ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿ ಕ್ರೀಡಾಭಿಮಾನಿಗಳು ಬೆಚ್ಚಿಬೀಳುವಂತಹ ಘಟನೆಯೊಂದು ನಡೆದಿದೆ. ಸ್ಥಳೀಯ ಕ್ರಿಕೆಟ್ ಪಂದ್ಯವೊಂದು ನಡೆಯುತ್ತಿದ್ದಾಗಲೇ ಪ್ರವೀಣ್ ಪವಾರ್ ಎಂಬ ಆಟಗಾರ ಹೃದಯಾಘಾತದಿಂದ ಪಿಚ್ ಮೇಲೆಯೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಈ ಘಟನೆಯ ದೃಶ್ಯಗಳು ನೇರ ಪ್ರಸಾರವಾಗುತ್ತಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆತಂಕ ಮೂಡಿಸಿವೆ.
ರತ್ನಗಿರಿಯ ಚಿಂಚಖಾರಿ ಎಂಬಲ್ಲಿ ಪಂದ್ಯ ನಡೆಯುತ್ತಿದ್ದಾಗ ಈ ದುರಂತ ಸಂಭವಿಸಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಪ್ರವೀಣ್ ಪವಾರ್ ಅವರು ಪಂದ್ಯದ ವೇಳೆ ಅತ್ಯಂತ ಸಕ್ರಿಯರಾಗಿದ್ದರು. ಅಂಪೈರ್ ಬಳಿ ನಿಂತಿದ್ದ ಅವರು ಇದ್ದಕ್ಕಿದ್ದಂತೆ ಯಾವುದೇ ಮುನ್ಸೂಚನೆ ಇಲ್ಲದೆ ಮೈದಾನದಲ್ಲಿ ಕುಸಿದು ಬಿದ್ದರು. ಮೊದಮೊದಲು ಆತ ತಲೆತಿರುಗಿ ಬಿದ್ದಿರಬಹುದು ಎಂದು ಸಹ ಆಟಗಾರರು ಭಾವಿಸಿದ್ದರು. ಆದರೆ ಅವರು ಎದ್ದೇಳದಿದ್ದಾಗ ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತು. ದುರದೃಷ್ಟವಶಾತ್ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಪ್ರವೀಣ್ ಪವಾರ್ ರತ್ನಗಿರಿಯ ಸ್ಥಳೀಯ ಕ್ರಿಕೆಟ್ ವಲಯದಲ್ಲಿ ಚಿರಪರಿಚಿತ ಹೆಸರಾಗಿತ್ತು. ಹಲವು ವರ್ಷಗಳಿಂದ ಕ್ರಿಕೆಟ್‌ನಲ್ಲಿ ತೊಡಗಿಸಿಕೊಂಡಿದ್ದ ಅವರ ಅಕಾಲಿಕ ಸಾವು ಕ್ರೀಡಾ ಪ್ರೇಮಿಗಳನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಇತ್ತೀಚಿನ ದಿನಗಳಲ್ಲಿ ದೈಹಿಕವಾಗಿ ಸದೃಢವಾಗಿರುವ ಕ್ರೀಡಾಪಟುಗಳು ಕೂಡ ಈ ರೀತಿ ಹಠಾತ್ ಹೃದಯಾಘಾತಕ್ಕೆ ತುತ್ತಾಗುತ್ತಿರುವುದು ಗಂಭೀರ ಆತಂಕಕ್ಕೆ ಕಾರಣವಾಗಿದೆ.

