ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಹಿರಿಯೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಅತ್ಯಾಚಾರಕ್ಕೆ ಯತ್ನಿಸಿ ಮಹಿಳೆಯನ್ನು ಕೊಲೆ ಮಾಡಿದ ಆರೋಪ ಕೇಳಿ ಬಂದಿದೆ.
45 ವರ್ಷದ ಮಹಿಳೆಯ ಮೇಲೆ ಅಪ್ರಾಪ್ತ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಪ್ರತಿರೋಧ ವ್ಯಕ್ತಪಡಿಸಿದ್ದಕ್ಕೆ ಮಹಿಳೆ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಸಂತ್ರಸ್ತ ಮಹಿಳೆ ಮೇಲೆ ಅಪ್ರಾಪ್ತನಿಂದ ಹಲ್ಲೆ ಆರೋಪ ಕೇಳಿ ಬಂದಿದೆ. ಗಲಾಟೆಯ ವೇಳೆ ತನ್ನ ಪುತ್ರನಿಗೆ ಮಹಿಳೆ ಕರೆ ಮಾಡಿದ್ದರು. ಇದೇ ವೇಳೆ ತನ್ನ ತಂದೆ ಮತ್ತು ಚಿಕ್ಕಪ್ಪಂದಿರನ್ನು ಆರೋಪಿ ಕರೆಸಿದ್ದ.
ಬಳಿಕ ಮಹಿಳೆ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ. ಮೃತಳ ಪುತ್ರ ಸ್ಥಳಕ್ಕೆ ಬರುವಷ್ಟರಲ್ಲಿ ಮಚ್ಚಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ತೀವ್ರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ಶಿಫ್ಟ್ ಮಾಡುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ. ಅಪ್ರಾಪ್ತ ಮತ್ತು ಆತನ ತಂದೆ, ಚಿಕ್ಕಪ್ಪಂದಿರು ಸೇರಿ ಐವರ ವಿರುದ್ಧ ಕೇಸು ದಾಖಲಾಗಿದೆ. ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕೊಲೆ ಆರೋಪಿ ಮೇಲೆ ಫೈರಿಂಗ್
ಶಿವಮೊಗ್ಗ: ರೌಡಿಶೀಟರ್ ಕಿರಣ್ ಅಲಿಯಾಸ್ ಕುಳ್ಳಿ ಕೊಲೆ ಪ್ರಕರಣದ ಆರೋಪಿ ಉಮೇಶನಾಯ್ಕ ಕಾಲಿಗೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಶಿವಮೊಗ್ಗದ ಎನ್ಆರ್ ಪುರ ರಸ್ತೆಯ ಲಿಂಗಪುರ ಬಳಿ ಘಟನೆ ನಡೆದಿದೆ. ನಿನ್ನೆ ರಾತ್ರಿ ಬಂಧನಕ್ಕೆ ತೆರಳಿದ್ದಾಗ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಉಮೇಶನಾಯ್ಕ ಪರಾರಿಯಾಗಲು ಮುಂದಾಗಿದ್ದಾನೆ. ಈ ವೇಳೆ ಆತ್ಮರಕ್ಷಣೆಗಾಗಿ ತುಂಗಾನಗರ ಸಿಪಿಐ ಗುರುರಾಜ್ ಫೈರಿಂಗ್ ಮಾಡಿದ್ದಾರೆ. ಗಾಯಾಳು ಆರೋಪಿ ಉಮೇಶನಾಯ್ಕನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಮೆಗ್ಗಾನ್ ಆಸ್ಪತ್ರೆಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕ ನಿಖಿಲ್ ಬಿ. ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರೌಡಿಶೀಟರ್ ಕೊಲೆ:
ಚಾಕುವಿನಿಂದ ಇರಿದು ರೌಡಿಶೀಟರ್ ಕೊಲೆ ಮಾಡಿದ ಘಟನೆ ಶಿವಮೊಗ್ಗ ಸಮೀಪದ ರಾಮನಕೊಪ್ಪ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಭಾನುವಾರ ಇಸ್ಪೀಟ್ ಆಡುತ್ತಿದ್ದ ರೌಡಿಶೀಟರ್ ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.
ಕಿರಣ್ ಅಲಿಯಾಸ್ ಕುಳ್ಳಿ(28) ಕೊಲೆಯಾದ ವ್ಯಕ್ತಿ. ರಾಮನಕೊಪ್ಪ ಗ್ರಾಮದ ಹೊರವಲಯದಲ್ಲಿ ಇಸ್ಪೀಟ್ ಆಡುತ್ತಿದ್ದ ವೇಳೆ ಅಲ್ಲಿಗೆ ಬಂದ ದುಷ್ಕರ್ಮಿಗಳು ಹಣಕಾಸಿನ ವಹಿವಾಟು ಕುರಿತು ಮಾತನಾಡಲು ಕರೆದಿದ್ದಾರೆ. ಈ ವೇಳೆ ಕಿರಣ್ ಮೇಲೆ ಚಾಕುವಿನಿಂದ ದಾಳಿ ನಡೆಸಿ ಕೊಲೆ ಮಾಡಿದ್ದಾರೆ. ವೈಯಕ್ತಿಕ ಮತ್ತು ಹಳೆಯ ದ್ವೇಷವೇ ಕೃತ್ಯಕ್ಕೆ ಕಾರಣವೆನ್ನಲಾಗಿದೆ. ತುಂಗಾನಗರ ಠಾಣೆ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಉಮೇಶ್ವನಾಯ್ಕನ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.
ಎರಡು ಗುಂಪುಗಳ ನಡುವೆ ಮಾರಾಮಾರಿ
ದಾವಣಗೆರೆ: ದಾವಣಗೆರೆಯಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ತಲ್ವಾರ್ ಮತ್ತು ದೊಣ್ಣೆಗಳಿಂದ ಎರಡು ಗುಂಪುಗಳು ಹೊಡೆದಾಡಿಕೊಂಡಿವೆ. ದಾವಣಗೆರೆ ನಗರದ ಬಿ.ಡಿ. ಲೇಔಟ್ ನಲ್ಲಿ ಘಟನೆ ನಡೆದಿದೆ. ಮೈನು, ಜುನೈದ್, ಇರ್ಫಾನ್ ಸೇರಿ ನಾಲ್ವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಮೊಹಮ್ಮದ್ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಯುವಕರ ಗುಂಪಿನಿಂದ ದಾಳಿ ನಡೆದಿದೆ. ಹಳೆಯ ವೈಷಮ್ಯ, ಕ್ಷುಲ್ಲಕ ಕಾರಣಕ್ಕೆ ಗುಂಪು ಘರ್ಷಣೆ ನಡೆದಿದೆ ಎನ್ನಲಾಗಿದೆ. ಗಾಯಾಳುಗಳಿಗೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ದಾವಣಗೆರೆಯ ಆಜಾದ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

