್ಯ ವಸ್ತುಗಳ ಲಭ್ಯತೆ, ಇಂಧನ ಮತ್ತು ಆಹಾರ ಭದ್ರತೆಯ ಮೇಲೆ ಇದು ಪರಿಣಾಮ ಬೀರದಂತೆ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ” ಎಂದು ಮೋದಿ ವಿವರಿಸಿದರು.
ಬಾಧಿತ ಪ್ರದೇಶಗಳಲ್ಲಿರುವ ಭಾರತೀಯರಿಗೆ ಸಹಾಯ ಮಾಡಲು ಭಾರತ ಮತ್ತು ವಿದೇಶಗಳಲ್ಲಿ 24×7 ನಿಯಂತ್ರಣ ಕೊಠಡಿಗಳು ಮತ್ತು ತುರ್ತು ಸಹಾಯವಾಣಿಗಳನ್ನು ಸ್ಥಾಪಿಸಲಾಗಿದೆ. ಪ್ರಧಾನಿಯವರು ಸ್ವತಃ ಹಲವಾರು ಪಶ್ಚಿಮ ಏಷ್ಯಾ ರಾಷ್ಟ್ರಗಳ ಮುಖ್ಯಸ್ಥರೊಂದಿಗೆ ಮಾತನಾಡಿ ಭಾರತೀಯರ ಸುರಕ್ಷತೆಯನ್ನು ಖಚಿತಪಡಿಸಿಕೊಂಡಿದ್ದಾರೆ.ಕೃಷಿ, ರಸಗೊಬ್ಬರ, ಪೆಟ್ರೋಲಿಯಂ, ವಿದ್ಯುತ್ ಮತ್ತು MSME ವಲಯಗಳ ಮೇಲೆ ಯುದ್ಧದ ಪರಿಣಾಮವನ್ನು ಸರ್ಕಾರ ವಿವರವಾಗಿ ಪರಿಶೀಲಿಸಿದೆ. ಮುಂಬರುವ ಮುಂಗಾರು ಹಂಗಾಮಿಗೆ ರಸಗೊಬ್ಬರ ಲಭ್ಯತೆ ಮತ್ತು ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ದಾಸ್ತಾನು ಖಚಿತಪಡಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಈ ಯುದ್ಧವು ಭಾರತಕ್ಕೆ ಅನಿರೀಕ್ಷಿತ ಸವಾಲುಗಳನ್ನು ಸೃಷ್ಟಿಸಿದೆ. ಆದ್ದರಿಂದ, ಈ ಬಿಕ್ಕಟ್ಟಿನ ಬಗ್ಗೆ ಸಂಸತ್ತಿನಿಂದ ಜಗತ್ತಿಗೆ ಏಕೀಕೃತ ಧ್ವನಿ ಮತ್ತು ಒಮ್ಮತದ ಸಂದೇಶ ಹೋಗುವುದು ಅತ್ಯಗತ್ಯ ಎಂದಿದ್ದಾರೆ.
ಅಗತ್ಯ ವಸ್ತುಗಳ ಕಾಳಸಂತೆ ಮತ್ತು ದಾಸ್ತಾನು ತಡೆಯಲು ಪ್ರಧಾನಿ ಮೋದಿ ಅವರು ಸರ್ಕಾರಿ ಇಲಾಖೆಗಳು ಮತ್ತು ರಾಜ್ಯಗಳ ನಡುವೆ ಸಮನ್ವಯದ ಅಗತ್ಯವನ್ನು ಒತ್ತಿ ಹೇಳಿದರು.
“ಈ ಸಂಘರ್ಷವು ಕ್ಷಣಕ್ಷಣಕ್ಕೂ ಬದಲಾಗುತ್ತಿರುವ ಪರಿಸ್ಥಿತಿಯಾಗಿದೆ ಮತ್ತು ಇಡೀ ಜಗತ್ತು ಯಾವುದೋ ಒಂದು ರೂಪದಲ್ಲಿ ಇದರಿಂದ ಪ್ರಭಾವಿತವಾಗಿದೆ. ಇಂತಹ ಸಂದರ್ಭದಲ್ಲಿ, ಈ ಸಂಘರ್ಷದ ಪರಿಣಾಮಗಳಿಂದ ನಾಗರಿಕರನ್ನು ರಕ್ಷಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಬೇಕು,” ಎಂದು ಪ್ರಧಾನಿ ಮೋದಿ ತಿಳಿಸಿದರು.

