ಬೆಟ್ಟದ ಮೇಲೆ ಕುಳಿತು ತೇಲುವ ಮೋಡಗಳು ಹಾಗೂ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ ? ಆದರೆ, ಕೇವಲ ಮೋಡಗಳ ವಿಡಿಯೋ ಚಿತ್ರೀಕರಿಸಿದ್ದಕ್ಕೇ ತಿಂಗಳಿಗೆ ಬರೋಬ್ಬರಿ 8.5 ಲಕ್ಷ ರೂಪಾಯಿ (60,000 ಯುವಾನ್) ಸಂಭಾವನೆ ಸಿಕ್ಕಿದೆ ಎಂದರೆ ನೀವು ನಂಬಲೇಬೇಕು! ಚೀನಾದಲ್ಲಿ 23 ವರ್ಷದ ಯುವಕನೊಬ್ಬ ಇಂತಹದೊಂದು ಅಪರೂಪದ ಹಾಗೂ ಆಕರ್ಷಕ ಹುದ್ದೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಎಲ್ಲರ ಗಮನ ಸೆಳೆದಿದ್ದಾನೆ.
ಚೀನಾದ ಹೆನಾನ್ ಪ್ರಾಂತ್ಯದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ ‘ಲಾವೋಜುನ್ ಪರ್ವತ’ (Laojun Mountain) ಆಡಳಿತ ಮಂಡಳಿಯು ಪ್ರವಾಸೋದ್ಯಮ ಪ್ರಚಾರಕ್ಕಾಗಿ ‘ಕ್ಲೌಡ್‌ಸ್ಕೇಪ್ ಅಬ್ಸರ್ವರ್’ (ಮೋಡಗಳ ವೀಕ್ಷಕ) ಎಂಬ ವಿಶಿಷ್ಟ ಹುದ್ದೆಯನ್ನು ಸೃಷ್ಟಿಸಿತ್ತು. ಬೆಟ್ಟದ ಮೇಲೆಯೇ ವಾಸ್ತವ್ಯ ಹೂಡಿ, ಪ್ರತಿದಿನ ಬದಲಾಗುವ ವಾತಾವರಣ, ಮಂಜು ಮತ್ತು ತೇಲುವ ಮೋಡಗಳ ಸುಂದರ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ಜಾಲತಾಣಗಳಲ್ಲಿ ಹಂಚಿಕೊಳ್ಳುವುದೇ ಇದರ ಪ್ರಮುಖ ಕೆಲಸವಾಗಿತ್ತು. ಉಚಿತ ವಸತಿ ಸೌಲಭ್ಯದೊಂದಿಗೆ ಘೋಷಣೆಯಾಗಿದ್ದ ಈ ಹುದ್ದೆಗೆ ಕೇವಲ ಒಂದೇ ವಾರದಲ್ಲಿ ಬರೋಬ್ಬರಿ 3,500ಕ್ಕೂ ಹೆಚ್ಚು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು.
ತೀವ್ರ ಪೈಪೋಟಿಯ ನಡುವೆ ಹೆನಾನ್ ಮೂಲದ 23 ವರ್ಷದ ವ್ಲಾಗರ್ ಲಿ ಸಿಚೆನ್ ಎಂಬ ಯುವಕ ಈ ಅವಕಾಶವನ್ನು ಗಿಟ್ಟಿಸಿಕೊಂಡು ಮೊದಲ ‘ಅಧಿಕೃತ ಮೋಡಗಳ ವೀಕ್ಷಕ’ನಾಗಿ ಆಯ್ಕೆಯಾದನು. ಜುಲೈ 16 ರಿಂದ ಆಗಸ್ಟ್ 15 ರವರೆಗೆ ಒಂದು ತಿಂಗಳ ಕಾಲ ಬೆಟ್ಟದ ಮೇಲೆ ವಾಸವಿದ್ದ ಈತ, ಮುಂಜಾನೆ 5 ಗಂಟೆಯಿಂದಲೇ ಕೆಲಸ ಆರಂಭಿಸಿ ಸೂರ್ಯೋದಯ, ಸೂರ್ಯಾಸ್ತ ಮತ್ತು ಕಣಿವೆಗಳಲ್ಲಿ ಹರಿಯುವ ಮೋಡಗಳ ಅದ್ಭುತ ದೃಶ್ಯಗಳನ್ನು ಸೆರೆಹಿಡಿದು ವಿಡಿಯೋಗಳನ್ನು ಪ್ರಕಟಿಸಿದ್ದಾನೆ.
ಹೊರನೋಟಕ್ಕೆ ಇದು ಸುಲಭದ ಕೆಲಸ ಎನಿಸಿದರೂ, ಬದಲಾಗುವ ಹವಾಮಾನದ ನಡುವೆ ನಿರೀಕ್ಷಿತ ದೃಶ್ಯಗಳನ್ನು ಸೆರೆಹಿಡಿಯಲು ಡ್ರೋನ್ ಮತ್ತು ಕ್ಯಾಮೆರಾ ಹಿಡಿದು ಬೆಟ್ಟಗುಡ್ಡಗಳಲ್ಲಿ ದಿನವಿಡೀ ಅಲೆಯುವುದು ಸವಾಲಾಗಿತ್ತು ಎಂದು ಲಿ ಸಿಚೆನ್ ತನ್ನ ಅನುಭವ ಹಂಚಿಕೊಂಡಿದ್ದಾನೆ. ಈ ನೈಸರ್ಗಿಕ ತಾಣವನ್ನು ಹೊಸ ದೃಷ್ಟಿಕೋನದಿಂದ ಪ್ರವಾಸಿಗರಿಗೆ ಪರಿಚಯಿಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿತ್ತು ಎಂದು ಪರ್ವತ ನಿರ್ವಹಣಾ ಮಂಡಳಿ ತಿಳಿಸಿದ್ದು, ಮುಂದಿನ ದಿನಗಳಲ್ಲೂ ಇಂತಹ ನೇಮಕಾತಿ ಮುಂದುವರಿಸುವ ಸುಳಿವು ನೀಡಿದೆ.

