ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ಎನ್.ಆರ್. ಪುರ ತಾಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿಯ ಬೈರಾಪುರ ಗ್ರಾಮದ ಮಾರಿದಿಬ್ಬದ ಸಮೀಪ ಭದ್ರಾ ಹಿನ್ನೀರಿನಲ್ಲಿ ಈಜಲು ಹೋದ ಯುವಕ ಮೃತಪಟ್ಟಿದ್ದಾನೆ.
ಶಿವಮೊಗ್ಗದ ಬೊಮ್ಮನಕಟ್ಟೆ ಆಶ್ರಯ ಬಡಾವಣೆ ನಿವಾಸಿ ನಿಖಿಲ್ ಆರ್. ಸಿಂಗ್(23) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಶಿವಮೊಗ್ಗದಲ್ಲಿ ಡೆಲಿವರಿ ಕೆಲಸ ಮಾಡುತ್ತಿದ್ದ ನಿಖಿಲ್ ಮೂವರು ಸ್ನೇಹಿತರೊಂದಿಗೆ ಬೈರಾಪುರ ಗ್ರಾಮಕ್ಕೆ ತೆರಳಿದ್ದ.
ಮಾರಿದಿಬ್ಬದ ಬಳಿ ಜನ್ಮದಿನ ಆಚರಿಸಿದ ನಂತರ ಹಿನ್ನೀರಿನಲ್ಲಿ ಈಜಲು ತೆರಳಿದ್ದಾರೆ. ಆದರೆ ನೀರಿನ ಆಳ ತಿಳಿಯದೆ ಅವರು ಮುಳುಗಿದ್ದಾರೆ. ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಸಂಜೆ 6ರಿಂದ ರಾತ್ರಿ 9 ಗಂಟೆಯವರೆಗೂ ಶೋಧ ಕಾರ್ಯ ನಡೆಸಿದರೂ ನಿಖಿಲ್ ಮೃತದೇಹ ಪತ್ತೆಯಾಗಿರಲಿಲ್ಲ. ಮಂಗಳವಾರ ಮತ್ತೆ ಶೋಧ ಕಾರ್ಯಾಚರಣೆ ನಡೆಸಿ ಮೃತದೇಹ ಹೊರ ತೆಗೆಯಲಾಗಿದೆ. ಎನ್.ಆರ್. ಪುರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

