ಇಸ್ರೇಲ್–ಇರಾನ್ ನಡುವಣ ಉದ್ವಿಗ್ನ ಪರಿಸ್ಥಿತಿ ಕಾರಣ ವಿಮಾನಗಳ ಹಾರಾಟ ರದ್ದಾಗಿದೆ. ವಿವಿಧ ದೇಶಗಳು ತಮ್ಮ ವಾಯು ಪ್ರದೇಶದಲ್ಲಿ ವಿಮಾನಗಳ ಹಾರಾಟಕ್ಕೆ ನಿರ್ಬಂಧ ಹೇರಿದ್ದು, ಯಾವಾಗ ವಿಮಾನ ಹಾರಾಟ ಪುನಃ ಪ್ರಾರಂಭವಾಗಲಿದೆ? ಎಂಬುದು ಇನ್ನೂ ತಿಳಿದುಬಂದಿಲ್ಲ.
ಕರ್ನಾಟಕದ ಹಲವಾರು ಜನರು ದುಬೈ ಸೇರಿದಂತೆ ವಿವಿಧ ದೇಶಗಳಲ್ಲಿ ಸಿಲುಕಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, “ಇಸ್ರೇಲ್ – ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿಯಿಂದಾಗಿ ದುಬೈನಲ್ಲಿ ಸಿಲುಕಿರುವ ಕನ್ನಡಿಗರ ಜೊತೆ ಮಾತನಾಡಿ, ಧೈರ್ಯ ತುಂಬಿದ್ದೇನೆ” ಎಂದು ಹೇಳಿದ್ದಾರೆ.
“ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ದುಬೈ ಸೇರಿದಂತೆ ಯುದ್ಧಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ಕನ್ನಡಿಗರ ಸದ್ಯದ ಪರಿಸ್ಥಿತಿಯ ಕುರಿತು ಮಾಹಿತಿ ಪಡೆದು, ಬಳಿಕ ಅವರನ್ನು ತವರಿಗೆ ವಾಪಸ್ ಕರೆ ತರುವ ಸಂಬಂಧ ವಿದೇಶಾಂಗ ಇಲಾಖೆ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿರುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದೇನೆ” ಎಂದು ತಿಳಿಸಿದ್ದಾರೆ.
ಬಸವರಾಜ ರಾಯರಡ್ಡಿ ಪುತ್ರಿ ದುಬೈನಲ್ಲಿ: ಯಲಬುರ್ಗಾ ಕ್ಷೇತ್ರದ ಕಾಂಗ್ರೆಸ್ ಶಾಸಕ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರ ಪುತ್ರಿ ಮಮತಾ ದುಬೈನಲ್ಲಿ ಸಿಲುಕಿಕೊಂಡಿದ್ದಾರೆ.
ಸ್ನೇಹಿತೆಯ ವಿವಾಹದಲ್ಲಿ ಪಾಲ್ಗೊಳ್ಳಲು ಮಮತಾ ಅವರು ದುಬೈಗೆ ತೆರಳಿದ್ದರು. ಮೂರು ದಿನಗಳ ಹಿಂದೆ ಅವರು ದುಬೈಗೆ ತೆರಳಿದ್ದು, ಈಗ ವಿಮಾನ ಹಾರಾಟ ರದ್ದುಗೊಂಡಿರುವ ಕಾರಣ ಅಲ್ಲಿಯೇ ಸಿಲುಕಿಕೊಂಡಿದ್ದಾರೆ.
ಮೊದಲು ಮಮತಾ ಅವರು ರೆಸಾರ್ಟ್‌ನಲ್ಲಿದ್ದರು. ಈಗ ಅವರು ಬಸವರಾಜ ರಾಯರಡ್ಡಿ ಅವರ ಸ್ನೇಹಿತರ ಮನೆಯಲ್ಲಿದ್ದು, ಸುರಕ್ಷಿತವಾಗಿದ್ದಾರೆ. ಮಗಳೊಂದಿಗೆ ಮಾತನಾಡಿದ್ದು, ಆಕೆ ಸುರಕ್ಷಿತವಾಗಿದ್ದಾಳೆ ಎಂದು ಬಸವರಾಜ ರಾಯರಡ್ಡಿ ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, “ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಇರುವ ಕನ್ನಡಿಗರು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆದಿರುವುದು ತುಸು ಸಮಾಧಾನಕರ ವಿಚಾರ. ಯಾರೊಬ್ಬರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಪ್ರತಿಯೊಬ್ಬರನ್ನೂ ಸುರಕ್ಷಿತವಾಗಿ ಕರೆತರುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ನಿರಂತರವಾಗಿರಲಿದೆ” ಎಂದು ತಿಳಿಸಿದ್ದಾರೆ.

