HomeKarnatakaಐಪಿಎಲ್ ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಸಿಸಿಟಿವಿ ಕೇಬಲ್ ಕಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಐಪಿಎಲ್ ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಸಿಸಿಟಿವಿ ಕೇಬಲ್ ಕಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಬೆಂಗಳೂರು: ಐಪಿಎಲ್ ಪಂದ್ಯಗಳ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಸಿಟಿವಿ ಕೇಬಲ್ ಕಟ್ ಮಾಡಲಾಗಿತ್ತು ಎಂಬ ಆರೋಪ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪಂದ್ಯದ ವೇಳೆ ಯಾವುದೇ ದುಷ್ಕೃತ್ಯ ಅಥವಾ ಭದ್ರತಾ ಲೋಪ ಆಗಿರಲಿಲ್ಲ. ಬಾಕಿ ಹಣ ನೀಡದೇ ವಂಚಿಸಲು ಸಿಸಿಟಿವಿ ತಂತ್ರಜ್ಞಾನ ಸಂಸ್ಥೆಗಳು ಅಮಾಯಕರ ಮೇಲೆ ಸುಳ್ಳು ಕೇಸ್ ದಾಖಲಿಸಿರುವುದು ಬೆಳಕಿಗೆ ಬಂದಿದೆ.

ಆರ್‌ಸಿಬಿ ಮತ್ತು ಕೆಎಸ್‌ಸಿಎ ಮುಖಾಂತರ ಸ್ಟೇಡಿಯಂನ ಭದ್ರತಾ ನಿಯಮಾವಳಿ (SOP) ಸಂಬಂಧಿಸಿದಂತೆ ಒಟ್ಟು 7 ಕೋಟಿ ರೂಪಾಯಿಗಳ ಯೋಜನೆ ಸಿದ್ಧವಾಗಿತ್ತು. ಇದರಲ್ಲಿ ಹರಿಯಾಣ ಮೂಲದ ಸ್ಟಾಕು (Staqu) ಸಂಸ್ಥೆಗೆ 4.5 ಕೋಟಿಗೆ ಟೆಂಡರ್ ನೀಡಲಾಗಿತ್ತು. ಆ ಬಳಿಕ ಎರಡನೇ ವೆಂಡರ್ ಆಗಿ ಗುಜರಾತ್ ಮೂಲದ ಟೆಕ್‌ಸ್ಟಿಚ್ ಸಂಸ್ಥೆ ಹಾಗೂ ಅಂತಿಮವಾಗಿ ಪುಣೆ ಮೂಲದ ಐವಿಎಸ್ ಟೆಕ್ ಸೆಕ್ಯೂರ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಸಿಸಿಟಿವಿ ಅಳವಡಿಕೆಯ ಹೊಣೆ ಸಿಕ್ಕಿತ್ತು. ಐವಿಎಸ್ ಸಂಸ್ಥೆಯು ಬೆಂಗಳೂರಿನ ಸಿಬ್ಬಂದಿ ಮೂಲಕ 1.2 ಕೋಟಿ ರೂಪಾಯಿಯ ಕೊಟೇಷನ್ ನೀಡಿ ಕೆಲಸ ಮುಗಿಸಿತ್ತು. ಆದರೆ ಮೂರು ಪಂದ್ಯಗಳು ಮುಗಿದ ಬಳಿಕ 1 ಕೋಟಿ ರೂಪಾಯಿ ನೀಡಿ, ಇನ್ನುಳಿದ 40 ಲಕ್ಷ ರೂಪಾಯಿ ಬಾಕಿ ಹಣ ನೀಡದೇ ಕಂಪನಿಗಳು ಸತಾಯಿಸಿದ್ದವು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೊನೆಯ ಪಂದ್ಯಕ್ಕೂ ಮುನ್ನ ಕ್ರೀಡಾಂಗಣದಲ್ಲಿ ಪವರ್ ಸಮಸ್ಯೆಯಿಂದಾಗಿ ಸಿಸಿಟಿವಿ ಆಫ್ ಆಗಿತ್ತು. ಈ ವೇಳೆ ಐವಿಎಸ್ ಸಂಸ್ಥೆಯು ಬಾಕಿ ಹಣ ನೀಡುವಂತೆ ಕೇಳಿತ್ತಾದರೂ, ಪಂದ್ಯಕ್ಕೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಅಬ್ದುಲ್ ಕಲಾಂ ಮತ್ತು ಮಂಜುನಾಥ್ ಎಂಬ ಇಬ್ಬರು ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಿತ್ತು. ಆದರೆ ತಾಂತ್ರಿಕ ಸಮಸ್ಯೆ ಬಗೆಹರಿಸಲಾಗದೆ ಅವರು ಟೆಕ್ನಿಕಲ್ ಟೀಮ್ ಕರೆಯಲು ವಾಪಸ್ ಬಂದಿದ್ದರು. ಇದೇ ಸಿಸಿಟಿವಿ ದೃಶ್ಯಾವಳಿಗಳನ್ನು ಇಟ್ಟುಕೊಂಡು ಸ್ಟಾಕು ಕಂಪನಿಯ ಆದಿತ್ಯ ಭಟ್ ಎಂಬುವವರು ವೈರ್ ಕಟ್ ಮಾಡಿದ್ದಾರೆ ಎಂದು ಅಮಾಯಕರ ಮೇಲೆ ಸುಳ್ಳು ದೂರು ನೀಡಿದ್ದರು.

ಕಾಲ್ತುಳಿತ ದುರಂತದ ಬಳಿಕ ಎಸ್‌ಒಪಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕೋರ್ಟ್ ಸೂಚಿಸಿತ್ತು. ಎಐ ಕ್ಯಾಮೆರಾಗಳನ್ನು ಅಳವಡಿಸುವುದಾಗಿ ಹೇಳಿ, ಕೇವಲ ಹೆಡ್ ಕೌಂಟ್ ಮಾತ್ರ ಸಾಧ್ಯವಿರುವ ಸಾಮಾನ್ಯ ಕ್ಯಾಮೆರಾಗಳನ್ನು ಅಳವಡಿಸಿ ವಂಚಿಸಲಾಗಿದೆ ಎಂದು ಐವಿಎಸ್ ಪ್ರಾಜೆಕ್ಟ್ ಮ್ಯಾನೇಜರ್ ವರುಣ್ ಹಾಗೂ ಸಿಬ್ಬಂದಿ ಅಚ್ಚುತ್ ಆರೋಪಿಸಿದ್ದಾರೆ. 1.5 ಕೋಟಿ ಬಜೆಟ್‌ನಲ್ಲಿ ಎಐ ಕ್ಯಾಮೆರಾ ಅಳವಡಿಸಲು ಸಾಧ್ಯವೇ ಇಲ್ಲದಿದ್ದರೂ ತಪ್ಪು ಮುಚ್ಚಿಹಾಕಲು ಈ ಹೂಡಿಕೆ ನಾಟಕವಾಡಲಾಗಿದೆ ಎನ್ನಲಾಗಿದೆ.

ಕ್ರೀಡಾಂಗಣದಲ್ಲಿ ಕೆಲಸ ಮಾಡಲು ಕೆಎಸ್‌ಸಿಎ ಐಟಿ ಹೆಡ್ ಎನ್ನಲಾದ ರವಿ ಎಂಬಾತ ಆನ್‌ಲೈನ್ ಮೂಲಕ 40 ಸಾವಿರ ಹಾಗೂ ನಗದು ರೂಪದಲ್ಲಿ 2 ಲಕ್ಷಕ್ಕೂ ಅಧಿಕ ಹಣವನ್ನು ಲಂಚವಾಗಿ ಪಡೆದಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ. ಈಗ ಬಾಕಿ ಹಣ ಕೇಳಿದರೆ ಕೆಎಸ್‌ಸಿಎ ಹಾಗೂ ಟೆಕ್‌ಸ್ಟಿಚ್ ಕಂಪನಿಗಳು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುತ್ತಿದ್ದಾರೆ.

ಪೊಲೀಸ್ ತನಿಖೆಯಲ್ಲೂ ಇದು ಹಣಕಾಸಿನ ವಿಚಾರಕ್ಕೆ ನಡೆದ ಗಲಾಟೆ ಎಂಬುದು ಪತ್ತೆಯಾಗಿದ್ದು, ಇಬ್ಬರು ಯುವಕರಿಗೆ ಸ್ಟೇಷನ್ ಬೇಲ್ ನೀಡಲಾಗಿದೆ. ಆದರೆ ಸುಳ್ಳು ಆರೋಪದಿಂದಾಗಿ ಯುವಕರು ಮುಜುಗರಕ್ಕೊಳಗಾಗಿದ್ದಾರೆ. ಈ ಭದ್ರತಾ ಗೊಂದಲ ಹಾಗೂ 10 ಸಾವಿರ ಐಪಿಎಲ್ ಟಿಕೆಟ್‌ಗಳ ಬೇಡಿಕೆಯೇ ಐಪಿಎಲ್‌ನ ಅಂತಿಮ ಪಂದ್ಯಗಳನ್ನು ಗುಜರಾತ್‌ಗೆ ಸ್ಥಳಾಂತರಿಸಲು ಪ್ರಮುಖ ಕಾರಣವಾಗಿತ್ತು ಎಂಬ ಆಘಾತಕಾರಿ ಅಂಶವೂ ಬೆಳಕಿಗೆ ಬಂದಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular