ನವದೆಹಲಿ: ರಸ್ತೆ ಅಪಘಾತವಾದಾಗ ಮೊದಲು ಕಾಡುವುದು ಗಾಯದ ನೋವಿಗಿಂತ ‘ಆಸ್ಪತ್ರೆ ಬಿಲ್’ ಎಷ್ಟಾಗುತ್ತೆ ಅನ್ನೋ ಭಯ! ಹಣ ಹೊಂದಿಸುವ ಟೆನ್ಷನ್‌ನಲ್ಲಿ ಎಷ್ಟೋ ಅಮೂಲ್ಯ ಪ್ರಾಣಗಳು ಅರ್ಧ ದಾರಿಯಲ್ಲೇ ಹೋಗಿವೆ. ಆದರೆ ಇನ್ಮುಂದೆ ಆ ಭಯ ಬೇಡ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ‘PM RAHAT’ ಎಂಬ ಕ್ರಾಂತಿಕಾರಿ ‘ಜೀವ ರಕ್ಷಕ’ ಯೋಜನೆಯನ್ನು ಜಾರಿಗೆ ತಂದಿದೆ.
ಅಪಘಾತವಾದಾಗ ನಿಮ್ಮ ಜೇಬಿನಲ್ಲಿ ಹಣವಿಲ್ಲದಿದ್ದರೂ ಪರವಾಗಿಲ್ಲ, ಆಸ್ಪತ್ರೆಗಳು ಚಿಕಿತ್ಸೆ ನೀಡಲೇಬೇಕು! ಈ ಯೋಜನೆಯ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ:
1.₹1.5 ಲಕ್ಷದವರೆಗೆ ಸರ್ಕಾರವೇ ಕಟ್ಟುತ್ತೆ ಬಿಲ್
ಅಪಘಾತ ಸಂಭವಿಸಿದ ತಕ್ಷಣ ಸಂತ್ರಸ್ತರನ್ನು ಆಸ್ಪತ್ರೆಗೆ ದಾಖಲಿಸಿದರೆ, ಗರಿಷ್ಠ ₹1.5 ಲಕ್ಷದವರೆಗೆ ಆಗುವ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಗಾಯಾಳುಗಳ ಕುಟುಂಬದವರು ಆಸ್ಪತ್ರೆಗೆ ನಗದು ಪಾವತಿಸುವ ಕಿರಿಕಿರಿ ಇರುವುದಿಲ್ಲ.
2.ಮೊದಲ 7 ದಿನ ಝೀರೋ ಬಿಲ್ ಗ್ಯಾರಂಟಿ
ಅಪಘಾತವಾದ ದಿನದಿಂದ ಮುಂದಿನ 7 ದಿನಗಳವರೆಗೆ ನೀಡುವ ಎಲ್ಲಾ ತುರ್ತು ಚಿಕಿತ್ಸೆಗಳು (ICU, ತುರ್ತು ಶಸ್ತ್ರಚಿಕಿತ್ಸೆ ಸೇರಿದಂತೆ) ಈ ಯೋಜನೆಯಡಿ ಉಚಿತವಾಗಿ ಸಿಗಲಿವೆ. ಇದು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಸಂಕಷ್ಟದ ಸಮಯದಲ್ಲಿ ಆಸರೆಯಾಗಲಿದೆ.
ಗೋಲ್ಡನ್ ಅವರ್ ಮಿಸ್ ಆಗಲ್ಲ ಪ್ರಾಣ ಹೋಗಲ್ಲ
ಅಪಘಾತವಾದ ಮೊದಲ ಒಂದು ಗಂಟೆಯನ್ನು ಸುವರ್ಣ ಅವಧಿ (Golden Hour) ಎನ್ನಲಾಗುತ್ತದೆ. ಈ ಸಮಯದಲ್ಲಿ ಹಣದ ಕಾರಣಕ್ಕೆ ಚಿಕಿತ್ಸೆ ತಡವಾಗಬಾರದು ಅನ್ನೋದೇ ಸರ್ಕಾರದ ಮಾಸ್ಟರ್ ಪ್ಲಾನ್. ಈಗ ಕ್ಯಾಶ್‌ಲೆಸ್ ಚಿಕಿತ್ಸೆ ಇರುವುದರಿಂದ ಆಸ್ಪತ್ರೆಗಳು ಹಣಕ್ಕಾಗಿ ಕಾಯದೆ ತಕ್ಷಣ ಜೀವ ಉಳಿಸುವ ಕೆಲಸ ಮಾಡಬಹುದು.
112 ಗೆ ಕರೆ ಮಾಡಿ, ಸಹಾಯ ಪಡೆಯಿರಿ
ಅಪಘಾತ ನಡೆದ ತಕ್ಷಣ ಸಾರ್ವಜನಿಕರು ಅಥವಾ ಗುಡ್ ಸಮರಿಟನ್ಸ್ (ಸಹಾಯ ಮಾಡುವವರು) 112 ಗೆ ಕರೆ ಮಾಡಬಹುದು. ಈ ಮೂಲಕ ಹತ್ತಿರದ ಗೊತ್ತುಪಡಿಸಿದ ಆಸ್ಪತ್ರೆ ಮತ್ತು ಆಂಬ್ಯುಲೆನ್ಸ್ ಸೇವೆಯನ್ನು ಕ್ಷಣಾರ್ಧದಲ್ಲಿ ಪಡೆಯಬಹುದು.
ಇದು ಹೇಗೆ ಕೆಲಸ ಮಾಡುತ್ತೆ?
ಯಾರಿಗೆ ಅನ್ವಯ?: ನ್ಯಾಷನಲ್ ಹೈವೇ ಇರಲಿ ಅಥವಾ ಹಳ್ಳಿಯ ರಸ್ತೆ ಇರಲಿ, ಎಲ್ಲರಿಗೂ ಈ ಸೌಲಭ್ಯ ಉಂಟು.
ನೋಂದಣಿ ಬೇಕಿಲ್ಲ: ಇದಕ್ಕಾಗಿ ನೀವು ಮುಂಚಿತವಾಗಿ ಯಾವುದೇ ಅರ್ಜಿ ಹಾಕುವ ಅವಶ್ಯಕತೆ ಇಲ್ಲ.
ಪಾವತಿ ಹೇಗೆ?: ವಿಮೆ ಇದ್ದರೆ ವಿಮಾ ಕಂಪನಿಗಳು, ಇಲ್ಲದಿದ್ದರೆ ಅಥವಾ ‘ಹಿಟ್ ಅಂಡ್ ರನ್’ ಕೇಸ್ ಆಗಿದ್ದರೆ ಕೇಂದ್ರ ಸರ್ಕಾರವೇ ಆಸ್ಪತ್ರೆಗೆ ನೇರವಾಗಿ ಹಣ ಪಾವತಿಸುತ್ತದೆ.
ದೂರು ನೀಡಲು ಅವಕಾಶ: ಒಂದು ವೇಳೆ ಆಸ್ಪತ್ರೆಯವರು ಚಿಕಿತ್ಸೆ ನಿರಾಕರಿಸಿದರೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ದೂರು ಪರಿಹಾರ ಅಧಿಕಾರಿಗೆ ದೂರು ನೀಡಬಹುದು.

