ಐಪಿಎಲ್ ಬೆಟ್ಟಿಂಗ್ ಚಟಕ್ಕೆ ಬಲಿಯಾಗಿ ಯುವಕನೊಬ್ಬ ಮೈತುಂಬ ಸಾಲ ಮಾಡಿಕೊಂಡು, ಸಾವಿಗೂ ಮುನ್ನ ಮನಕಲಕುವ ಸೆಲ್ಫಿ ವಿಡಿಯೋ ಹಂಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲಮಂಗಲ ತಾಲೂಕಿನ ಅರಿಶಿನಕುಂಟೆಯಲ್ಲಿ ನಡೆದಿದೆ.
ತಮಿಳುನಾಡು ಮೂಲದ ಶಿವಕುಮಾರ್ (28) ಮೃತ ದುರ್ದೈವಿಯಾಗಿದ್ದು, ಕ್ರಿಕೆಟ್ ಬೆಟ್ಟಿಂಗ್ನಲ್ಲಿ ಹಣ ಕಳೆದುಕೊಂಡು ಸಾಲ ತೀರಿಸಲಾಗದೆ ಈ ಕಠಿಣ ನಿರ್ಧಾರ ಕೈಗೊಂಡಿದ್ದಾನೆ. ಅರಿಶಿನಕುಂಟೆಯ ಬಾಡಿಗೆ ಮನೆಯಲ್ಲಿ ನೇಣಿಗೆ ಶರಣಾಗಿರುವ ಈತ, “ನನ್ನ ಸಾವಿಗೆ ನಾನೇ ಕಾರಣ” ಎಂದು ವಿಡಿಯೋದಲ್ಲಿ ಅಳಲು ತೋಡಿಕೊಂಡಿದ್ದು, ನೆಲಮಂಗಲ ಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಡೆತ್ ನೋಟ್ ರೂಪದ ಸೆಲ್ಫಿ ವಿಡಿಯೋ: ಆತ್ಮಹತ್ಯೆಗೂ ಮುನ್ನ ಶಿವಕುಮಾರ್ ಸೆಲ್ಫಿ ವಿಡಿಯೋ ಒಂದನ್ನು ಮಾಡಿದ್ದಾನೆ. ಅದರಲ್ಲಿ, “ನನ್ನ ಸಾವಿಗೆ ನಾನೇ ಕಾರಣ, ಬೇರೆ ಯಾರೂ ಜವಾಬ್ದಾರರಲ್ಲ. ಮೈತುಂಬ ಸಾಲ ಮಾಡಿಕೊಂಡಿರುವುದರಿಂದ ನನಗೆ ಬದುಕಲು ಇಷ್ಟವಿಲ್ಲ. ನನ್ನ ಸ್ನೇಹಿತರು ನನಗೆ ತುಂಬಾ ಸಹಾಯ ಮಾಡಿದ್ದಾರೆ. ಆದರೆ ನಾನೇ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ” ಎಂದು ತನ್ನ ಅಳಲನ್ನು ತೋಡಿಕೊಂಡಿದ್ದಾನೆ.
ಪೊಲೀಸ್ ತನಿಖೆ: ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ನೆಲಮಂಗಲ ಟೌನ್ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

