ಬೆಂಗಳೂರು: ಯಾವುದೇ ತಪ್ಪಿಲ್ಲದೆ ವಾಹನ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಗೆ ಆದಾಯ ಮಿತಿ ನಿರ್ಬಂಧವಿಲ್ಲದೆ 5 ಲಕ್ಷ ಮತ್ತು ಗಾಯಗೊಂಡವರಿಗೆ 2.5 ಲಕ್ಷ ರೂ. ಪರಿಹಾರ ನೀಡುವುದು ಮೋಟಾರ್ ವಾಹನ ತಿದ್ದುಪಡಿ ಕಾಯ್ದೆಯಡಿ ಕಡ್ಡಾಯ ಎಂದು ಹೈಕೋರ್ಟ್ ಆದೇಶಿಸಿದೆ.
ರಸ್ತೆಗೆ ಬಂದ ಅಡ್ಡ ಬಂದ ಎಮ್ಮೆಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬೈಕ್ ರಸ್ತೆ ಬದಿಯ ಕಲ್ಲಿಗೆ ಡಿಕ್ಕಿ ಹೊಡೆದು ಮೃತಪಟ್ಟ ಸವಾರ ವಾರ್ಷಿಕ 40 ಸಾವಿರ ರೂ.ಗೂ ಅಧಿಕ ಆದಾಯ ಹೊಂದಿದ್ದ ಎನ್ನುವ ಕಾರಣಕ್ಕೆ ಪರಿಹಾರ ನಿಗದಿಗೆ ನಿರಾಕರಿಸಿದ್ದ ಮೋಟಾರ್ ವಾಹನ ಪರಿಹಾರ ಕ್ಲೇಮು ನ್ಯಾಯಾಧೀಕರಣದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.
ನ್ಯಾಯಮೂರ್ತಿಗೆ ಕೆ. ಮನ್ಮಥ ರಾವ್ ಅವರ ಪೀಠ ಈ ಆದೇಶ ನೀಡಿದ್ದು, ಯಾವುದೇ ತಪ್ಪು ಇಲ್ಲದೆ ಅಪಘಾತದಲ್ಲಿ ಸಾವು ಪರಿಹಾರಕ್ಕೆ ಅರ್ಹವಾಗಿದ್ದು, ಮೃತ ವ್ಯಕ್ತಿಗೆ 5 ಲಕ್ಷ ರೂ. ಪರಿಹಾರ ಕಡ್ಡಾಯ ಎಂದು ಹೇಳಲಾಗಿದೆ.
ಮೋಟಾರ್ ವಾಹನ ತಿದ್ದುಪಡಿ ಕಾಯ್ದೆಯ ಅನ್ವಯ ಅಪಘಾತ ಸಂಭವಿಸಲು ತನ್ನ ತಪ್ಪಿಲ್ಲದ ಸಂದರ್ಭದಲ್ಲಿ ಅಪಘಾತದಲ್ಲಿ ಮೃತ ವ್ಯಕ್ತಿಗೆ 5 ಲಕ್ಷ ರೂ., ಗಾಯಾಳುಗೆ 2.5 ಲಕ್ಷ ರೂ. ಪರಿಹಾರ ನಿಗದಿಪಡಿಸಲಾಗಿದೆ. ಅಪಘಾತದಲ್ಲಿ ನಿರ್ಲಕ್ಷ್ಯ ಸಾಬೀತುಪಡಿಸುವ ಅಗತ್ಯವಿಲ್ಲದೆ ಶಾಸನಬದ್ಧ ಪರಿಹಾರ ಒದಗಿಸುತ್ತದೆ. ನಿಬಂಧನೆ ಸಹಜವಾಗಿ ಪ್ರಯೋಜನಕಾರಿಯಾಗಿದ್ದು, ಇದರಿಂದ ಮೋಟಾರ್ ಅಪಘಾತಗಳ ಸಂತ್ರಸ್ತರಿಗೆ ಸಾಮಾಜಿಕ ಭದ್ರತೆ ಒದಗಿಸುವ ಉದ್ದೇಶವನ್ನು ಈ ನಿಯಮ ಹೊಂದಿದೆ. ಸುಪ್ರೀಂ ಕೋರ್ಟ್ ನಿರ್ದೇಶನದ ಅನುಸಾರ ಆದಾಯ ಮಿತಿಯಂತಹ ತಾಂತ್ರಿಕ ಕಾರಣ ನೀಡಿ ಪರಿಹಾರ ಕ್ಲೇಮು ತಿರಸ್ಕರಿಸುವುದು ಕಾನೂನಿನಡಿ ಅನೂರ್ಜಿತವಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.

