ಯುದ್ಧ ಬರಲಿ, ಆರ್ಥಿಕತೆ ಕುಸಿಯಲಿ ಅಥವಾ ಜಗತ್ತೇ ತಲೆಕೆಳಗಾಗಲಿ ಮನುಷ್ಯನಿಗೆ ಚಿನ್ನದ ಮೇಲಿರುವ ವ್ಯಾಮೋಹ ಮಾತ್ರ ಕಮ್ಮಿಯಾಗಲ್ಲ. ಹಳದಿ ಲೋಹ ಅಂದ್ರೆ ಬರೀ ಆಭರಣವಲ್ಲ, ಅದು ಅಂತಾರಾಷ್ಟ್ರೀಯ ಮಟ್ಟದ ಆಸ್ತಿ. ಇಲ್ಲಿಯವರೆಗೆ ಜಗತ್ತಿನಲ್ಲಿ ಸುಮಾರು 2,09,000 ಟನ್ ಚಿನ್ನವನ್ನು ಹೊರತೆಗೆಯಲಾಗಿದೆ. ಆದರೆ, ಇಡೀ ವಿಶ್ವದಲ್ಲೇ ಒಂದು ನಗರವನ್ನು ಗೋಲ್ಡ್ ಕ್ಯಾಪಿಟಲ್ ಆಫ್ ದಿ ವರ್ಲ್ಡ್ ಅಥವಾ ಚಿನ್ನದ ರಾಜಧಾನಿ ಎಂದು ಕರೆಯಲಾಗುತ್ತದೆ. ಅದೇ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್
ಇಗೋಲಿ: ಚಿನ್ನದಿಂದಲೇ ಹುಟ್ಟಿದ ನಗರ
ಜೋಹಾನ್ಸ್‌ಬರ್ಗ್ ಕೇವಲ ನಗರವಲ್ಲ, ಅದೊಂದು ಚಿನ್ನದ ಗಣಿ. ಸ್ಥಳೀಯರು ಇದನ್ನು ಪ್ರೀತಿಯಿಂದ ಇಗೋಲಿ (eGoli) ಎಂದು ಕರೆಯುತ್ತಾರೆ, ಇದರ ಅರ್ಥ ಬಂಗಾರದ ತಾಣ. ಈ ನಗರದ ಇತಿಹಾಸವೇ ರೋಚಕವಾಗಿದೆ:
ಆವಿಷ್ಕಾರದ ಮಂತ್ರದಂಡ: 1886 ರಲ್ಲಿ ಆಸ್ಟ್ರೇಲಿಯಾದ ಅನ್ವೇಷಕ ಜಾರ್ಜ್ ಹ್ಯಾರಿಸನ್ ಲ್ಯಾಂಗ್ಲಾಗ್ಟೆ ಫಾರ್ಮ್‌ನಲ್ಲಿ ಬಂಗಾರದ ಅದಿರನ್ನು ಪತ್ತೆಹಚ್ಚಿದ. ಈ ಸುದ್ದಿ ಹಬ್ಬುತ್ತಿದ್ದಂತೆ ಜಗತ್ತಿನ ಮೂಲೆ ಮೂಲೆಗಳಿಂದ ಜನರು ಲಗ್ಗೆ ಇಟ್ಟರು. ಇದನ್ನು ಗೋಲ್ಡ್ ರಶ್ ಎನ್ನಲಾಗುತ್ತದೆ.ಒಂದು ಸಣ್ಣ ಗುಡಿಸಲುಗಳ ವಸಾಹತಾಗಿದ್ದ ಈ ಪ್ರದೇಶ, ಕೇವಲ ಹತ್ತು ವರ್ಷಗಳಲ್ಲಿ ದಕ್ಷಿಣ ಆಫ್ರಿಕಾದ ಬೃಹತ್ ಮಹಾನಗರವಾಗಿ ಬೆಳೆದು ನಿಂತಿತು
ವಿಟ್‌ವಾಟರ್ಸ್‌ರಾಂಡ್: ವಿಶ್ವದ ಅತಿದೊಡ್ಡ ಖಜಾನೆ
ಜೋಹಾನ್ಸ್‌ಬರ್ಗ್ ವಿಶ್ವದ ರಾಜಧಾನಿಯಾಗಲು ಮುಖ್ಯ ಕಾರಣ ಇಲ್ಲಿನ ವಿಟ್‌ವಾಟರ್ಸ್‌ರಾಂಡ್ ಬೇಸಿನ್ (Witwatersrand Basin).ಮಾನವ ಇತಿಹಾಸದಲ್ಲಿ ಇದುವರೆಗೆ ಗಣಿಗಾರಿಕೆ ಮಾಡಲಾದ ಒಟ್ಟು ಚಿನ್ನದ ಪೈಕಿ 40% ರಷ್ಟು ಪಾಲು ಕೇವಲ ಈ ಒಂದು ಪ್ರದೇಶದಿಂದಲೇ ಬಂದಿದೆ.2.7 ಬಿಲಿಯನ್ ವರ್ಷಗಳ ಹಳೆಯ ರಹಸ್ಯ ವಿಜ್ಞಾನಿಗಳ ಪ್ರಕಾರ, ಶತಕೋಟಿ ವರ್ಷಗಳ ಹಿಂದೆ ಪ್ರಾಚೀನ ನದಿಗಳು ಪರ್ವತಗಳಿಂದ ಚಿನ್ನದ ಕಣಗಳನ್ನು ಹೊತ್ತು ತಂದು ಇಲ್ಲಿ ಶೇಖರಿಸಿದ್ದವು
ಭೂಮಿಯ ಗರ್ಭದಲ್ಲಿ 60°C ಶಾಖ
ಇಲ್ಲಿ ವಿಶ್ವದ ಅತ್ಯಂತ ಆಳವಾದ ಗಣಿಗಳಿವೆ. ಪ್ರಸಿದ್ಧ ಎಂಪೋನೆಂಗ್ (Mponeng) ಗಣಿ ಭೂಮಿಯ ಒಳಗೆ 4 ಕಿಲೋಮೀಟರ್ ಆಳದಲ್ಲಿದೆ. ಅಲ್ಲಿನ ಬಂಡೆಗಳ ಉಷ್ಣತೆ 60°C ಇರುತ್ತದೆ ಇಷ್ಟು ಬಿಸಿಯಲ್ಲೂ ಸುಧಾರಿತ ಕೂಲಿಂಗ್ ಸಿಸ್ಟಮ್ ಬಳಸಿ ಗಣಿಗಾರಿಕೆ ನಡೆಸಲಾಗುತ್ತಿದೆ.
ಜೋಹಾನ್ಸ್‌ಬರ್ಗ್ ಕೇವಲ ಆರ್ಥಿಕ ಕೇಂದ್ರವಲ್ಲ, ಇದು ಬಂಗಾರದ ಮೇಲೆಯೇ ಕುಳಿತಿದೆ.ಈ ನಗರದಲ್ಲಿ 1 ಕೋಟಿಗೂ ಹೆಚ್ಚು ಮರಗಳಿದ್ದು, ಇದು ವಿಶ್ವದ ಅತಿದೊಡ್ಡ ಮಾನವ ನಿರ್ಮಿತ ನಗರ ಕಾಡುಗಳಲ್ಲಿ ಒಂದಾಗಿದೆ,ಗಣಿಗಾರಿಕೆ ನಡೆದಿದ್ದರೂ, ಭೂವಿಜ್ಞಾನಿಗಳ ಪ್ರಕಾರ ಭೂಮಿಯ ಇನ್ನೂ ಆಳದಲ್ಲಿ ಅತಿದೊಡ್ಡ ಪ್ರಮಾಣದ ಚಿನ್ನ ಮಣ್ಣಿನ ಕೆಳಗೆ ಹೂತುಹೋಗಿದೆ.ನಗರದ ಸುತ್ತಲೂ ಇಂದಿಗೂ ಕಾಣುವ ಹಳದಿ ಮಣ್ಣಿನ ದೊಡ್ಡ ಗುಡ್ಡಗಳು ಇಲ್ಲಿನ ಸುದೀರ್ಘ ಗಣಿಗಾರಿಕೆಯ ನೆನಪುಗಳಾಗಿವೆ.

