HomeIndiaಇನ್‌ಸ್ಟಾಗ್ರಾಮ್‌ನಲ್ಲಿ ಧೂಳೆಬ್ಬಿಸಿದ ಕಾಕ್ರೋಚ್ ಜನತಾ ಪಾರ್ಟಿ: ಫಾಲೋವರ್ಸ್ ಸಂಖ್ಯೆಯಲ್ಲಿ ಬಿಜೆಪಿಯನ್ನೇ ಹಿಂದಿಕ್ಕಿದ ಡಿಜಿಟಲ್ ಆರ್ಮಿ

ಇನ್‌ಸ್ಟಾಗ್ರಾಮ್‌ನಲ್ಲಿ ಧೂಳೆಬ್ಬಿಸಿದ ಕಾಕ್ರೋಚ್ ಜನತಾ ಪಾರ್ಟಿ: ಫಾಲೋವರ್ಸ್ ಸಂಖ್ಯೆಯಲ್ಲಿ ಬಿಜೆಪಿಯನ್ನೇ ಹಿಂದಿಕ್ಕಿದ ಡಿಜಿಟಲ್ ಆರ್ಮಿ

ಬೆಂಗಳೂರು: ದೇಶದ ರಾಜಕಾರಣದಲ್ಲಿ ಸದ್ಯ ಹೊಸ ಇತಿಹಾಸ ಸೃಷ್ಟಿಯಾಗುತ್ತಿದೆ. ಕೇವಲ ಐದೇ ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಹುಟ್ಟಿಕೊಂಡ ಕೇವಲ ಒಂದು ವ್ಯಂಗ್ಯಾತ್ಮಕ ಪೇಜ್ (Satirical Handle), ಇಂದು ದೇಶದ ಅತಿ ದೊಡ್ಡ ರಾಜಕೀಯ ಪಕ್ಷವಾದ ಬಿಜೆಪಿಗೆ ಭರ್ಜರಿ ಟಕ್ಕರ್ ನೀಡಿದೆ ಹೌದು, ಅಭಿಜೀತ್ ದೀಪ್ಕೆ ಎಂಬುವವರು ಆರಂಭಿಸಿರುವ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಇನ್‌ಸ್ಟಾಗ್ರಾಮ್‌ನಲ್ಲಿ ಬರೋಬ್ಬರಿ 1 ಕೋಟಿಗೂ (10.4 Million) ಹೆಚ್ಚು ಫಾಲೋವರ್ಸ್ ಹೊಂದುವ ಮೂಲಕ ಭಾರತೀಯ ಜನತಾ ಪಾರ್ಟಿ (BJP) ಅಧಿಕೃತ ಪೇಜ್ ಅನ್ನು ಹಿಂದಿಕ್ಕಿ ಮುನ್ನುಗ್ಗುತ್ತಿದೆ.

ಪ್ರಸ್ತುತ ಇನ್‌ಸ್ಟಾಗ್ರಾಮ್‌ನಲ್ಲಿ ಬಿಜೆಪಿ 8.7 ಮಿಲಿಯನ್ ಫಾಲೋವರ್ಸ್ ಹೊಂದಿದ್ದರೆ, 143 ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷವು 13.3 ಮಿಲಿಯನ್ ಫಾಲೋವರ್ಸ್ ಹೊಂದಿದೆ. ಈಗ ಈ ಎರಡು ಸಾಂಪ್ರದಾಯಿಕ ರಾಜಕೀಯ ಪಕ್ಷಗಳ ಮಧ್ಯೆ ಕೇವಲ 5 ದಿನಗಳ ಹಿಂದೆ ಹುಟ್ಟಿದ ಕಾಕ್ರೋಚ್ ಜನತಾ ಪಾರ್ಟಿ ಭಾರಿ ಸಂಚಲನ ಮೂಡಿಸಿದೆ.

ಸುಪ್ರೀಂ ಜಡ್ಜ್ ಹೇಳಿಕೆಗೆ ಹುಟ್ಟಿಕೊಂಡ ಪ್ರತಿರೋಧ

ಕೆಲ ದಿನಗಳ ಹಿಂದೆ ಕೋರ್ಟ್ ಕಲಾಪವೊಂದರ ವೇಳೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು, “ಉದ್ಯೋಗವಿಲ್ಲದ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದುಕೊಂಡು, ಸಮಾಜದ ವ್ಯವಸ್ಥೆ ಮೇಲೆ ದಾಳಿ ಮಾಡುವ ಜಿರಳೆಗಳ (Cockroaches) ಹಾಗೂ ಪರಾನ್ನಜೀವಿಗಳ ತರಹ ವರ್ತಿಸುತ್ತಿದ್ದಾರೆ” ಎಂಬ ಅರ್ಥದಲ್ಲಿ ಮಾತನಾಡಿದ್ದರು ಎನ್ನಲಾದ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. (ನಂತರ ಜಡ್ಜ್ ಅವರು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿ, ತಾವು ನಕಲಿ ಪದವಿ ಪಡೆದು ಕಾನೂನು ಮತ್ತು ಮಾಧ್ಯಮ ರಂಗಕ್ಕೆ ಬರುವವರನ್ನು ಉಲ್ಲೇಖಿಸಿದ್ದಾಗಿ ತಿಳಿಸಿದ್ದರು).

ಆದರೆ, ಈlabel ಅನ್ನು ಸವಾಲಾಗಿ ಸ್ವೀಕರಿಸಿದ ಬೋಸ್ಟನ್ ಯೂನಿವರ್ಸಿಟಿಯ ವಿದ್ಯಾರ್ಥಿ ಹಾಗೂ ಮಾಜಿ ಆಪ್ (AAP) ಸೋಶಿಯಲ್ ಮೀಡಿಯಾ ಕಾರ್ಯಕರ್ತ ಅಭಿಜೀತ್ ದೀಪ್ಕೆ, ಮೇ 16 ರಂದು ವ್ಯಂಗ್ಯಾತ್ಮಕವಾಗಿ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಎಂಬ ಪೋಸ್ಟರ್ ಅನ್ನು AI ಮೂಲಕ ಕ್ರಿಯೇಟ್ ಮಾಡಿ ಹಂಚಿಕೊಂಡಿದ್ದರು.

ದೇಶದ ಯುವ ಸಮೂಹ, ವಿಪಕ್ಷ ನಾಯಕರ ಬೆಂಬಲ

ಯಾವಾಗ ಯುವಕರನ್ನು ಜಿರಳೆಗಳಿಗೆ ಹೋಲಿಸಲಾಯಿತೋ, ಇಂಟರ್ನೆಟ್‌ನ ಜೆನ್-ಝಿ (Gen-Z) ಯುವ ಸಮೂಹ ತಾವೆಲ್ಲರೂ ಜಿರಳೆಗಳು ಎಂದು ಘೋಷಿಸಿಕೊಂಡು ಈ ಪೇಜ್ ಅನ್ನು ಮುಗಿಬಿದ್ದು ಫಾಲೋ ಮಾಡಲು ಆರಂಭಿಸಿದರು. ಕೇವಲ 3 ದಿನಗಳಲ್ಲಿ 3 ಲಕ್ಷಕ್ಕೂ ಅಧಿಕ ಯುವಕರು ಗೂಗಲ್ ಫಾರ್ಮ್ ಮೂಲಕ ಈ ಕಾಲ್ಪನಿಕ ಪಕ್ಷದ ಸದಸ್ಯತ್ವ ಪಡೆದುಕೊಂಡಿದ್ದಾರೆ

ಇಷ್ಟೇ ಅಲ್ಲದೆ, ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸೇರಿದಂತೆ ಪ್ರಮುಖ ರಾಜಕೀಯ ನಾಯಕರು ಹಾಗೂ ಪ್ರಭಾವಿ ವ್ಯಕ್ತಿಗಳು ಈ ಡಿಜಿಟಲ್ ಆಂದೋಲನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲ ಸೂಚಿಸಿದ್ದಾರೆ.

ಜಿರಳೆಗಳ ವಿಲಕ್ಷಣ ಪ್ರಣಾಳಿಕೆ (Manifesto):

ಈ ಕಾಲ್ಪನಿಕ ಪಕ್ಷ ಬಿಡುಗಡೆ ಮಾಡಿರುವ 5 ಅಂಶಗಳ ಪ್ರಣಾಳಿಕೆ ಸದ್ಯ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗಿದೆ:

ನಿವೃತ್ತಿಯ ನಂತರ ಮುಖ್ಯ ನ್ಯಾಯಮೂರ್ತಿಗಳಿಗೆ ರಾಜ್ಯಸಭಾ ಸೀಟುಗಳನ್ನು ನೀಡುವಂತಿಲ್ಲ.

ಪಕ್ಷಾಂತರ ಮಾಡುವ ಶಾಸಕರು ಮತ್ತು ಸಂಸದರ ಮೇಲೆ 20 ವರ್ಷಗಳ ನಿಷೇಧ.

ಸಂಸತ್ತಿನಲ್ಲಿ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸದೆ ಮಹಿಳೆಯರಿಗೆ ಶೇ.50 ರಷ್ಟು ಮೀಸಲಾತಿ.

ಉದ್ಯೋಗವಿಲ್ಲದ, ಆನ್‌ಲೈನ್‌ನಲ್ಲಿ ಸದಾ ಸಕ್ರಿಯರಾಗಿರುವ ಮತ್ತು ಸೋಮಾರಿಗಳಾಗಿರುವ ಯುವಕರಿಗೆ ಮುಕ್ತ ಸದಸ್ಯತ್ವ.

ಪಾಕಿಸ್ತಾನಿ ಫಾಲೋವರ್ಸ್ ಆರೋಪಕ್ಕೆ ದೀಪ್ಕೆ ತಿರುಗೇಟು:

ಇದೇ ವೇಳೆ, ಕಾಕ್ರೋಚ್ ಜನತಾ ಪಾರ್ಟಿಗೆ ಪಾಕಿಸ್ತಾನದಿಂದ ಶೇ.50 ರಷ್ಟು ಫಾಲೋವರ್ಸ್ ಬಂದಿದ್ದಾರೆ ಎಂದು ಬಿಜೆಪಿಯ ಐಟಿ ಸೆಲ್ ಪ್ರಮುಖರು ಆರೋಪಿಸಿದ್ದರು. ಇದಕ್ಕೆ ತಕ್ಕ ಉತ್ತರ ನೀಡಿರುವ ಸಂಸ್ಥಾಪಕ ಅಭಿಜೀತ್, ನಮ್ಮ ಅಕೌಂಟ್ ಹ್ಯಾಕ್ ಮಾಡಲು ನೀವು ವಿಫಲರಾಗಿದ್ದೀರಿ. ನಮ್ಮ ಅಧಿಕೃತ ಡೇಟಾ ಇಲ್ಲಿದೆ ನೋಡಿ ಶೇ.94.7 ರಷ್ಟು ಫಾಲೋವರ್ಸ್ ಭಾರತೀಯರೇ ಆಗಿದ್ದಾರೆ. ಭಾರತದ ಯುವಕರನ್ನು ಪಾಕಿಸ್ತಾನಿಗಳು ಎಂದು ಕರೆಯುವುದನ್ನು ನಿಲ್ಲಿಸಿ ಎಂದು ತಿರುಗೇಟು ನೀಡಿದ್ದಾರೆ.

ಸದ್ಯ ತೀವ್ರ ವಿವಾದ ಹಾಗೂ ಚರ್ಚೆಗೆ ಕಾರಣವಾಗಿರುವ ಈ ಕಾಕ್ರೋಚ್ ಜನತಾ ಪಾರ್ಟಿ ಅಧಿಕೃತ X (ಟ್ವಿಟ್ಟರ್) ಖಾತೆಯನ್ನು ಭಾರತದಲ್ಲಿ ಸಸ್ಪೆಂಡ್ (Withheld) ಮಾಡಲಾಗಿದ್ದು, ಸಂಸ್ಥಾಪಕರು ಈಗ ‘Cockroach is Back’ ಹೆಸರಿನಲ್ಲಿ ಹೊಸ ಖಾತೆ ತೆರೆದು ಡಿಜಿಟಲ್ ವಾರ್ ಮುಂದುವರಿಸಿದ್ದಾರೆ. ದೇಶದಲ್ಲಿ ನಿರುದ್ಯೋಗ ಮತ್ತು ವ್ಯವಸ್ಥೆಯ ವಿರುದ್ಧ ಯುವ ಜನಾಂಗಕ್ಕಿರುವ ಆಕ್ರೋಶಕ್ಕೆ ಈ ಇನ್‌ಸ್ಟಾಗ್ರಾಮ್ ಪೇಜ್ ಒಂದು ಕನ್ನಡಿಯಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular