ಮಕ್ಕಳು ಆಟವಾಡುವಾಗ ಸಣ್ಣಪುಟ್ಟ ಜಗಳ ಮಾಡಿಕೊಳ್ಳುವುದು ಸಹಜ. ಆದರೆ ಮಕ್ಕಳ ಜಗಳವನ್ನು ದೊಡ್ಡದು ಮಾಡಿ, ವ್ಯಕ್ತಿಯೊಬ್ಬ ಮಹಿಳೆಯ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿರುವ ಘಟನೆ ವಿಯೆಟ್ನಾಂನ ಹನೋಯಿ ನಗರದಲ್ಲಿ ನಡೆದಿದೆ. ಇಲ್ಲಿನ ಸ್ಕೈ ಸೆಂಟ್ರಲ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದ ಈ ಕೃತ್ಯದ ಸಿಸಿಟಿವಿ ದೃಶ್ಯಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿವೆ.
ಘಟನೆಯ ಹಿನ್ನೆಲೆ ಏನು?
ಆರೋಪಿ ದಂಗ್ ಚಿ ತಾನ್ ಎಂಬಾತ ತನ್ನ ಮಗನ ಜೊತೆ ಆಟವಾಡಲು ನಿರಾಕರಿಸಿದ ಮತ್ತು ಮಗನಿಗೆ ಪೆಟ್ಟು ಮಾಡಿದ್ದಾಳೆ ಎಂಬ ಕಾರಣಕ್ಕೆ ನೆರೆಯ ಮಹಿಳೆ ಎಂಎಸ್ ಎನ್ ಟಿ ಎಂಬುವವರ ಜೊತೆ ವಾಗ್ವಾದಕ್ಕಿಳಿದಿದ್ದನು. ಈ ಜಗಳ ವಿಕೋಪಕ್ಕೆ ತಿರುಗಿ, ತಾನ್ ಆ ಮಹಿಳೆಯ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ವಿಡಿಯೋದಲ್ಲಿ ಕಂಡುಬರುವಂತೆ, ಆತ ಮಹಿಳೆಯನ್ನು ಕಾಲಿನಿಂದ ಒದ್ದು, ಮುಖಕ್ಕೆ ಸತತವಾಗಿ ಗುದ್ದಿದ್ದಾನೆ.
ಮಕ್ಕಳ ಮುಂದೆಯೇ ಅಟ್ಟಹಾಸ
ಈ ಹಲ್ಲೆ ನಡೆಯುವಾಗ ಅಲ್ಲಿ ನಾಲ್ವರು ಪುಟ್ಟ ಮಕ್ಕಳು ಮತ್ತು ಆರೋಪಿಯ ಪತ್ನಿ ಕೂಡ ಇದ್ದರು. ಮಕ್ಕಳ ಮುಂದೆಯೇ ಆತ ಮಹಿಳೆಯ ಮೇಲೆರಗಿದರೂ ಯಾರೂ ಆತನನ್ನು ತಡೆಯಲು ಸಾಧ್ಯವಾಗಲಿಲ್ಲ. ಅಪಾರ್ಟ್‌ಮೆಂಟ್‌ನ ಭದ್ರತಾ ಸಿಬ್ಬಂದಿ ಬಿಡಿಸಲು ಬಂದರೂ ಆತ ತನ್ನ ಅಟ್ಟಹಾಸ ಮುಂದುವರಿಸಿದ್ದನು. ತೀವ್ರವಾಗಿ ಗಾಯಗೊಂಡ ಮಹಿಳೆಯನ್ನು ಕೂಡಲೇ ಬಚ್ ಮಾಯ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಠಿಣ ಕಾನೂನು ಕ್ರಮದ ಎಚ್ಚರಿಕೆ
ಘಟನೆ ಸಂಬಂಧ ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ದಂಗ್ ಚಿ ತಾನ್‌ನನ್ನು ಬಂಧಿಸಿದ್ದಾರೆ. ವಿಯೆಟ್ನಾಂನ ಕಾನೂನಿನ ಪ್ರಕಾರ, ಸಾರ್ವಜನಿಕ ಶಾಂತಿಗೆ ಭಂಗ ತರುವುದು ಮತ್ತು ಹಲ್ಲೆ ಮಾಡುವುದು ಗಂಭೀರ ಅಪರಾಧವಾಗಿದೆ. ಈ ಕೃತ್ಯಕ್ಕಾಗಿ ಆತನಿಗೆ 50 ಮಿಲಿಯನ್ ವಿಯೆಟ್ನಾಂ ಡಾಂಗ್‌ವರೆಗೆ ದಂಡ ಅಥವಾ 2 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆಯಿದೆ ಎಂದು ಕಾನೂನು ತಜ್ಞರು ತಿಳಿಸಿದ್ದಾರೆ. “ಮಕ್ಕಳ ವಿಷಯಕ್ಕೆ ಇಷ್ಟೊಂದು ಕ್ರೂರವಾಗಿ ವರ್ತಿಸುವುದು ಅಮಾನವೀಯ” ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

