ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ರಾಜ್ಯ ಗುತ್ತಿಗೆದಾರರ ಸಂಘದಲ್ಲಿಯೇ ಕಮಿಷನ್ ಗಾಗಿ ಡೀಲ್ ನಡೆದಿದೆ. ಅಲ್ಲದೇ ಈ ಕುರಿತ ಆಡಿಯೋ ವೈರಲ್ ಆಗುತ್ತಿದ್ದಂತೆ ಗುತ್ತಿಗೆದಾರರ ಸಂಘದ ಇಬ್ಬರ ತಲೆದಂಡವಾಗಿದೆ.
ರಾಜ್ಯ ಗುತ್ತಿಗೆದಾರರ ಸಂಘದ ನಿರ್ದೇಶಕ ಮಂಡಳಿ ಗೌರವಾಧ್ಯಕ್ಷ ಜಗನ್ನಾಥ್ ಬಿ ಹಾಗೂ ಸಂಘಟನಾ ಕಾರ್ಯದರ್ಶಿ ಹಣಮಂತ ಇಬ್ಬರನ್ನೂ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಗುತ್ತಿಗೆದಾರರ ಸಂಘದ ಗೌರವಾಧ್ಯಕ್ಷ ಜಗನ್ನಾಥ್ ಹಾಗೂ ಹಣಮಂತ ಮಾತನಾಡಿರುವ ಆಡಿಯೋ ವೈರಲ್ ಆಗಿತ್ತು. ಟೆಂಡರ್ ಪ್ರಕ್ರಿಯೆ ಬಿಡ್ ಗಾಗಿ ಸಣ್ಣ ಗುತ್ತಿಗೆದಾರರಿಂದ 3 ಪರ್ಸೆಂಟ್ ವರೆಗೂ ಕಮಿಷನ್ ಗೆ ಬೇಡಿಕೆ ಇಡುತ್ತಿದ್ದರು ಎಂಬ ಆಂಶ ಬಯಲಾಗಿದೆ. ಈ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ಅಮಾನತು ಆದೇಶ ಹೊರಡಿಸಲಾಗಿದೆ.
ರಾಜ್ಯ ಸರ್ಕಾರದ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಕರ್ನಾಟಕ ಗುತ್ತಿಗೆದಾರರ ಸಂಘದೊಳಗೇ ಕಮಿಷನ್ ಗಾಗಿ ಬೇಡಿಕೆ ಇಡಲಾಗುತ್ತಿದೆ. ಸಂಘದ ಪದಾಧಿಕಾರಿಗಳು ಸಣ್ಣ ಗುತ್ತಿಗೆದಾರರಿಂದ ಟೆಂಡರ್ ಪ್ರಕ್ರಿಯೆಗೆ ಶೇ 2.5-3 ಪರ್ಸೆಂಟ್ ಕಮಿಷನ್ ಕೇಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳೇ ಬಡ ಗುತ್ತಿಗೆದಾರರಿಂದ ಕಮಿಷನ್ ಕೇಳುತ್ತಿದ್ದಾರೆ. ರಾಜ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಹಾಗೂ ಅವರ ಸಂಗಡಿಗರು ವಿವಿಧ ಸರ್ಕಾರಿ ಇಲಾಖೆಗಳ ಟೆಂಡರ್ ಪ್ರಕ್ರಿಯೆಯಲ್ಲಿ ನೇರವಾಗಿ ಭಾಗಿಯಾಗಿದ್ದು, ಬಡ ಗುತ್ತಿಗೆದಾರರಿಂದ ಕಮಿಷನ್ ವಸೂಲಿಗೆ ಇಳಿದಿದ್ದಾರೆ. ಲೋಕೋಪಯೋಗಿ ಇಲಾಖೆ, ಇಂಧನ ಇಲಾಖೆ, ನಗರಾಭಿವೃದ್ಧಿ, ನೀರಾವರಿ ಸೇರಿದಂತೆ ಬಹುತೇಕ ಎಲ್ಲಾ ಪ್ರಮುಖ ಇಲಾಖೆಗಳ ಟೆಂಡರ್‌ಗಳಲ್ಲಿಯೋ ಕಮಿಷನ್ ಗಾಗಿ ಒತ್ತಡ ಹೇರಲಾಗುತ್ತಿದೆ ಎನ್ನಲಾಗಿದೆ.
ರಾಜ್ಯ ಗುತ್ತಿಗೆದಾರರ ಸಂಘದ ನಿರ್ದೇಶಕ ಮಂಡಳಿ ಗೌರವಾಧ್ಯಕ್ಷ ಜಗನ್ನಾಥ್ ಜಿ, ಶಿವಾಜಿ ಹಾಗೂ ನಿರ್ದೇಶಕ ಹೆಚ್.ಆರ್. ಚಿಂಚಳಿ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಟೆಂಡರ್‌ಗೆ ಬಿಡ್ ಹಾಕಿರುವ ಸಣ್ಣ ಗುತ್ತಿಗೆದಾರರಿಗೆ ಬಿಡ್ ವಾಪಸ್ ಪಡೆಯುವಂತೆ ಒತ್ತಡ ಹಾಕಲಾಗುತ್ತಿದ್ದು, ಇದಕ್ಕೆ ಒಪ್ಪದಿದ್ದರೆ ಬೆದರಿಕೆ ಹಾಕಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
ಬಿಡ್ ವಾಪಸ್ ಪಡೆಯಬೇಕಾದರೆ ಗುತ್ತಿಗೆ ಮೊತ್ತದಲ್ಲಿ ಮೊದಲಿಗೆ ಶೇ 3ರಷ್ಟು ಕಮಿಷನ್ ನೀಡಬೇಕು ಎಂಬ ಬೇಡಿಕೆ ಇಡಲಾಗಿತ್ತು. ನಂತರ ಮಾತುಕತೆ ನಡೆದು ಶೇ 2.5ರಷ್ಟು ಕಮಿಷನ್‌ಗೆ ಒಪ್ಪಿಗೆ ನೀಡಲಾಗಿದೆ.ಗುತ್ತಿಗೆ ಸಿಕ್ಕ ಕೂಡಲೇ ಡೀಲಿಂಗ್ ಹಣವನ್ನು ನೀಡುವಂತೆ ಗುತ್ತಿಗೆದಾರರಿಗೆ ತಾಕೀತು ಮಾಡಲಾಗುತ್ತಿದೆ. ಈ ಡೀಲಿಂಗ್ ನ ಆಡಿಯೋ ವೈರಲ್ ಆಗಿದ್ದು, ಅದರಲ್ಲಿ ಸಂಘದ ಪದಾಧಿಕಾರಿಯೇ ಡೀಲ್ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿತ್ತು.

