ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಈಗ ನೂತನ ಮುಖ್ಯಮಂತ್ರಿ ದಳಪತಿ ವಿಜಯ್ ಅವರ ಒಂದು ನಿರ್ಧಾರ ಭಾರಿ ಚರ್ಚೆಗೆ ಕಾರಣವಾಗಿದೆ. ತಮ್ಮ ಗೆಲುವಿನ ಬಗ್ಗೆ ನಿಖರವಾಗಿ ಭವಿಷ್ಯ ನುಡಿದಿದ್ದ ಜ್ಯೋತಿಷಿ ರಿಕ್ಕಿ ರಾಧನ್ ಪಂಡಿತ್ ವೆಟ್ರಿವೇಲ್ ಅವರಿಗೆ ವಿಜಯ್ ಈಗ ಸರ್ಕಾರದ ಪ್ರಮುಖ ಹುದ್ದೆ ನೀಡಿ ಗೌರವಿಸಿದ್ದಾರೆ.
ಓಎಸ್‌ಡಿ ಹುದ್ದೆಗೆ ಪಂಡಿತ್ ನೇಮಕ
ಸೋಮವಾರ ಹೊರಬಿದ್ದ ಸರ್ಕಾರಿ ಆದೇಶದಂತೆ, ರಾಧನ್ ಪಂಡಿತ್ ಅವರನ್ನು ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯದ ಅಧಿಕಾರಿ (OSD – Political) ಆಗಿ ನೇಮಿಸಲಾಗಿದೆ. ಅಧಿಕಾರ ವಹಿಸಿಕೊಂಡ ದಿನದಿಂದಲೇ ಈ ನೇಮಕಾತಿ ಜಾರಿಗೆ ಬರಲಿದೆ ಎಂದು ತಿಳಿಸಲಾಗಿದೆ.
ಯಾರು ಈ ರಾಧನ್ ಪಂಡಿತ್?
ರಾಜಕೀಯ ಮತ್ತು ಸಿನಿಮಾ ವಲಯದಲ್ಲಿ ಜ್ಯೋತಿಷ್ಯ ಹಾಗೂ ಸಂಖ್ಯಾಶಾಸ್ತ್ರಕ್ಕೆ ಹೆಸರಾಗಿರುವ ರಥನ್ ಪಂಡಿತ್ ಅವರು ಕಳೆದ 40 ವರ್ಷಗಳಿಂದ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.
ನಿಖರ ಭವಿಷ್ಯ: ವಿಜಯ್ ಅವರು ಚುನಾವಣಾ ರಾಜಕೀಯಕ್ಕೆ ಪ್ರವೇಶಿಸಿ ಭರ್ಜರಿ ಜಯ ದಾಖಲಿಸುತ್ತಾರೆ ಎಂದು ಇವರು ಈ ಹಿಂದೆಯೇ ಭವಿಷ್ಯ ನುಡಿದಿದ್ದರು.
ಸುನಾಮಿ ಜಾತಕ: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ವಿಜಯ್ ಅವರ ಜಾತಕವನ್ನು “ಸುನಾಮಿ ಜಾತಕ” ಎಂದು ಬಣ್ಣಿಸಿದ್ದ ಪಂಡಿತ್, ಇದು ಪ್ರಬಲ ರಾಜಕೀಯ ಏಳಿಗೆಯನ್ನು ಸೂಚಿಸುತ್ತದೆ ಎಂದು ಹೇಳಿದ್ದರು.
ಆರು ತಿಂಗಳಿಗೆ ಸರ್ಕಾರ ಪತನವಾಗುತ್ತಾ?
ಒಂದೆಡೆ ವಿಜಯ್ ಅವರ ಆಡಳಿತ ಚುರುಕುಗೊಂಡಿದ್ದರೆ, ಇನ್ನೊಂದೆಡೆ ವಿವಾದಾತ್ಮಕ ಜ್ಯೋತಿಷಿ ವೇಣು ಸ್ವಾಮಿ ಅವರ ಹೇಳಿಕೆ ಸಂಚಲನ ಮೂಡಿಸಿದೆ. ವಿಜಯ್ ಅವರು ಬೇರೆ ಪಕ್ಷದ ಬೆಂಬಲದೊಂದಿಗೆ ಸಿಎಂ ಆಗಿರುವುದರಿಂದ, ಈ ಸರ್ಕಾರ ಆರು ತಿಂಗಳು ಅಥವಾ ಒಂದು ವರ್ಷದೊಳಗೆ ಪತನವಾಗಲಿದೆ ಎಂದು ವೇಣು ಸ್ವಾಮಿ ಭವಿಷ್ಯ ನುಡಿದಿದ್ದಾರೆ.ಒಟ್ಟಿನಲ್ಲಿ, ತನ್ನ ಗೆಲುವನ್ನು ಮೊದಲೇ ಸಾರಿದ್ದ ಜ್ಯೋತಿಷಿಗೆ ಅಧಿಕೃತ ಸ್ಥಾನಮಾನ ನೀಡುವ ಮೂಲಕ ವಿಜಯ್ ತಮ್ಮ ಆಪ್ತ ವಲಯವನ್ನು ಗಟ್ಟಿಗೊಳಿಸಿಕೊಂಡಿದ್ದಾರೆ.

