ದೇಶದಲ್ಲಿ ವಾಹನಗಳಿಗೆ ಇಂಧನವಾಗಿ ಈಗಾಗಲೇ ಎಥನಾಲ್ ಬಳಕೆಯನ್ನು ಕೇಂದ್ರ ಸರ್ಕಾರ ಉತ್ತೇಜಿಸಿದೆ. ಇದೀಗ ಇದೇ ಎಥನಾಲ್ ಅನ್ನು ಅಡುಗೆ ಅನಿಲ (ಕೂಕಿಂಗ್ ಫ್ಯುಯೆಲ್) ಆಗಿಯೂ ಬಳಸುವ ಯೋಜನೆ ರೂಪಿಸುತ್ತಿದೆ. ವಿದೇಶಗಳಿಂದ ಎಲ್‌ಪಿಜಿ ಆಮದು ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಕ್ರಮಕ್ಕೆ ಸಿದ್ಧತೆ ನಡೆಯುತ್ತಿದೆ. ಸದ್ಯ ಯೋಜನೆ ಪರೀಕ್ಷಾ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಮನೆಗಳ ಅಡುಗೆಮನೆಗಳಲ್ಲೂ ಎಥನಾಲ್ ಬಳಕೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಹೌದು. ವಾಹನಗಳಿಗೆ ಇಂಧನವಾಗಿ ಬಳಕೆಯಾಗುತ್ತಿರುವ ಎಥನಾಲ್ ಇದೀಗ ಅಡುಗೆ ಮನೆಗೂ ಕಾಲಿಡುವ ಸಾಧ್ಯತೆ ಇದೆ. ಎಲ್‌ಪಿಜಿಗೆ ಪರ್ಯಾಯವಾಗಿ ಎಥನಾಲ್ ಅನ್ನು ಅಡುಗೆ ಇಂಧನವಾಗಿ ಪರಿಚಯಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಈ ಯೋಜನೆ ಯಶಸ್ವಿಯಾದರೆ ಎಲ್‌ಪಿಜಿ ಮೇಲಿನ ಅವಲಂಬನೆ ಕಡಿಮೆಯಾಗುವುದರ ಜೊತೆಗೆ, ಇಂಧನ ಆಮದು ವೆಚ್ಚದಲ್ಲೂ ಗಣನೀಯ ಉಳಿತಾಯವಾಗುವ ನಿರೀಕ್ಷೆಯಿದೆ.
ಅಡುಗೆಗೂ ಎಥನಾಲ್ ಬಳಕೆಗೆ ಸಿದ್ಧತೆ
ಕಳೆದ ಕೆಲವು ದಿನಗಳಿಂದ ದೇಶಾದ್ಯಂತ ಎಥನಾಲ್ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದೆ. ಇತ್ತೀಚೆಗೆ ಇ20 ಪೆಟ್ರೋಲ್ ಹೆಚ್ಚು ಸುದ್ದಿಯಲ್ಲಿತ್ತು. ಎಥನಾಲ್ ಮಿಶ್ರಿತ ಇಂಧನದಿಂದ ವಾಹನಗಳ ಕಾರ್ಯಕ್ಷಮತೆ ಮತ್ತು ಮೈಲೇಜ್ ಕಡಿಮೆಯಾಗುತ್ತದೆ ಎಂಬ ಸುದ್ದಿಗಳು ಹರಿದಾಡಿದ್ದವು. ಈ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ ಬಳಿಕ ಇದೀಗ ಮತ್ತೊಂದು ಮಹತ್ವದ ಹೆಜ್ಜೆಗೆ ಸಜ್ಜಾಗಿದೆ.
ಪ್ರಸ್ತುತ ವಾಹನಗಳಿಗೆ ಬಳಸಲಾಗುತ್ತಿರುವ ಎಥನಾಲ್ ಅನ್ನು ಮುಂದಿನ ದಿನಗಳಲ್ಲಿ ಅಡುಗೆ ಇಂಧನವಾಗಿಯೂ ಬಳಸುವ ಯೋಜನೆಯನ್ನು ಕೇಂದ್ರ ಸರ್ಕಾರ ರೂಪಿಸುತ್ತಿದೆ. ಎಲ್‌ಪಿಜಿಗೆ ಪರ್ಯಾಯವಾಗಿ ಎಥನಾಲ್ ಬಳಕೆಯನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ. ಇದರಿಂದ ಭವಿಷ್ಯದಲ್ಲಿ ಎಲ್‌ಪಿಜಿ ಮೇಲಿನ ಅವಲಂಬನೆ ಕಡಿಮೆಯಾಗುವ ನಿರೀಕ್ಷೆಯಿದೆ. ಈ ಸಂಬಂಧ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಕಾರ್ಯನಿರ್ವಹಿಸುತ್ತಿದೆ.
2050ರೊಳಗೆ ₹2 ಲಕ್ಷ ಕೋಟಿಗೂ ಹೆಚ್ಚು ಉಳಿತಾಯ ಸಾಧ್ಯ
ಎಲ್‌ಪಿಜಿಯ ಜೊತೆಗೆ ಎಥನಾಲ್‌ನ್ನೂ ಪ್ರಮುಖ ಅಡುಗೆ ಇಂಧನವಾಗಿ ರೂಪಿಸುವುದು ಸರ್ಕಾರದ ಗುರಿಯಾಗಿದೆ. ಎಲ್‌ಪಿಜಿಗೆ ಬದಲಾಗಿ ಎಥನಾಲ್ ಬಳಕೆ ಹೆಚ್ಚಾದರೆ, 2050ರ ವೇಳೆಗೆ ಭಾರತಕ್ಕೆ ₹2 ಲಕ್ಷ ಕೋಟಿಗೂ ಅಧಿಕ ಉಳಿತಾಯವಾಗಬಹುದು ಎಂದು ಅಂದಾಜಿಸಲಾಗಿದೆ.
ಸೆಪ್ಟೆಂಬರ್ ವೇಳೆಗೆ ಅಡುಗೆಗೆ ಎಥನಾಲ್ ಪರಿಚಯಿಸುವ ಪ್ರಯತ್ನಗಳು ನಡೆಯುತ್ತಿವೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಕೇಂದ್ರ ಸರ್ಕಾರ ಇನ್ನೂ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಆದರೂ ತೆರೆಮರೆಯಲ್ಲಿ ಸಿದ್ಧತೆಗಳು ನಡೆಯುತ್ತಿವೆ.
ಸಾಮಾನ್ಯ ಜನರು ಎಥನಾಲ್ ಅಡುಗೆಯನ್ನು ಅಳವಡಿಸಿಕೊಳ್ಳಲು ಸರ್ಕಾರ ವಿಶೇಷ ಸಬ್ಸಿಡಿ ಹಾಗೂ ಇತರ ಆರ್ಥಿಕ ಪ್ರೋತ್ಸಾಹ ನೀಡುವ ಸಾಧ್ಯತೆಯಿದೆ. ಜೊತೆಗೆ ಎಥನಾಲ್ ಪೂರೈಕೆ, ವಿತರಣಾ ವ್ಯವಸ್ಥೆ ಹಾಗೂ ಸರಬರಾಜು ಸರಪಳಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಕೈಗಾರಿಕೆಗಳೊಂದಿಗೆ ಚರ್ಚೆಗಳು ನಡೆಯುತ್ತಿವೆ.
ಎಥನಾಲ್ ಸ್ಟೌವ್ ಹೇಗೆ ಕಾರ್ಯನಿರ್ವಹಿಸುತ್ತದೆ?
ಎಥನಾಲ್ ಪರಿಸರ ಸ್ನೇಹಿ ಇಂಧನವಾಗಿದೆ. ಈ ವರ್ಷದ ಏಪ್ರಿಲ್‌ನಲ್ಲೇ ಭಾರತದಲ್ಲಿ ಎಥನಾಲ್ ಆಧಾರಿತ ಅಡುಗೆ ಸ್ಟೌವ್‌ಗಳ ಪರೀಕ್ಷೆ ನಡೆಯುತ್ತಿದೆ ಎಂಬ ವರದಿಗಳು ಹೊರಬಿದ್ದಿದ್ದವು.
ಭಾರತದಲ್ಲಿ ಎಥನಾಲ್ ಉತ್ಪಾದನೆ ನಿರಂತರವಾಗಿ ಹೆಚ್ಚುತ್ತಿದ್ದು, ದೇಶದ ವಾರ್ಷಿಕ ಉತ್ಪಾದನಾ ಸಾಮರ್ಥ್ಯ 20 ಬಿಲಿಯನ್ ಲೀಟರ್‌ಗಳನ್ನು ಮೀರಿದೆ. ಈ ಹಿನ್ನೆಲೆ, ಎಥನಾಲ್‌ನಿಂದ ಕಾರ್ಯನಿರ್ವಹಿಸುವ ಅಡುಗೆ ಸ್ಟೌವ್‌ಗಳನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಇದು ಯಶಸ್ವಿಯಾದರೆ, ದೇಶದ ಅಡುಗೆ ಪದ್ಧತಿಯಲ್ಲಿ ಮಹತ್ವದ ಬದಲಾವಣೆ ಕಾಣುವ ಸಾಧ್ಯತೆಯಿದೆ.
1 ಲೀಟರ್ ಎಥನಾಲ್ ತಯಾರಿಸಲು ಎಷ್ಟು ಕಬ್ಬು ಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ
ಪೆಟ್ರೋಲ್’ಗೆ ಪರ್ಯಾಯ ಇಂಧನವಾಗಿ ಎಥನಾಲ್ ಬಳಕೆ ದೇಶದಲ್ಲಿ ವೇಗವಾಗಿ ಹೆಚ್ಚುತ್ತಿದೆ. ಕೇಂದ್ರ ಸರ್ಕಾರವೂ ಎಥನಾಲ್ ಆಧಾರಿತ ಇಂಧನ ಮತ್ತು ಅಡುಗೆ ವ್ಯವಸ್ಥೆಗೆ ಉತ್ತೇಜನ ನೀಡುತ್ತಿರುವ ಹಿನ್ನೆಲೆ, ಒಂದು ಲೀಟರ್ ಎಥನಾಲ್ ತಯಾರಿಸಲು ಎಷ್ಟು ಕಬ್ಬು ಬೇಕಾಗುತ್ತದೆ? ಅದನ್ನು ಹೇಗೆ ಉತ್ಪಾದಿಸಲಾಗುತ್ತದೆ? ಎಂಬ ಪ್ರಶ್ನೆ ಅನೇಕರಲ್ಲಿ ಮೂಡಿದೆ. ಇಲ್ಲಿದೆ ಅದರ ಸಂಪೂರ್ಣ ಮಾಹಿತಿ.
ಒಂದು ಲೀಟರ್ ಎಥನಾಲ್’ಗೆ ಎಷ್ಟು ಕಬ್ಬು ಬೇಕು?
• 1 ಲೀಟರ್ ಶುದ್ಧ ಎಥನಾಲ್ ಉತ್ಪಾದಿಸಲು ಸುಮಾರು 12 ರಿಂದ 15 ಕೆಜಿ ಕಬ್ಬು ಅಗತ್ಯವಿರುತ್ತದೆ.
• 1 ಟನ್ ಕಬ್ಬಿನಿಂದ ನೇರವಾಗಿ 70 ರಿಂದ 84 ಲೀಟರ್ ಎಥನಾಲ್ ಉತ್ಪಾದಿಸಬಹುದು.
• ಸಕ್ಕರೆ ತಯಾರಿಸಿದ ಬಳಿಕ ಉಳಿಯುವ ಮೊಲಾಸಿಸ್ (Molasses) ಮೂಲಕ ಉತ್ಪಾದಿಸಿದರೆ, 1 ಟನ್ ಕಬ್ಬಿನಿಂದ ಕೇವಲ 10 ರಿಂದ 11 ಲೀಟರ್ ಎಥನಾಲ್ ಮಾತ್ರ ಸಿಗುತ್ತದೆ.
ಎಥನಾಲ್ ತಯಾರಿಸುವ ಪ್ರಮುಖ ವಿಧಾನಗಳು
ನೇರ ವಿಧಾನ – ಕಬ್ಬಿನ ರಸವನ್ನು ನೇರವಾಗಿ ಎಥನಾಲ್ ಉತ್ಪಾದನೆಗೆ ಬಳಸುವುದು.
ಮಧ್ಯಂತರ ವಿಧಾನ – ಕಬ್ಬಿನ ರಸದಿಂದ ಸಕ್ಕರೆ ತೆಗೆದ ಬಳಿಕ ಉಳಿಯುವ ಸಿರಪ್ನಿಂದ ಎಥನಾಲ್ ತಯಾರಿಸುವುದು.
ಮೊಲಾಸಿಸ್ ವಿಧಾನ – ಸಕ್ಕರೆ ಉತ್ಪಾದನೆಯ ಉಪ ಉತ್ಪನ್ನವಾದ ಮೊಲಾಸಿಸ್ನಿಂದ ಎಥನಾಲ್ ಹೊರತೆಗೆಯುವುದು.
ಉತ್ಪಾದನೆಯ ಹಂತಗಳು
• ಕಬ್ಬನ್ನು ಕಾರ್ಖಾನೆಯಲ್ಲಿ ಜಜ್ಜಿ ರಸ ತೆಗೆಯಲಾಗುತ್ತದೆ.
• ರಸಕ್ಕೆ ಈಸ್ಟ್ ಸೇರಿಸಿ ಹುದುಗುವಿಕೆ (Fermentation) ನಡೆಸಲಾಗುತ್ತದೆ.
• ಬಳಿಕ ಡಿಸ್ಟಿಲೇಶನ್ (Distillation) ಮೂಲಕ ಸುಮಾರು 95% ಶುದ್ಧ ಎಥನಾಲ್ ಪಡೆಯಲಾಗುತ್ತದೆ.
• ಅಂತಿಮವಾಗಿ ನಿರ್ಜಲೀಕರಣ (Dehydration) ಪ್ರಕ್ರಿಯೆ ಮೂಲಕ 99.8%ಕ್ಕೂ ಅಧಿಕ ಶುದ್ಧತೆಯ ಎಥನಾಲ್ ತಯಾರಿಸಿ ಪೆಟ್ರೋಲ್ ಮಿಶ್ರಣಕ್ಕೆ ಬಳಸಲಾಗುತ್ತದೆ.
ಎಥನಾಲ್ ಏಕೆ ಮಹತ್ವದ್ದು?
ಎಥನಾಲ್ ಬಳಕೆಯಿಂದ ಕಚ್ಚಾ ತೈಲ ಆಮದು ಮೇಲಿನ ಅವಲಂಬನೆ ಕಡಿಮೆಯಾಗುವುದರ ಜೊತೆಗೆ, ರೈತರಿಗೆ ಹೆಚ್ಚುವರಿ ಆದಾಯದ ಮೂಲವೂ ಸಿಗುತ್ತದೆ. ಅಲ್ಲದೆ, ಪರಿಸರ ಸ್ನೇಹಿ ಇಂಧನವಾಗಿ ಕಾರ್ಬನ್ ಉತ್ಸರ್ಜನೆ ತಗ್ಗಿಸಲು ಸಹ ಇದು ನೆರವಾಗುತ್ತದೆ. ಭಾರತದಲ್ಲಿ ಫ್ಲೆಕ್ಸ್-ಫ್ಯುಯೆಲ್ ವಾಹನಗಳ ಬಳಕೆಯೂ ಹಂತಹಂತವಾಗಿ ಹೆಚ್ಚುತ್ತಿದೆ.

