ಬಜೆಟ್ ಬೆನ್ನಲ್ಲೇ ಧೂಮಪಾನಿಗಳಿಗೆ ಕೇಂದ್ರ ಸರ್ಕಾರ ಬಿಸಿ ಮುಟ್ಟಿಸಿದೆ. ತಂಬಾಕು ಉತ್ಪನ್ನಗಳ ಮೇಲೆ ಹೊಸ ಅಬಕಾರಿ ಸುಂಕ ಮತ್ತು ಸೆಸ್ ವಿಧಿಸಿರುವುದರಿಂದ ಫೆಬ್ರವರಿ 1 ರಿಂದ ಸಿಗರೇಟ್ ಮತ್ತು ಪಾನ್ ಮಸಾಲಾ ಬೆಲೆಗಳಲ್ಲಿ ಗಣನೀಯ ಏರಿಕೆಯಾಗಲಿದೆ. ಹೊಸ ತೆರಿಗೆ ಪದ್ಧತಿಯ ಅನ್ವಯ, ಸಿಗರೇಟ್ ಬೆಲೆಯು ಶೇಕಡಾ 15 ರಿಂದ 40 ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಲೆಕ್ಕಾಚಾರ ಹೇಗಿರಲಿದೆ? ಹಣಕಾಸು ಸಚಿವಾಲಯದ ಮೂಲಗಳ ಪ್ರಕಾರ, ಜಿಎಸ್‌ಟಿ ಮತ್ತು ಹೊಸ ಅಬಕಾರಿ ಸುಂಕದ ಪರಿಣಾಮವಾಗಿ ಸಿಗರೇಟ್ ಬೆಲೆಗಳಲ್ಲಿ ಭಾರಿ ವ್ಯತ್ಯಾಸವಾಗಲಿದೆ. ಒಂದು ವೇಳೆ ಕಂಪನಿಗಳು ಈ ತೆರಿಗೆಯ ಪೂರ್ಣ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಿದರೆ ಬೆಲೆ ಹೀಗಿರಲಿದೆ:
- ಈಗ 10 ರೂಪಾಯಿ ಇರುವ ಒಂದು ಸಿಗರೇಟ್ ಬೆಲೆ ಸರಿಸುಮಾರು 14 ರೂಪಾಯಿಗೆ ಏರಿಕೆಯಾಗಬಹುದು.
- ಸದ್ಯ 20 ರೂಪಾಯಿ ಬೆಲೆಯಿರುವ ಸಿಗರೇಟ್‌ಗೆ ಇನ್ನು ಮುಂದೆ ಸರಿಸುಮಾರು 26.8 ರೂಪಾಯಿ (ಅಂದರೆ ಸುಮಾರು 27 ರೂ.) ನೀಡಬೇಕಾಗಬಹುದು.
- 10 ಸಿಗರೇಟ್‌ಗಳ ಒಂದು ಪ್ಯಾಕೆಟ್ ಬೆಲೆ 100 ರೂಪಾಯಿ ಇದ್ದರೆ, ಅದು 134 ರೂಪಾಯಿಗೆ ತಲುಪುವ ಸಾಧ್ಯತೆಯಿದೆ.
- ದೊಡ್ಡ ಪ್ಯಾಕೆಟ್‌ಗಳ (20 ಸಿಗರೇಟ್) ಬೆಲೆ 380 ರೂಪಾಯಿಯಿಂದ 510 ರೂಪಾಯಿವರೆಗೆ ಏರಬಹುದು.
ಬೀಡಿ ಸೇದುವವರಿಗೆ ವಿನಾಯಿತಿ? ಈ ಹೊಸ ತೆರಿಗೆ ನೀತಿಯಲ್ಲಿ ಬೀಡಿ ಸೇದುವವರಿಗೆ ಯಾವುದೇ ಹೆಚ್ಚಿನ ಹೊರೆ ಬೀಳುವುದಿಲ್ಲ ಎಂದು ವರದಿಯಾಗಿದೆ. ಬೀಡಿ ಮೇಲಿನ ಜಿಎಸ್‌ಟಿ ಮತ್ತು ಅಬಕಾರಿ ಸುಂಕದಲ್ಲಿ ಯಾವುದೇ ಬದಲಾವಣೆ ಮಾಡದಿರಲು ಸರ್ಕಾರ ನಿರ್ಧರಿಸಿದೆ. ಇದರಿಂದಾಗಿ ಬೀಡಿ ಬೆಲೆಗಳು ಸದ್ಯಕ್ಕೆ ಸ್ಥಿರವಾಗಿರಲಿವೆ.
ತಜ್ಞರ ಅಭಿಪ್ರಾಯ: ತಂಬಾಕು ಬಳಕೆಯನ್ನು ನಿಯಂತ್ರಿಸುವ ಮತ್ತು ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಹಠಾತ್ ಬೆಲೆ ಏರಿಕೆಯು ಸಾಮಾನ್ಯ ಗ್ರಾಹಕರಿಗೆ ಮತ್ತು ಈ ಕ್ಷೇತ್ರದಲ್ಲಿ ಹೂಡಿಕೆ ಮಾಡಿರುವ ಕಂಪನಿಗಳಿಗೆ ದೊಡ್ಡ ಹೊಡೆತ ನೀಡುವ ಮುನ್ಸೂಚನೆ ನೀಡಿದೆ.

