ಹಾವೇರಿ: ಮಳೆ ಕೊರತೆ ಹಿನ್ನೆಲೆಯಲ್ಲಿ ರೈತರ ನೆರವಿಗೆ ಧಾವಿಸಿರುವ ರಾಣೆಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ ಜಿಲ್ಲಾದ್ಯಂತ ಮೋಡ ಬಿತ್ತನೆಗೆ ಕ್ರಮ ಕೈಗೊಂಡಿದ್ದಾರೆ.
ಜುಲೈ 7 ರಿಂದ ಸತತ ಮೂರು ದಿನಗಳ ಕಾಲ ಹಾವೇರಿ ಜಿಲ್ಲೆಯಲ್ಲಿ ಮೋಡ ಬಿತ್ತನೆ ಕಾರ್ಯ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಪ್ರಕಾಶ್ ಕೋಳಿವಾಡ, ಮೋಡ ಬಿತ್ತನೆಗೆ ಕೇಂದ್ರ ಸರ್ಕಾರದಿಂದ ಪರವಾನಿಗೆ ಕೇಳಲಾಗಿತ್ತು. ಇದೀಗ ಅವಕಾಶ ನೀಡಿದ ಮಾಹಿತಿ ಬಂದಿದೆ. ರಾಜ್ಯದಾದ್ಯಂತ ಸರ್ಕಾರ ಟೆಂಡರ್ ಕರೆಯಬೇಕಿದೆ. ಇದಕ್ಕೆ ಹೆಚ್ಚಿನ ಸಮಯ ತೆಗೆದುಕೊಳ್ಳುವುದರಿಂದ ಜಿಲ್ಲೆಯ ಆರು ಶಾಸಕರು ಸೇರಿ 8 ತಾಲೂಕುಗಳಲ್ಲಿ ಮೂರು ದಿನಗಳ ಕಾಲ ಮೋಡ ಬಿತ್ತನೆ ಕಾರ್ಯ ಕೈಗೊಂಡಿದ್ದೇವೆ. ಒಂದು ಗಂಟೆ ಕಾರ್ಯಾಚರಣೆಗೆ 15 ಲಕ್ಷ ರೂಪಾಯಿ ವೆಚ್ಚವಾಗಲಿದ್ದು, ಸಂಪೂರ್ಣ ವೆಚ್ಚವನ್ನು ನಾವೇ ಭರಿಸುತ್ತೇವೆ ಎಂದು ತಿಳಿಸಿದ್ದಾರೆ.
ಮೋಡ ಬಿತ್ತನೆ ಕಾರ್ಯಕ್ಕಾಗಿ ಅಮೆರಿಕದಲ್ಲಿ ವಿಶೇಷವಾಗಿ ಸಿದ್ಧಪಡಿಸಲಾದ ಅತ್ಯಾಧುನಿಕ ವಿಮಾನ ಬಳಕೆ ಮಾಡಲಾಗುವುದು. ಸೋಮವಾರ ಹುಬ್ಬಳ್ಳಿ ನಿಲ್ದಾಣಕ್ಕೆ ವಿಮಾನ ತಲುಪಲಿದ್ದು, ಈಗಾಗಲೇ ಮೋಡ ಬಿತ್ತನೆ ಕಾರ್ಯಾಚರಣೆಗೆ ಪೈಲಟ್ ಗಳಿಗೆ ವಿಶೇಷ ತರಬೇತಿ ಕೂಡ ನೀಡಲಾಗಿದೆ ಎಂದು ಹೇಳಿದ್ದಾರೆ.

