ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣಗಳಲ್ಲಿ ಬ್ಯಾಂಕಿನ ಸೀಲ್ ಅಥವಾ ಸಹಿ ಇಲ್ಲದ ಕಂಪ್ಯೂಟರ್ ಆಧರಿತ ಬ್ಯಾಂಕ್ ರಿಟರ್ನ್ ಮೆಮೊಗಳು ಕೂಡ ಸ್ವೀಕಾರಾರ್ಹ ಸಾಕ್ಷಿಗಳಾಗಿವೆ ಎಂದು ಹೈಕೋರ್ಟ್ ಆದೇಶಿಸಿದೆ.
ವಿದ್ಯುನ್ಮಾನ ವಿಧಾನದಲ್ಲಿ ಚೆಕ್ ಕ್ಲಿಯರ್ ಆಗಿರುವುದರಿಂದ ಸೀಲ್ ಮತ್ತು ಸಹಿ ಕಡ್ಡಾಯವಲ್ಲ. ಸಹಿ ಮತ್ತು ಅಧಿಕೃತ ಮೊಹರು ಇತ್ಯಾದಿಗಳು ದೂರು ತಿರಸ್ಕರಿಸಲು ಅಧಿಕೃತ ಆಧಾರವಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಬೆಂಗಳೂರಿನ ಕುರುಬರಹಳ್ಳಿಯ ಆರ್. ಜಗದೀಶ್ ಸಲ್ಲಿಸಿದ್ದ ತೀರ್ಪು ಮರು ಪರಿಶೀಲನಾ ಅರ್ಜಿಯನ್ನು ನ್ಯಾಯಮೂರ್ತಿ ಶ್ರೀಶಾನಂದ ಅವರಿದ್ದ ಏಕಸದಸ್ಯ ನ್ಯಾಯ ಪೀಠ ವಜಾಗೊಳಿಸಿದೆ. ವಾದ -ಪ್ರತಿವಾದವನ್ನು ಆಲಿಸಿದ ನ್ಯಾಯಾಲಯ, ಚೆಕ್ ಅನ್ನು ಹಸ್ತಚಾಲಿತ ಸಂಗ್ರಹಣೆಗೆ ಕಳುಹಿಸುವಾಗ ಬ್ಯಾಂಕಿನ ಸೀಲ್ ಮತ್ತು ಸಹಿ ಕಡ್ಡಾಯ ಅವಶ್ಯಕತೆ ಎಂಬುದನ್ನು ಒಪ್ಪಲಾಗದು ಎಂದು ಹೇಳಿದೆ.
ಚೆಕ್ ಆರೋಪಿಗೆ ಸೇರಿದ್ದು ಸಹಿ ಕೂಡ ಅವರದ್ದೇ ಎಂಬುದು ನಿರ್ವಿವಾದ. ದೂರುದಾರ ಮತ್ತು ಆರೋಪಿಯ ನಡುವೆ ಕೊಡು ಕೊಳ್ಳುವಿಕೆ ನಡೆದಿರುವುದು ದೃಢಪಟ್ಟಿದೆ. ವರ್ಗಾವಣೆಯ ಅಧಿನಿಯಮದ ಸೆಕ್ಷನ್ 139 ರ ಅಡಿ ತನಗೆ ಲಭ್ಯವಿರುವ ಅವಕಾಶವನ್ನು ದೂರುದಾರ ಬಳಕೆ ಮಾಡಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

