ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕಾಗಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈಗ ಸಂಚಾರ ದಟ್ಟಣೆ ಕಡಿಮೆ ಮಾಡಲು ಮತ್ತಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದ್ದು, ವಾಹನ ಸವಾರರು, ಜನರು ನಿರಾತಂಕವಾಗಿ ಸಂಚಾರವನ್ನು ಕೈಗೊಳ್ಳಬಹುದು.
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಾ.ಸಿ.ಎನ್.ಮಂಜುನಾಥ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾಜೆಕ್ಟ್ ಡೈರೆಕ್ಟರ್ ಮಿಲನ್ ಕುಮಾರ್, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಎ. ಮಂಜು, ಬಿಜೆಪಿ ಮುಖಂಡ ಪ್ರಸಾದ್ ಗೌಡ ಸೇರಿದಂತೆ ಅನೇಕರ ಜೊತೆ ಹೆದ್ದಾರಿಯಲ್ಲಿ ವಿವಿಧ ಸ್ಥಳಗಳನ್ನು ಪರಿಶೀಲಿಸಿದರು.
ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ (NH-275) ಯಲ್ಲಿ ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸಂಚಾರವನ್ನು ಖಚಿತಪಡಿಸುವ ಉದ್ದೇಶದಿಂದ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಹೆದ್ದಾರಿಯ ವಿವಿಧ ಪ್ರಮುಖ ಸ್ಥಳಗಳಲ್ಲಿ ಸ್ಥಳ ಪರಿಶೀಲನೆ ನಡೆಸಿ ಸೂಚನೆಗಳನ್ನು ನೀಡಿದರು.
ಶೇಷಗಿರಿಹಳ್ಳಿ ಗ್ರಾಮದ ಬಳಿ ನಿರ್ಮಾಣ ಹಂತದಲ್ಲಿರುವ ಅಂಡರ್‌ಪಾಸ್ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವ ಕುರಿತು ಸೂಚನೆಗಳನ್ನು ಸಂಸದರು ನೀಡಿದರು. ಮಂಚನಾಯಕನಹಳ್ಳಿ / ಲಕ್ಷ್ಮೀಸಾಗರ ಗೇಟ್ ಬಳಿ ಪಾದಚಾರಿಗಳ ಸುರಕ್ಷತೆಗೆ ಫುಟ್‌ಓವರ್ ಬ್ರಿಡ್ಜ್ ನಿರ್ಮಾಣದ ಅಗತ್ಯ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಿದರು.
ಬಿಡದಿ ಪ್ರಯಾಣಿಕರ ತಂಗುದಾಣದಲ್ಲಿ ಸಾರ್ವಜನಿಕರಿಗೆ ಎದುರಾಗುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಕೆ.ಎಸ್.ಆರ್.ಟಿ.ಸಿ., ಬಿ.ಎಂ.ಟಿ.ಸಿ. ಅಧಿಕಾರಿಗಳು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಚರ್ಚೆಯನ್ನು ಮಾಡಿದರು ಮತ್ತು ಮಾದಾಪುರ ಗೇಟ್ ಬಳಿ ಅಂಡರ್ ಪಾಸ್ ನಿರ್ಮಾಣದ ವಿಚಾರವನ್ನು ವಿಸ್ತೃತವಾಗಿ ಪರಿಶೀಲಿಸಿದರು.
ಸಾರ್ವಜನಿಕ ಹಿತದೃಷ್ಟಿಯಿಂದ ಅಗತ್ಯವಿರುವ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನಗಳನ್ನು ನೀಡಿದರು. ರಸ್ತೆ ಸುರಕ್ಷತೆ ಮತ್ತು ಜನಸೌಕರ್ಯಗಳಿಗೆ ಮೊದಲ ಆದ್ಯತೆ ನೀಡುವ ಬದ್ಧತೆಯೊಂದಿಗೆ ಈ ಪರಿಶೀಲನೆ ನಡೆಸಲಾಗಿದೆ ಎಂದು ಸಂಸದರು ಪೋಸ್ಟ್ ಹಾಕಿದ್ದಾರೆ.
ಪ್ರಮುಖ ರಸ್ತೆ: ಬೆಂಗಳೂರು-ಮೈಸೂರು ನಡುವಿನ ಎಕ್ಸ್‌ಪ್ರೆಸ್ ವೇ ಪ್ರಮುಖ ಹೆದ್ದಾರಿಯಾಗಿದೆ. ಪ್ರತಿದಿನ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಂಚಾರವನ್ನು ನಡೆಸುತ್ತವೆ. ಈ ರಸ್ತೆಯ ಮೂಲಕ ಬೆಂಗಳೂರು-ಮೈಸೂರು ನಗರದ ನಡುವಿನ ಸಂಚಾರದ ಅವಧಿ ಸಹ ಕಡಿಮೆಯಾಗಿದೆ.
ಆದರೆ ರಸ್ತೆಯಲ್ಲಿ ಅಲ್ಲಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಇದನ್ನು ಪರಿಹಾರ ಮಾಡಲು ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಹಲವು ಹೊಸ ಕಾಮಗಾರಿಗೆ ಎನ್‌ಎಚ್‌ಎಐ ಒಪ್ಪಿಗೆ ಸಹ ನೀಡಿದೆ.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಬಳಕೆದಾರರು ಸೂಚಿಸಿರುವ ಕೆಲವು ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈಗಾಗಲೇ ಕೆಲಸ ಮಾಡುತ್ತಿದೆ. ಪ್ರಮುಖ ಸೇತುವೆ ಹಾಗೂ ಆರ್.ಒ.ಬಿ. ಒಂದರ ವಿಸ್ತರಣೆ ಹಾಗೂ ಇತರ ಕಾಮಗಾರಿ ಕೈಗೊಂಡಿದೆ.
ಕೀಲುಗಳ ಸರಿಪಡಿಸುವಿಕೆಯು ವೇಗಗತಿ ದಶಪಥ ಹೆದ್ದಾರಿಯ ಕಾರ್ಯಾಚರಣೆ ಮತ್ತು ನಿರ್ವಹಣೆಯ ಒಂದು ಭಾಗವಾಗಿದೆ. ಸೇತುವೆಯ ಮೇಲಿನ ಜರ್ಕ್ ಗಳನ್ನು ತೆಗೆದುಹಾಕಲು ಮತ್ತು ಸವಾರಿಯ ಗುಣಮಟ್ಟವನ್ನು ಸುಧಾರಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ಸಂಚಾರಕ್ಕೆ ಮುಕ್ತವಾಗಿದೆ.
ಸುಮಾರು 117 ಕಿಮೀ ಉದ್ದದ ಬೆಂಗಳೂರು-ಮೈಸೂರು ಹೆದ್ದಾರಿಯನ್ನು ಎನ್.ಎಚ್.ಎ.ಐ. ನಿರ್ಮಾಣ ಮಾಡಿದ್ದು, ನಿರ್ವಹಣೆ ಸಹ ಮಾಡುತ್ತಿದೆ. ಸರಿಸುಮಾರು 55,000 ಪ್ರಯಾಣಿಕ ವಾಹನಗಳು ಈ ರಸ್ತೆಯಲ್ಲಿ ಪ್ರತಿದಿನ ಸಂಚಾರ ನಡೆಸುತ್ತದೆ. ದೇಶದಾದ್ಯಂತ ಅನ್ವಯವಾಗುವ ರಾಷ್ಟ್ರೀಯ ಹೆದ್ದಾರಿ ಕಾಯಿದೆ ಮತ್ತು ಶುಲ್ಕ ನಿಯಮಗಳ ಪ್ರಕಾರ ಈ ರಸ್ತೆಯಲ್ಲಿ ಟೋಲ್ ಕಟ್ಟಬೇಕಿದೆ.

