ಕರ್ನಾಟಕ ಸರ್ಕಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಆಗಿ ಬದಲಾವಣೆ ಮಾಡಿದೆ. ಬೆಂಗಳೂರು ನಗರವನ್ನು ಈಗ 5 ನಗರ ಪಾಲಿಕೆಗಳಾಗಿ ವಿಂಗಡಿಸಲಾಗಿದೆ, ಒಟ್ಟು 369 ವಾರ್ಡ್‌ಗಳಿವೆ. ಸರ್ಕಾರ ಈಗ ಜಿಬಿಎ ಚುನಾವಣೆ ತಯಾರಿಯನ್ನು ಆರಂಭಿಸಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಚುನಾವಣೆಗೆ ಅಭ್ಯರ್ಥಿಗಳಾಗಲು ಕೆಪಿಸಿಸಿಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕು. ಭಾನುವಾರದಿಂದಲೇ ಅರ್ಜಿ ವಿತರಣೆ ಆರಂಭಿಸಲಾಗಿದೆ. ಅರ್ಜಿ ಸಲ್ಲಿಕೆ ಮಾಡಲು ಜನವರಿ 15, 2026 ಕೊನೆಯ ದಿನವಾಗಿದೆ.
ಭಾನುವಾ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ 140ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, “ಬೂತ್ ಮಟ್ಟದಲ್ಲಿ ಕೆಲಸ ಮಾಡುವ ನಾಯಕರಿಗೆ ಆದ್ಯತೆ. ಭನುವಾರದಿಂದಲೇ ಅರ್ಜಿ ಬಿಡುಗಡೆ ಮಾಡಲಾಗಿದೆ. ತಡವಾದರೆ ನೀವು ಎಷ್ಟು ದೊಡ್ಡ ನಾಯಕರಾದರೂ ನಾನು ಗುರುತಿಸುವುದಿಲ್ಲ” ಎಂದು ಹೇಳಿದರು.
“ಮೀಸಲಾತಿ ನಿಗದಿಯಾದ ಬಳಿಕ ಜಿಬಿಎ ಚುನಾವಣೆಗೆ ತಯಾರಿ ಮಾಡಿದರೆ ಆಯಿತು ಎಂದುಕೊಂಡರೆ ನೀವು ಗೆಲ್ಲುವುದಿಲ್ಲ. ಅರ್ಜಿ ಬೇಕಿದ್ದವರು ಶುಲ್ಕ ನೀಡಿ ಪಡೆದುಕೊಳ್ಳಬಹುದು. ನೀವು ಅರ್ಜಿಗೆ ನೀಡಿದ ಹಣ ಕಟ್ಟಡ ನಿಧಿಗೆ ಹೋಗಲಿದೆ. ಏಕೆಂದರೆ ಜಿಲ್ಲಾ ಕಚೇರಿ ನಿರ್ಮಾಣಕ್ಕೆ 20 ಕೋಟಿ ರೂ. ರಾಜ್ಯ ಕಚೇರಿ ನಿರ್ಮಾಣಕ್ಕೆ 60 ಕೋಟಿ ರೂ. ಖರ್ಚಾಗಲಿದೆ” ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
“ತಾಲೂಕು ಕಚೇರಿ ನಿರ್ಮಾಣಕ್ಕೂ ಕೆಪಿಸಿಸಿಯಿಂದ ಹಣ ನೀಡಬೇಕಲ್ಲವೇ?, ಎಂಎಲ್‌ಎ ಚುನಾವಣೆ ವೇಳೆ 2 ಲಕ್ಷ ಹಣ ನಿಗದಿ ಮಾಡಲಾಗಿತ್ತು. ಇದರಿಂದ 20 ಕೋಟಿ ಹಣ ಸಂಗ್ರಹವಾಯಿತು. ಇದರಿಂದ ಪಕ್ಷದ ಪರವಾಗಿ ಜಾಹೀರಾತು ನೀಡಲು ಸಾಧ್ಯವಾಯಿತು” ಎಂದರು.
ಎಷ್ಟು ಅರ್ಜಿ ಶುಲ್ಕ?: ನೀವು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಲು ಆಸಕ್ತಿ ಹೊಂದಿದ್ದರೆ ಟಿಕೆಟ್ ಪಡೆಯಲು ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆ ಮಾಡಲು ಸಾಮಾನ್ಯವ ವರ್ಗದವರು 50,000 ರೂ. ಶುಲ್ಕ ಪಾವತಿಸಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಲು 25,000 ರೂ. ಶುಲ್ಕವನ್ನು ಪಾವತಿ ಮಾಡಬೇಕು.
ಡಿ.ಕೆ.ಶಿವಕುಮಾರ್ ಅರ್ಜಿ ಬಗ್ಗೆ ಮಾಹಿತಿ ನೀಡುವಾಗಲೇ ರಿಯಾಯಿತಿ ನೀಡಬೇಕು ಎಂದು ಘೋಷಣೆಗಳನ್ನು ಕೂಗಲಾಯಿತು. ಆಗ ಸಿಎಂ ಸಿದ್ದರಾಮಯ್ಯ ಮಹಿಳೆಯರಿಗೆ 25,000 ರೂ. ಇರಲಿ ಎಂದು ಹೇಳಿದರು.
ಆಗ ಡಿ.ಕೆ.ಶಿವಕುಮಾರ್ ಮಾತನಾಡಿ, “ಸಿದ್ದರಾಮಯ್ಯ ಹೇಳುತ್ತಿದ್ದಾರೆ ಎಂದು ಮಹಿಳೆಯರಿಗೆ 25,000 ರೂ. ನಿಗದಿ ಮಾಡಲಾಗಿದೆ. ನಿಮ್ಮ ದುಡ್ಡು ನನಗೆ ಬೇಡ. ಜನವರಿ 15ರೊಳಗೆ ಅರ್ಜಿ ಸಲ್ಲಿಕೆ ಮಾಡಿ 369 ವಾರ್ಡ್‌ಗಳಲ್ಲಿ ಶೇ 50ರಷ್ಟು ಮೀಸಲಾತಿ ನೀಡಲಾಗಿದೆ. ಒಂದೊಂದು ಕ್ಷೇತ್ರದಿಂದ ಕನಿಷ್ಠ 10 ಮಹಿಳೆಯರಾದರೂ ಅರ್ಜಿ ಸಲ್ಲಿಸಬೇಕು” ಎಂದು ಹೇಳಿದರು.
“ಚುನಾವಣೆಯಲ್ಲಿ ಬೂತ್ ಮಟ್ಟದ ಕಾರ್ಯಕರ್ತರಿಗೆ ಆದ್ಯತೆ ನೀಡಲಾಗುತ್ತದೆ. ಚೆನ್ನಾಗಿ ಕೆಲಸ ಮಾಡುವವರಿಗೆ ಟಿಕೆಟ್ ನೀಡಲಾಗುತ್ತದೆ. ಚೆನ್ನಾಗಿ ಕೆಲಸ ಮಾಡಿದವರಿಗೆ ಟಿಕೆಟ್, ಅಂತಹವರಿಗೆ ಪ್ರಾಮುಖ್ಯತೆ. ಮುಖ್ಯಮಂತ್ರಿಗಳು ಮತ್ತು ನನ್ನ ಹಿಂದೆ ತಿರುಗಿದರೆ ಅವಕಾಶ ಸಿಗುವುದಿಲ್ಲ” ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

