ನೀವು ಪ್ರತಿಯೊಂದು ಸಣ್ಣ-ಪುಟ್ಟ ಖರ್ಚಿಗೂ ಕ್ರೆಡಿಟ್ ಕಾರ್ಡ್ ಬಳಸುವ ಅಭ್ಯಾಸ ಹೊಂದಿದ್ದೀರಾ? ಹಾಗಿದ್ದರೆ ಇಂದೇ ಎಚ್ಚೆತ್ತುಕೊಳ್ಳಿ. ‘ಪ್ರಸ್ತಾವಿತ ಆದಾಯ ತೆರಿಗೆ ನಿಯಮಗಳು 2026’ರ ಅಡಿಯಲ್ಲಿ ಏಪ್ರಿಲ್ 1 ರಿಂದ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಹೊಸ ನಿರ್ಬಂಧಗಳು ಮತ್ತು ಮಾರ್ಗಸೂಚಿಗಳು ಜಾರಿಗೆ ಬರಲಿವೆ. ಮುಖ್ಯವಾಗಿ ಭಾರಿ ಮೊತ್ತದ ವಹಿವಾಟು ನಡೆಸುವವರು ಮತ್ತು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವವರು ಈ ಬದಲಾವಣೆಗಳನ್ನು ಗಮನಿಸದಿದ್ದರೆ ತೆರಿಗೆ ಇಲಾಖೆಯಿಂದ ನೋಟಿಸ್ ಎದುರಿಸಬೇಕಾಗಬಹುದು.
ಇಂದಿನ ದಿನಗಳಲ್ಲಿ ಟೀ ಕಪ್ನಿಂದ ಹಿಡಿದು ವಿಮಾನ ಟಿಕೆಟ್’ವರೆಗೆ ಎಲ್ಲದಕ್ಕೂ ಕ್ರೆಡಿಟ್ ಕಾರ್ಡ್ ಬಳಸುವುದು ಸಾಮಾನ್ಯವಾಗಿದೆ. ಆದರೆ ಈ ಬಳಕೆ ಹೆಚ್ಚಾದಂತೆ, ತೆರಿಗೆ ಇಲಾಖೆಯು ತನ್ನ ನಿಗಾವನ್ನು ಬಿಗಿಗೊಳಿಸುತ್ತಿದೆ. ಏಪ್ರಿಲ್ 1 ರಿಂದ ಜಾರಿಗೆ ಬರಲಿರುವ ಕೆಲವು ಪ್ರಮುಖ ಬದಲಾವಣೆಗಳು ಇಲ್ಲಿವೆ:
- ಪಾನ್ ಕಾರ್ಡ್ ಕಡ್ಡಾಯ (PAN Mandatory)
ಇನ್ನು ಮುಂದೆ ಹೊಸ ಕ್ರೆಡಿಟ್ ಕಾರ್ಡ್ಗಾಗಿ ಅರ್ಜಿ ಸಲ್ಲಿಸಬೇಕಾದರೆ ಪಾನ್ (PAN) ಕಾರ್ಡ್ ವಿವರ ನೀಡುವುದು ಕಡ್ಡಾಯ. ಹೊಸ ನಿಯಮದ ಪ್ರಕಾರ, ಪಾನ್ ವಿವರಗಳಿಲ್ಲದೆ ಬ್ಯಾಂಕುಗಳು ಯಾವುದೇ ಅರ್ಜಿಯನ್ನು ಪ್ರಕ್ರಿಯೆಗೊಳಿಸುವುದಿಲ್ಲ. ನಕಲಿ ಖಾತೆಗಳನ್ನು ತಡೆಯಲು ಮತ್ತು ಕ್ರೆಡಿಟ್ ಕಾರ್ಡ್ ವೆಚ್ಚಗಳನ್ನು ತೆರಿಗೆ ವ್ಯವಸ್ಥೆಯೊಂದಿಗೆ ಜೋಡಿಸಲು ಸರ್ಕಾರ ಈ ನಿರ್ಧಾರ ಮಾಡಿದೆ. - ಭಾರಿ ವಹಿವಾಟುಗಳ ಮೇಲೆ ಐಟಿ ಇಲಾಖೆ ನಿಗಾ
ನಿಮ್ಮ ಕ್ರೆಡಿಟ್ ಕಾರ್ಡ್ ವೆಚ್ಚಗಳು ಮಿತಿಗಿಂತ ಹೆಚ್ಚಿದ್ದರೆ, ಬ್ಯಾಂಕುಗಳು ನೇರವಾಗಿ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಲಿವೆ:
• ಆನ್ಲೈನ್/ಸ್ವೈಪ್ ಪಾವತಿ: ಒಂದು ಆರ್ಥಿಕ ವರ್ಷದಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ 10 ಲಕ್ಷ ರೂ. ಅಥವಾ ಅದಕ್ಕಿಂತ ಹೆಚ್ಚಿನ ಡಿಜಿಟಲ್ ವಹಿವಾಟು ನಡೆಸಿದರೆ ಆ ವಿವರ ಇಲಾಖೆಗೆ ರವಾನೆಯಾಗುತ್ತದೆ.
• ನಗದು ಪಾವತಿ: ಕ್ರೆಡಿಟ್ ಕಾರ್ಡ್ ಬಿಲ್ ಅನ್ನು 1 ಲಕ್ಷ ರೂ. ಅಥವಾ ಅದಕ್ಕಿಂತ ಹೆಚ್ಚು ನಗದು (Cash) ರೂಪದಲ್ಲಿ ಪಾವತಿಸಿದರೂ ಐಟಿ ಇಲಾಖೆಗೆ ಮಾಹಿತಿ ಹೋಗುತ್ತದೆ.
• ನಿಮ್ಮ ವಾರ್ಷಿಕ ಆದಾಯಕ್ಕೂ ಮತ್ತು ನೀವು ಮಾಡುವ ಖರ್ಚಿಗೂ ತಾಳೆಯಾಗದಿದ್ದರೆ ತೆರಿಗೆ ಇಲಾಖೆಯಿಂದ ನೋಟಿಸ್ ಬರುವ ಸಾಧ್ಯತೆ ಇರುತ್ತದೆ. - ಕ್ರೆಡಿಟ್ ಕಾರ್ಡ್ ಮೂಲಕವೇ ಆದಾಯ ತೆರಿಗೆ ಪಾವತಿ
ತೆರಿಗೆದಾರರಿಗೆ ಒಂದು ಶುಭ ಸುದ್ದಿ ಏನೆಂದರೆ, ಶೀಘ್ರದಲ್ಲೇ ನಿಮ್ಮ ಆದಾಯ ತೆರಿಗೆಯನ್ನು (Income Tax) ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸುವ ಸೌಲಭ್ಯ ಸಿಗಲಿದೆ. ಪ್ರಸ್ತುತ ನೆಟ್ ಬ್ಯಾಂಕಿಂಗ್ ಅಥವಾ ಡೆಬಿಟ್ ಕಾರ್ಡ್ಗಳಿಗೆ ಸೀಮಿತವಾಗಿರುವ ಈ ಸೌಲಭ್ಯವು ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಹೆಚ್ಚಿನ ಅನುಕೂಲ ನೀಡಲಿದೆ. (ಸೂಚನೆ: ಇದಕ್ಕೆ ಸಂಬಂಧಿಸಿದ ಬಡ್ಡಿ ದರ ಮತ್ತು ಪ್ರೊಸೆಸಿಂಗ್ ಫೀಸ್ ಬಗ್ಗೆ ಗಮನವಿರಲಿ). - ಕಂಪನಿ ಕ್ರೆಡಿಟ್ ಕಾರ್ಡ್ಗಳ ಬಳಕೆ (Corporate Cards)
ಕಂಪನಿಗಳು ಉದ್ಯೋಗಿಗಳಿಗೆ ನೀಡುವ ಕ್ರೆಡಿಟ್ ಕಾರ್ಡ್ಗಳ ನಿಯಮವೂ ಕಠಿಣವಾಗಲಿದೆ. ಆ ಕಾರ್ಡ್ ಮೂಲಕ ಮಾಡುವ ವೆಚ್ಚಗಳನ್ನು ‘ವೈಯಕ್ತಿಕ ಸೌಲಭ್ಯ’ (Perquisites) ಎಂದು ಪರಿಗಣಿಸಿ ತೆರಿಗೆ ವಿಧಿಸುವ ಸಾಧ್ಯತೆ ಇದೆ. ಆದರೆ, ಆ ವೆಚ್ಚವು ಕೇವಲ ಕಂಪನಿಯ ಕೆಲಸಕ್ಕಾಗಿ ಮಾತ್ರ ಮಾಡಿದ್ದು ಎಂದು ಸೂಕ್ತ ದಾಖಲೆ ಅಥವಾ ಸರ್ಟಿಫಿಕೇಟ್ ತೋರಿಸಿದರೆ ತೆರಿಗೆ ವಿನಾಯಿತಿ ಪಡೆಯಬಹುದು. - ವಿಳಾಸದ ಪುರಾವೆಯಾಗಿ ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್
ಪಾನ್ ಕಾರ್ಡ್ಗೆ ಅರ್ಜಿ ಸಲ್ಲಿಸುವವರಿಗೆ ಇದು ಸುಲಭದ ಹಾದಿ. ಕಳೆದ ಮೂರು ತಿಂಗಳ ಅವಧಿಯ ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್ ಅನ್ನು ಅಧಿಕೃತ ವಿಳಾಸದ ಪುರಾವೆಯಾಗಿ (Address Proof) ಬಳಸಲು ಇಲಾಖೆ ಅವಕಾಶ ನೀಡಲಿದೆ.
ಗಮನಿಸಿ: ಈ ನಿಯಮಗಳು ಸದ್ಯಕ್ಕೆ ಕರಡು (Draft) ರೂಪದಲ್ಲಿದ್ದು, ಸಾರ್ವಜನಿಕರ ಅಭಿಪ್ರಾಯದ ನಂತರ ಏಪ್ರಿಲ್ 1 ರಿಂದ ಅಧಿಕೃತವಾಗಿ ಜಾರಿಗೆ ಬರಲಿವೆ. ಆದ್ದರಿಂದ ಕ್ರೆಡಿಟ್ ಕಾರ್ಡ್ ಬಳಸುವಾಗ ಜಾಗರೂಕರಾಗಿರುವುದು ಒಳಿತು.

