ಬೆಂಗಳೂರು: ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿನ 89.63 ಕೋಟಿ ರೂಪಾಯಿ ಹಗರಣದಲ್ಲಿ ಸಚಿವ ಬಿ. ನಾಗೇಂದ್ರ ಅವರ ಜಾಮೀನು ಷರತ್ತು ಸಡಿಲಿಕೆಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿರಾಕರಿಸಿದೆ.
ಬಹುಕೋಟಿ ಹಣ ದುರ್ಬಳಕೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಲಯ ದಾಖಲಿಸಿರುವ ಪ್ರಕರಣದ ಆರೋಪಿಯಾಗಿರುವ ಸಚಿವ ಬಿ. ನಾಗೇಂದ್ರ ಅವರು ಜಾಮೀನು ಷರತ್ತು ಸಡಿಲಿಕೆ ಮನವಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ.
ನಾಗೇಂದ್ರ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಶಾಸಕರು, ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆ.ಬಿ. ಶಿವಪ್ರಸಾದ್ ಮಂಗಳವಾರ ನಡೆಸಿದ್ದಾರೆ.
ಅರ್ಜಿ ವಿಚಾರಣೆ ವೇಳೆ ನಾಗೇಂದ್ರ ಪರ ವಕೀಲರು, ಅರ್ಜಿದಾರರು ತಮ್ಮ ಪಕ್ಷದ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ತೆರಳಬೇಕಿತ್ತು. ಇದಕ್ಕಾಗಿ ಜಾಮೀನಿನ ಷರತ್ತನ್ನು ಹದಿನೈದು ದಿನಗಳವರೆಗೆ ಸಡಿಲಿಸಿ ಆದೇಶಿಸಬೇಕು ಎಂದು ಮನವಿ ಮಾಡಿದ್ದಾರೆ.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜಾರಿ ನಿರ್ದೇಶನಾಲಯ ಪರ ಹಾಜರಾಗಿದ್ದ ವಿಶೇಷ ಪ್ರಾಸಿಕ್ಯೂಟರ್ ದಿವ್ಯಾ ಆರ್. ಬಾಳೆಹಿತ್ತಲ್ ಅವರು, ಅರ್ಜಿದಾರರು ಯಾವ ಕಾರಣಕ್ಕೆ ದೆಹಲಿಗೆ ಹೋಗಬೇಕು ಎನ್ನುವುದನ್ನು ಸಮರ್ಪಕವಾಗಿ ತಿಳಿಸಿಲ್ಲ. ಕಾರಣದ ಬಗ್ಗೆ ಸೂಕ್ತ ದಾಖಲೆಗಳನ್ನು ನ್ಯಾಯಾಲಯಕ್ಕೆ ಒದಗಿಸಿಲ್ಲ. ಅವರು ಇ.ಡಿ. ವಿಚಾರಣೆಗೆ ಸರಿಯಾಗಿ ಸಹಕರಿಸುತ್ತಿಲ್ಲ. ಹೀಗಾಗಿ ಅವರ ಮನವಿಯನ್ನು ಮಾನ್ಯ ಮಾಡಬಾರದು ಎಂದು ಕೋರಿದ್ದಾರೆ.
ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಧೀಶರು, ಸಚಿವ ನಾಗೇಂದ್ರ ಅವರ ಅರ್ಜಿಯನ್ನು ತಿರಸ್ಕರಿಸಿ ಆಗಸ್ಟ್ 7ಕ್ಕೆ ವಿಚಾರಣೆ ಮುಂದೊಡಿದ್ದಾರೆ. ಜಾಮೀನು ಮಂಜೂರು ಮಾಡುವ ಸಂದರ್ಭದಲ್ಲಿ ಆರೋಪಿಯು ನ್ಯಾಯಾಲಯದ ಪ್ರದೇಶ ವ್ಯಾಪ್ತಿ ಬಿಟ್ಟು ಹೊರಗೆ ಹೋಗಬಾರದು ಎಂದು ಷರತ್ತು ವಿಧಿಸಲಾಗಿತ್ತು. ಇದೀಗ ಜಾಮೀನು ಷರತ್ತು ಸಡಿಲಿಕೆಗೆ ನ್ಯಾಯಾಲಯ ನಿರಾಕರಿಸಿದೆ.

