2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತಾಪಮಾನ ಏರಿಕೆಯಿಂದ ಹತ್ತಿ ಬೆಳೆಯಲ್ಲಿ ಕೆಂಪು ರೋಗದ ಉಲ್ಬಣ ಕಂಡುಬಂದಿದ್ದು, ಬೆಳೆಗಳ ಬೆಳವಣಿಗೆ ಕುಂಠಿತಗೊಂಡು ಬೆಳೆ ಹಾನಿ ಸಂಭವಿಸಿದೆ. ಇದರ ಪರಿಣಾಮವಾಗಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಆರ್ಥಿಕ ನಷ್ಟ ಅನುಭವಿಸಿರುವುದು ಗಮನಿಸಲಾಗಿದೆ.
ಮುಂದಿನ ಬೇಸಿಗೆ ತಿಂಗಳುಗಳಾದ ಮಾರ್ಚ್ ಹಾಗೂ ಏಪ್ರಿಲ್‌ನಲ್ಲಿ ತಾಪಮಾನ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇರುವುದರ ಜೊತೆಗೆ, ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಮಟ್ಟ ಕಡಿಮೆಯಾಗಿರುವುದರಿಂದ ನೀರಿನ ಕೊರತೆ ಉಂಟಾಗುವ ಸಂಭವ ಹೆಚ್ಚಾಗಿದೆ.
ಮುಂದಿನ ದಿನಗಳಲ್ಲಿಯೂ ತಾಪಮಾನ ಏರಿಕೆ ಹಾಗೂ ನೀರಿನ ಅಭಾವ ಮುಂದುವರಿಯುವ ಸಾಧ್ಯತೆ ಇದೆ. ಕೃಷಿ ವಿಜ್ಞಾನಿಗಳು ಹಾಗೂ ಕೃಷಿ ವಿಶ್ವವಿದ್ಯಾನಿಲಯ ರಾಯಚೂರು ಅವರ ಶಿಫಾರಸ್ಸಿನಂತೆ ಬಿಟಿ ಹತ್ತಿಯ ಬಿತ್ತನೆ ಕಾಲಾವಧಿ ಜೂನ್ ಮೊದಲ ವಾರದಿಂದ ಜುಲೈ ಮೂರನೇ ವಾರದವರೆಗೆ ಇರುವುದರಿಂದ, ರೈತರು ಈ ಅವಧಿಯನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅತ್ಯಂತ ಅಗತ್ಯವಾಗಿದೆ.
ಆದ್ದರಿಂದ, ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ವಾಣಿಜ್ಯ ಹತ್ತಿ ಬೆಳೆ ನಾಟಿ ಮಾಡದಂತೆ ರೈತರಿಗೆ ಸ್ಪಷ್ಟವಾಗಿ ತಿಳಿಸಲಾಗಿದೆ. ಜೊತೆಗೆ ಹತ್ತಿ ಬೀಜ ಬಿತ್ತನೆ ಮಾಡುವ ಮೊದಲು ರೈತರು ಈ ಬೆಳೆಯ ಸೂಕ್ತ ಕಾಲಾವಧಿ ಹಾಗೂ ನಿರ್ವಹಣೆ ಕುರಿತು ಸಮರ್ಪಕ ಮಾಹಿತಿ ತಿಳಿದುಕೊಳ್ಳುವುದು ಅತ್ಯವಶ್ಯಕವಾಗಿದೆ.
ರೈತರಿಗೆ ಸಲಹೆಗಳು: ಪ್ರತಿ ಬಿಟಿ ಹತ್ತಿ ಪ್ಯಾಕೇಟ್ ಜೊತೆಗೆ 125 ಗ್ರಾಂ ಬಿಟಿ ಯೇತರ (ರೆಫ್ಯೂಜಿ) ಬೀಜಗಳನ್ನು ನೀಡಲಾಗುತ್ತದೆ. ರೈತರು ತಮ್ಮ ಹೊಲದ ಸುತ್ತಲೂ ನಾಲ್ಕು ಸಾಲುಗಳಲ್ಲಿ ಈ ಬೀಜಗಳನ್ನು ಕಡ್ಡಾಯವಾಗಿ ಬಿತ್ತನೆ ಮಾಡಬೇಕು. ಇದರಿಂದ ಕಾಯಿಕೊರಕ ಹುಳುವಿನಲ್ಲಿ ಬಿ.ಟಿ. ನಿರೋಧಕ ಶಕ್ತಿಯ ಅಭಿವೃದ್ಧಿಯನ್ನು ತಡೆಯಲು ಸಹಕಾರಿಯಾಗುತ್ತದೆ ಹಾಗೂ ಕೀಟದ ಹಾನಿಯನ್ನು ಗುರುತಿಸಲು ಸಹಾಯವಾಗುತ್ತದೆ.
ಕೆಲವು ರೈತರು ಬಿ.ಟಿ. ಯೇತರ ಬೀಜಗಳನ್ನು ಹುಸಿ ಗುಣಿಗಳಿಗಾಗಿ ಬಳಸುತ್ತಿರುವುದು ಕಂಡುಬರುತ್ತದೆ. ಆದರೆ, ಈ ಬೀಜಗಳನ್ನು ಹುಸಿ ಗುಣಿಗಳಿಗಾಗಿ ಬಳಸದೇ, ಸೂಚನೆಯಂತೆ ಬಿತ್ತನೆ ಮಾಡಲು ಕೋರಲಾಗಿದೆ.
ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ತಳಿಗಳಲ್ಲಿ ಯಾವುದಾದರೂ ಲಭ್ಯತೆಯ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳುವುದು ಸೂಕ್ತ. ಬೀಜವನ್ನು ಖರೀದಿಸುವ ಮೊದಲು ಪ್ಯಾಕೇಟ್‌ನ್ನು ಸರಿಯಾಗಿ ಪರಿಶೀಲಿಸಿ, ತಯಾರಕ ಕಂಪನಿಯ ಪೂರ್ಣ ಹೆಸರು ಹಾಗೂ ವಿಳಾಸ ಸರಿಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಜೊತೆಗೆ ನಿಜವಾದ ಚೀಟಿ (ಟ್ಯಾಗ್) ಇರುವುದನ್ನು ದೃಢಪಡಿಸಬೇಕು.
ಬಿತ್ತನೆ ಬೀಜವನ್ನು ಕೇವಲ ಅಧಿಕೃತ ಪರವಾನಿಗೆ ಹೊಂದಿರುವ ಮಾರಾಟಗಾರರಿಂದ ಮಾತ್ರ ಖರೀದಿಸಬೇಕು ಹಾಗೂ ಕಡ್ಡಾಯವಾಗಿ ರಸೀದಿ ಪಡೆಯಬೇಕು. ತಳಿಯ ಬೇಸಾಯ ಪದ್ಧತಿ ಕುರಿತು ನೀಡಿರುವ ಕರಪತ್ರವನ್ನು ಕೂಡ ಪಡೆಯಬೇಕು.
ಬಿತ್ತನೆ ಮಾಡಿದ ನಂತರದಿಂದ ಬೆಳೆ ಕಟಾವು ಆಗುವವರೆಗೆ ಬೀಜದ ಚೀಲ, ಸ್ವಲ್ಪ ಪ್ರಮಾಣದ ಬೀಜ, ರಸೀದಿ ಹಾಗೂ ಕರಪತ್ರವನ್ನು ಸುರಕ್ಷಿತವಾಗಿ ಸಂಗ್ರಹಿಸಿಡಬೇಕು. ಬೆಳೆಯಲ್ಲಿ ಯಾವುದೇ ಸಮಸ್ಯೆ ಉಂಟಾದಲ್ಲಿ ಇವುಗಳು ಸಾಕ್ಷ್ಯವಾಗಿ ಉಪಯೋಗವಾಗುತ್ತವೆ.

