HomeLatest Newsಭಾರತ್ ಜೋಡೋ ಯಾತ್ರೆಯಲ್ಲ ಗಂಜಿ ಕೇಂದ್ರ; ಆರ್ ಅಶೋಕ್ ಲೇವಡಿ

ಭಾರತ್ ಜೋಡೋ ಯಾತ್ರೆಯಲ್ಲ ಗಂಜಿ ಕೇಂದ್ರ; ಆರ್ ಅಶೋಕ್ ಲೇವಡಿ

ಬೆಂಗಳೂರು: ಭಾರತ್‌ ಜೋಡೋ ಯುವ ಸಂಘಗಳ ಹೆಸರಲ್ಲಿ ಕಾಂಗ್ರೆಸ್‌ ತನ್ನ ಕಾರ್ಯಕರ್ತರಿಗೆ ಗಂಜಿ ಕೇಂದ್ರಗಳನ್ನು ನಿರ್ಮಿಸಲು ಮುಂದಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.

ರೈತರಿಗೆ, ವೃದ್ಧರಿಗೆ, ಅನಾಥರಿಗೆ, ವಿಧವೆಯರಿಗೆ ಪಿಂಚಣಿ ಫಲಾನುಭವಿಗಳಿಗೆ ಸಹಾಯಧನ ನೀಡದೆ ತಡೆಹಿಡಿದಿರುವ ಸರ್ಕಾರ, ಕಾಂಗ್ರೆಸ್‌ ಕಾರ್ಯಕರ್ತರಿಗೆ ಮಾತ್ರ ರಾಜ್ಯದ ತೆರಿಗೆದಾರರ ಹಣದಲ್ಲಿ ಪುನರ್ವಸತಿ ಕಲ್ಪಿಸುತ್ತಿದೆ ಎಂದು ಸುದ್ದಿಗೋಷ್ಟಿಯಲ್ಲಿ ಮಂಗಳವಾರ ಹರಿಹಾಯ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗೃಹಲಕ್ಷ್ಮಿಯ 5,000 ಕೋಟಿ ರೂ. ಅನ್ನಭಾಗ್ಯದ 750 ಕೋಟೊ ಹಣವನ್ನು ಇನ್ನೂ ನೀಡಿಲ್ಲ. ಆಗಿನ ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಬೆಳಗಾವಿ ಅಧಿವೇಶನದಲ್ಲಿ ಕಣ್ಣೀರು ಹಾಕಿ ಸತ್ಯ ಒಪ್ಪಿಕೊಂಡರು. ಆದರೂ ಇನ್ನೂ ಫಲಾನುಭವಿಗಳಿಗೆ ಹಣ ತಲುಪಿಲ್ಲ. ಆದರೆ ಕಾಂಗ್ರೆಸ್‌ ಪುಢಾರಿ ಕಾರ್ಯಕರ್ತರಿಗೆ ಮಾತ್ರ ದಿನಕ್ಕೊಂದು ಯೋಜನೆ ಕೊಡುತ್ತಿದ್ದಾರೆ. ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಎಚ್‌.ಎಂ.ರೇವಣ್ಣ ಅವರಿಗೆ 58 ಲಕ್ಷ ರೂ. ವಸತಿ ಭತ್ಯೆ ನೀಡಲಾಗುತ್ತಿದೆ. ವೇತನ,ಇತರೆ ಭತ್ಯೆ, ಸೌಲಭ್ಯಗಳು, ಅವರಿಗೆ 12 ಸಿಬ್ಬಂದಿ ಕೂಡ ಇದ್ದಾರೆ. ಎಲ್ಲ ಸೇರಿ 2 ಕೋಟಿ ರೂ. ವರೆಗೆ ವೆಚ್ಚವಾಗುತ್ತಿದೆ. ಪ್ರತಿಪಕ್ಷದ ನಾಯಕನಾದ ನನಗೆ ಸರ್ಕಾರದಿಂದ ಇನ್ನೂ ಮನೆ ನೀಡಿಲ್ಲ. ಆದರೆ ಸಮಿತಿಯ ಉಪಾಧ್ಯಕ್ಷರಿಗೆ ಸರ್ಕಾರಿ ಮನೆ ನೀಡಿ 58 ಲಕ್ಷ ರೂ. ಖರ್ಚು ಮಾಡಲಾಗಿದೆ. ಜಿಲ್ಲಾ, ತಾಲ್ಲೂಕು ಸಮಿತಿ ಅಧ್ಯಕ್ಷರಿಗೆ ಪ್ರತಿ ತಿಂಗಳು ಸಂಬಳ ನೀಡಲಾಗುತ್ತಿದೆ. ಸದಸ್ಯರಿಗೆ ಭತ್ಯೆ ನೀಡಲಾಗುತ್ತಿದೆ, ಜಿಲ್ಲೆಗಳಲ್ಲಿ ಕಚೇರಿ ವೆಚ್ಚ ಎಲ್ಲ ಸೇರಿದರೆ ಪ್ರತಿ ತಿಂಗಳು 150 ಕೋಟಿ ರೂಗಳಿಗೂ ಹೆಚ್ಚು ಹಣ ವೆಚ್ಚವಾಗುತ್ತದೆ ಎಂದರು.

ರಾಹುಲ್‌ ಗಾಂಧಿ ಕಾಂಗ್ರೆಸ್ ಪಕ್ಷದ ಬ್ಯಾನರ್ ಕೆಳಗೆ ನಡೆಸಿದ ಭಾರತ್‌ ಜೋಡೋ ಹೆಸರಲ್ಲಿ ಸಂಘಗಳನ್ನು ರಚಿಸಿ ಕಾಂಗ್ರೆಸ್‌ನ ನಿರುದ್ಯೋಗಿ ಕಾರ್ಯಕರ್ತರಿಗೆ ಉದ್ಯೋಗ ನೀಡಲಾಗುತ್ತಿದೆ. ಪ್ರತಿ ಸಮಿತಿಗೆ ತರಬೇತುದಾರರನ್ನು ನೇಮಿಸಿ 24,000 ರೂ.ವೇತನ ನಿಗದಿ ಮಾಡಲಾಗುತ್ತಿದೆ. ಈ ಯೋಜನೆಗೆ ಒಟ್ಟು 1,010 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಇದು ತೆರಿಗೆದಾರರ ಬೆವರಿನ ಹಣದ ದುರ್ಬಳಕೆಯಾಗಿದೆ ಎಂದು ಟೀಕಿಸಿದರು.

ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಔಷಧಿ, ಸಿಬ್ಬಂದಿಗಳಿಲ್ಲ. ಇದೇ ಹಣವನ್ನು ಅಲ್ಲಿಗೆ ಕೊಟ್ಟಿದ್ದರೆ ಸಹಾಯವಾಗುತ್ತಿತ್ತು. ಕರ್ನಾಟಕ ಬಾಣಂತಿಯರಿಗೆ ಸುರಕ್ಷಿತವಲ್ಲ ಎಂದು ಸಾಬೀತಾಗಿದೆ. ಧರಣಿ ಮಾಡುತ್ತಿರುವ ಆಶಾ ಕಾರ್ಯಕರ್ತರಿಗೆ ಗೌರವಧನ ಹೆಚ್ಚಿಸಿಲ್ಲ. ಪಿಂಚಣಿ ಫಲಾನುಭವಿಗಳಿಗೆ ಮೂರು ತಿಂಗಳಿಂದ ಪಿಂಚಣಿ ಕೊಟ್ಟಿಲ್ಲ. ಅನಾಥ ಮಕ್ಕಳಿಗೆ ಎಂಟು ತಿಂಗಳ ಬಾಕಿ 78 ಕೋಟಿ ರೂ. ನೀಡಬೇಕಿದೆ. ಯುವ ಸಬಲೀಕರಣ ಇಲಾಖೆಗೆ ನೀಡುವ ಇದೇ ಹಣದಿಂದ ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಕ್ರೀಡಾಂಗಣ ನಿರ್ಮಿಸಬಹುದಿತ್ತು. ಇದನ್ನು ಬಿಟ್ಟು ಲೂಟಿ ಮಾಡಲು ಹೊರಟಿದ್ದಾರೆ ಎಂದರು.

ಎಲ್ಲ ತಾಲೂಕುಗಳಲ್ಲಿ ಕ್ರೀಡಾ ಇಲಾಖೆಯ ಕಚೇರಿ ಇದೆ. ಆದರೆ ಇದಕ್ಕೆ ಪ್ರತ್ಯೇಕವಾಗಿ ಸಮಿತಿ ರಚಿಸಿ ಕಾಂಗ್ರೆಸ್ ಪುಢಾರಿಗಳನ್ನು ನೇಮಕ ಮಾಡಲಾಗುತ್ತಿದೆ. ಮುಂದೆ ಒಂದೂವರೆ ವರ್ಷದಲ್ಲಿ ಚುನಾವಣೆ ಇರುವುದರಿಂದ ಕಾಂಗ್ರೆಸ್‌ ಕಾರ್ಯಕರ್ತರಿಗಾಗಿ ಗಂಜಿ ಕೇಂದ್ರ ತೆರೆಯಲಾಗಿದೆ. ಕಾಂಗ್ರೆಸ್‌ ಪಕ್ಷದಿಂದ ಆರಂಭಿಸಿದ ಅಭಿಯಾನದ ಹೆಸರು ಇಟ್ಟುಕೊಂಡು ಜನರ ತೆರಿಗೆಯನ್ನು ಲೂಟಿ ಮಾಡಲಾಗುತ್ತಿದೆ. ಇದು ಅತೃಪ್ತ ಕಾಂಗ್ರೆಸ್ಸಿಗರ ಪುನರ್ವಸತಿ ಕೇಂದ್ರವಾಗಿದೆ ಎಂದು ಲೇವಡಿ ಮಾಡಿದರು.

ಸರ್ಕಾರದ ಹಣ ಕಾಂಗ್ರೆಸ್‌ನ ಹಣವಲ್ಲ, ಇದು ಜನರ ಬೆವರಿನ ಶ್ರಮದ ಹಣವಾಗಿದೆ. ಸಂಘಗಳನ್ನು ರಚಿಸುವ ಮೊದಲು ಬಡವರ ಯೋಜನೆಗಳನ್ನು ಮರು ಆರಂಭಿಸಿ ಎಂದರು.

ಬೆಳೆ ಹಾನಿಗೆ ಪರಿಹಾರವಿಲ್ಲ

ನೀರಿಲ್ಲದೆ ರೈತರಿಗೆ ಬೆಳೆ ನಷ್ಟವಾದರೂ ಪರಿಹಾರ ನೀಡಿಲ್ಲ. ಎನ್‌ಡಿಆರ್‌ಎಫ್‌ ಹಣ ಬರಬೇಕೆಂದು ಕೇಳುತ್ತಿರುವ ಸರ್ಕಾರ ಕೇಂದ್ರ ಈಗಾಗಲೇ ಕೊಟ್ಟಿರುವ ಎಸ್‌ಡಿಆರ್‌ಎಫ್‌ ಹಣವನ್ನು ಏನು ಮಾಡಿದೆ ಎಂದು ತಿಳಿಸಬೇಕು. ಆ ಹಣವನ್ನೂ ಕಾಂಗ್ರೆಸ್‌ ಕಾರ್ಯಕರ್ತರಿಗೆ ಖರ್ಚು ಮಾಡಲಾಗುತ್ತಿದೆ ಎಂಬ ಅನುಮಾನ ಬಂದಿದೆ. ಆಸಿಡ್‌ ದಾಳಿಗೊಳಗಾದವರು, ವೃದ್ಧರು ಮೊದಲಾದ ಅಶಕ್ತರಿಗೆ ಕಾಲಕಾಲಕ್ಕೆ ಪಿಂಚಣಿ ನೀಡುತ್ತಿಲ್ಲ. ಆದರೆ ಗ್ಯಾರಂಟಿ ಸಮಿತಿ, ಭಾರತ್‌ ಜೋಡೋ ಸಂಘಕ್ಕೆ ಮಾತ್ರ ಸುಲಭವಾಗಿ ಹಣ ನೀಡಲಾಗುತ್ತಿದೆ. ನೀರಿಲ್ಲದೆ ಬೆಳೆ ಒಣಗುತ್ತಿರುವ ಕಡೆಗಳಿಗೆ ಜಿಲ್ಲಾಧಿಕಾರಿಗಳನ್ನು ಕಳುಹಿಸಿ ರೈತರಿಗೆ ತಾತ್ಕಾಲಿಕ ಪರಿಹಾರಕ್ಕೆ ವ್ಯವಸ್ಥೆ ಮಾಡಬೇಕು. ಹಳ್ಳಿಗಳಲ್ಲಿ ಸಂತ್ರಸ್ತರಿಗೆ ಗಂಜಿ ಕೇಂದ್ರಗಳನ್ನು ನಿರ್ಮಿಸದೆ ಕಾಂಗ್ರೆಸ್‌ ಕಾರ್ಯಕರ್ತರಿಗೆ ಗಂಜಿ ಕೇಂದ್ರ ನೀಡಲಾಗುತ್ತಿದೆ ಎಂದು ದೂರಿದರು.

ಬಿಡದಿ ರೈತರ ಮೇಲೆ ದೌರ್ಜನ್ಯ

ಬಿಡದಿಯಲ್ಲಿ ರೈತರು ಹಾಗೂ ಪೊಲೀಸರು, ಅಧಿಕಾರಿಗಳ ನಡುವೆ ಸಂಘರ್ಷ ನಡೆಯಲು ಸರ್ಕಾರವೇ ಕಾರಣ ಹೊರತು ರೈತರಲ್ಲ.

ರಾಮನಗರ ಪೊಲೀಸ್ ಠಾಣೆಯಲ್ಲಿ ರೈತರ ವಿರುದ್ಧ ಎರಡು ಎಫ್‌ಐಆರ್‌ (240 ಹಾಗೂ 239) ದಾಖಲಿಸಲಾಗಿದೆ. ರೈತರು ಹಲ್ಲೆ ಮಾಡಿ ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.

ಜೀವಸಹಿತ ಬಿಡುವುದಿಲ್ಲವೆಂದು ಬೆದರಿಕೆ ಹಾಕಿದ್ದಾರೆ ಎಂದು ಎಫ್ ಐ ಆರ್ ನಲ್ಲಿ ಉಲ್ಲೇಖಿಸಲಾಗಿದೆ. ಇದನ್ನು ರೈತರ ಸರ್ಕಾರ ಎನ್ನಲು ಸಾಧ್ಯವೇ? ರೈತರಿಗೆ ಬೆದರಿಕೆ ಹಾಕಿದರೆ ಸರ್ಕಾರ ಉಳಿಯುವುದಿಲ್ಲ ಎಂದರು.

ಬಿಡದಿಯ ರೈತರನ್ನು ಒಕ್ಕಲೆಬ್ಬಿಸಲು ನಾವು ಅವಕಾಶ ನೀಡುವುದಿಲ್ಲ. ನಾನು ಮತ್ತೆ ಅಲ್ಲಿಗೆ ಹೋಗಿ ಹೋರಾಟ ಮುಂದುವರಿಸುತ್ತೇನೆ. ಜೊತೆಗೆ ಆನೇಕಲ್‌ನಲ್ಲೂ ನಡೆಯುತ್ತಿರುವ ಭೂ ಸ್ವಾಧೀನ ವಿರೋಧಿ ಹೋರಾಟಕ್ಕ ಕೈ ಜೋಡಿಸುತ್ತೇನೆ. ರೈತರ ವಿರುದ್ಧ ಹಾಕಿರುವ ಎಫ್‌ಐಆರ್‌ ರದ್ದು ಮಾಡಬೇಕು ಹಾಗೂ ಸ್ವಾಧೀನ ಪ್ರಕ್ರಿಯೆ ಕೈ ಬಿಡಬೇಕು ಎಂದು ಆಗ್ರಹಿಸಿದರು.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಹೋರಾಟಕ್ಕೆ ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ. ಅವರು ಸರ್ಕಾರಕ್ಕೆ ಪತ್ರ ಬರೆದರೆ ಉತ್ತರ ಕೂಡ ನೀಡಿಲ್ಲ. ನಾನು ಪತ್ರ ಬರೆದರೂ ಸರ್ಕಾರದಿಂದ ಉತ್ತರ ಸಿಕ್ಕಿಲ್ಲ ಎಂದರು.

ಸಚಿವರಾಗಲು ಪೇಮೆಂಟ್ ಮಾಡಬೇಕು

ಸಚಿವರೇ ಇಲ್ಲದೆ ಸರ್ಕಾರ ಅಧಿವೇಶನ ನಡೆಸಲು ಮುಂದಾಗಿದೆ. ಈಗ ಪೇಮೆಂಟ್‌ ಸಚಿವರು ಬರುತ್ತಿದ್ದಾರೆ. ಒಂದು ಸಚಿವ ಸ್ಥಾನಕ್ಕೆ 100-150 ಕೋಟಿ ರೂ. ಹೈಕಮಾಂಡ್‌ಗೆ ನೀಡಬೇಕಿದೆ. ನಾನೇ ಐದು ವರ್ಷ ಸಿಎಂ ಎಂದ ಸಿದ್ದರಾಮಯ್ಯ ಎಲ್ಲಿಗೆ ಹೋಗಿದ್ದಾರೆ? ರಾಜ್ಯದಲ್ಲಿ ರೈತರ ಹೋರಾಟಗಳು ಮುಂದುವರಿದರೆ ಮೂರನೇ ಸಿಎಂ ಕೂಡ ಬರಬಹುದು. ಈಗ ಇರುವುದು ರಿಯಲ್‌ ಎಸ್ಟೇಟ್‌ ಸರ್ಕಾರ ಎಂದು ಗೇಲಿ ಮಾಡಿದರು.

ಡಾ.ಜಿ.ಪರಮೇಶ್ವರ್‌ ಗೃಹ ಸಚಿವರಾಗಿದ್ದಾಗ ಡ್ರಗ್ಸ್‌ ಮಾಫಿಯಾ ರಾಜ್ಯಾದ್ಯಂತ ವ್ಯಾಪಿಸಿದೆ. ಪ್ರಿಯಾಂಕ್‌ ಖರ್ಗೆ ಸಚಿವರಾದ ಬಳಿಕ ಕೈದಿಗಳು ಜೈಲಿನಿಂದ ತಪ್ಪಿಸಿಕೊಂಡು ಓಡಲು ಅವಕಾಶ ಸಿಕ್ಕಿದೆ. ಅವರ ತವರು ಜಿಲ್ಲೆಯಲ್ಲೇ ಇಂತಹ ಘಟನೆ ನಡೆದಿದೆ. ಜೈಲಿಗೆ ಯಾವಾಗ ಬೇಕಾದರೂ ಬನ್ನಿ, ಯಾವಾಗ ಬೇಕಾದರೂ ಹೋಗಿ ಎಂಬ ಗ್ಯಾರಂಟಿ ಸ್ಕೀಮು ಬಂದಿದೆ. ಡಿ.ಕೆ.ಶಿವಕುಮಾರ್‌ ಬಂದ ನಂತರ ಕಮಿಶನ್‌ ಪ್ರಮಾಣ 60 ರಿಂದ 80 ಶೇಕಡಕ್ಕೆ ಹೋಗಿದೆ. ಹೊಸ ಸರ್ಕಾರ ಬಂದ ಯಾವುದೇ ಕುರುಹು ಕಾಣುತ್ತಿಲ್ಲ ಎಂದರು.

ಕೆಪಿಎಸ್‌ಸಿ ಅಧ್ಯಕ್ಷ ಹುದ್ದೆಯಿಂದ ಶಿವಶಂಕರಪ್ಪ ಸಾಹುಕಾರ್ ಅವರನ್ನು ಅಮಾನತು ಮಾಡಲು ರಾಜ್ಯಪಾಲರು ಕ್ರಮ ವಹಿಸಿದ್ದಾರೆ. ಕೆಪಿಎಸ್‌ಸಿ ಅಕ್ರಮಗಳ ಕುರಿತು ನಾನು ವಿಧಾನಸಭೆಯಲ್ಲಿ ಮಾತಾಡಿದಾಗ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಒಪ್ಪಿಕೊಂಡಿದ್ದರು. ಈಗ ನನ್ನ ಹೋರಾಟಕ್ಕೆ ಫಲ ಸಿಕ್ಕಿದೆ ಎಂದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular