ಉಡುಪಿ: ಪೊಲೀಸರ ಮೇಲೆ ವಾಹನ ಹತ್ತಿಸಲು ಯತ್ನಿಸಿದ್ದ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಐವರು ಆರೋಪಿಗಳನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.
ಕಾರ್ಕಳ ಹಾಗೂ ಶಿರ್ವ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಹಂಚಿಕಟ್ಟೆ ಸಮೀಪದ ಹೋಂಡಾ ಶೋರೂಮ್ ಬಳಿ ಪೊಲೀಸರ ಮೇಲೆ ಆರೋಪಿಗಳು ದಾಳಿಗೆ ಮುಂದಾಗಿದ್ದರು.
ಕಾರ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಪ್ರಸನ್ನ ಎಂ.ಎಸ್. ಮತ್ತು ಅವರ ತಂಡ ಬಂಗ್ಲೆಗುಡ್ಡೆ ವೃತ್ತದಿಂದ ಬರುತ್ತಿದ್ದ ಕಪ್ಪು ಕಾರನ್ನು ತಡೆದು ಪರಿಶೀಲಿಸಲು ಮುಂದಾದಾಗ ಕಾರಿನಲ್ಲಿದ್ದವರು ವಾಹನವನ್ನು ನಿಲ್ಲಿಸುವ ಬದಲು, ಪೊಲೀಸ್ ಸಿಬ್ಬಂದಿಯ ಮೇಲೆಯೇ ದಾಳಿ ಮಾಡಲು ಯತ್ನಿಸಿದ್ದಾರೆ. ಆರೋಪಿಗಳು ವಾಹನವನ್ನು ಪೊಲೀಸರ ಮೇಲೆ ಹರಿಸಲು ಪ್ರಯತ್ನಿಸಿ, ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿರ್ವ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಮಂಜುನಾಥ ಮರಬಾಡ ಅವರ ತಂಡಕ್ಕೆ ಅದೇ ಕಾರು ಸಂಶಯಾಸ್ಪದವಾಗಿ ಬೆಳ್ಮಣ್ದಿಂದ ಬರುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ವಾಹನವನ್ನು ತಡೆದಾಗ ಚಾಲಕ ಮೊದಲು ವೇಗ ಕಡಿಮೆ ಮಾಡಿದರೂ, ಬಳಿಕ ಪೊಲೀಸ್ ಅಧಿಕಾರಿಯನ್ನು ತಳ್ಳಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ ಬಳಿಕ ಶಿರ್ವ ಪಟ್ಟಣದಲ್ಲಿ ಪೊಲೀಸರು ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಈ ವೇಳೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ, ಬಂಧಿತರನ್ನು ನಾಡೂರು ನಿವಾಸಿ ಸುಧರ್ಷನ್ ಶೆಟ್ಟಿ (29), ಹೆರೂರು ನಿವಾಸಿ ಕಾರ್ತವ್ಯ ಶೆಟ್ಟಿ (27), ಮೂಡೂರು ನಿವಾಸಿ ಅರುಣ್ ಶೆಟ್ಟಿ (29), ಹೆಬ್ರಿಯ ಬೆಲಂಜೆ ನಿವಾಸಿ ತೇಜಸ್ (28) ಮತ್ತು ಬೈಂದೂರು ತಾಲೂಕಿನ ಶಿರೂರು ನಿವಾಸಿ ಪ್ರಜ್ವಲ್ ಶೆಟ್ಟಿ (29) ಎಂದು ಗುರುತಿಸಲಾಗಿದೆ.
ಪ್ರಕರಣದ ತನಿಖೆ ವೇಳೆ ಆರೋಪಿಗಳು ಕ್ರಿಕೆಟ್ ಬೆಟ್ಟಿಂಗ್ ಜಾಲದಲ್ಲಿ ಇರುವುದು ಬೆಟ್ಟಿಂಗ್ ನಡೆಸುತ್ತಿರುವ ಬಗ್ಗೆ ಬೆಳಕಿಗೆ ಬಂದಿದೆ.

