ಬೆಂಗಳೂರು: ಬಿಡದಿ ಟೌನ್ ಶಿಪ್ ವಿಚಾರವಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮತ್ತೊಂದು ಪತ್ರ ಬರೆದು ಜೂನ್ 27ರಂದು ಬೈರಮಂಗಲ ಗ್ರಾಮದಲ್ಲಿ ಬಹಿರಂಗ ಚರ್ಚೆಗೆ ಬನ್ನಿ ಎಂದು ಆಹ್ವಾನಿಸಿದ್ದಾರೆ.
ಬಿಡದಿ ಉಪನಗರ ಯೋಜನೆ ವಿಷಯದಲ್ಲಿ ಭೂಮಿ ಕಳೆದುಕೊಳ್ಳುತ್ತಿರುವ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಭೈರಮಂಗಲಕ್ಕೆ ಆಗಮಿಸುವಂತೆ ರಾಜ್ಯದ ಮುಖ್ಯಮಂತ್ರಿಗಳನ್ನು ಮತ್ತೊಮ್ಮೆ ಕೋರಿದ್ದೇನೆ. ಈ ಸಂಬಂಧ 2ನೇ ಪತ್ರವನ್ನು ಬರೆದಿದ್ದು, ಮೊದಲೇ ತಿಳಿಸಿದಂತೆ ಜೂನ್ 27, 2026ರಂದು ಚರ್ಚೆಗೆ ಲಭ್ಯವಿದ್ದೇನೆ ಎಂದು ಅವರಿಗೆ ಪತ್ರದ ಮುಖೇನ ಮಾಹಿತಿ ನೀಡಿದ್ದೇನೆ. ಮುಖ್ಯಮಂತ್ರಿಗಳು ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸುವರು ಎಂಬ ನಿರೀಕ್ಷೆಯಲ್ಲಿದ್ದೇನೆ. ಭೈರಮಂಗಲದಲ್ಲಿಯೇ ಸಭೆ ನಡೆಯಬೇಕೆಂಬ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ, ಆ ಪ್ರಶ್ನೆ ಉದ್ಭವಿಸುವುದೂ ಇಲ್ಲ ಎಂದು ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

