ಚಿಕ್ಕಮಗಳೂರು: ಬಿಸಿಲ ಬೇಗೆಗೆ ತತ್ತರಿಸುತ್ತಿರುವ ಜನರು ನದಿ, ಕೆರೆ ಹೀಗೆ ಎಲ್ಲೆಂದರಲ್ಲಿ ನೀರು ಕಂಡೊಡನೆ ಈಜಲು ಹೋಗಿ ಪ್ರಾಣ ಕಳೆದುಕೊಳ್ಳುತ್ತಿರುವ ಘಟನೆಗಳು ಹೆಚ್ಚುತ್ತಿವೆ. ಕೃಷೀ ಹೊಂಡದಲ್ಲಿ ಈಜಲು ಹೋಗಿದ್ದ ಇಬ್ಬರು ಕಾರ್ಮಿಕರು ಶವವಾಗಿ ಪತ್ತೆಯಾಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಚಿಕ್ಕಮಗಳೂರು ತಾಲೂಕಿನ ಬನ್ನೂರು ಗ್ರಾಮದ ಕೃಷಿಹೊಂಡಲ್ಲಿ ಈ ಘಟನೆ ನಡೆದಿದೆ. ರಮೇಶ್(27), ಮಹೇಶ್ (34) ಮೃತ ದುರ್ದೈವಿಗಳು. ನೀರಿನಲ್ಲಿ ಈಜಲು ತೆರಳಿ ಮುಳುಗಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಮೃತರು ಕೊಪ್ಪ ತಾಲೂಕಿನ ಜಯಪುರ ಗ್ರಾಮದವರಾಗಿದ್ದು, ಬನ್ನೂರಿನ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಕೃಷಿ ಹೊಂಡದ ಸಮೀಪ ಇಬ್ಬರ ಚಪ್ಪಲಿ ಪತ್ತೆಯಾಗಿದ್ದ ಹಿನ್ನೆಲೆ ನೀರಿನಲ್ಲಿ ಮುಳುಗಿರಬಹುದೆಂಬ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಕೃಷಿ ಹೊಂಡದಲ್ಲಿ ಶೋಧ ಕಾರ್ಯ ನಡೆಸಿದ್ದರು. ಈ ವೇಳೆ ಕಾರ್ಮಿಕರ ಮೃತದೇಹ ಪತ್ತೆಯಾಗಿದೆ.
ಅಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನ ಅಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

