ಚಿಕ್ಕಬಳ್ಳಾಪುರ: ತನ್ನ ಪರ ತೀರ್ಪು ನೀಡಲಿ ಎಂದು ನ್ಯಾಯಾಧೀಶರ ಚೇರ್ಗೆ ಮಹಿಳೆಯೊಬ್ಬರು ಮಾಟ-ಮಂತ್ರ ಮಾಡಿಸಿದ್ದ ಘಟನೆ ಚಿಕ್ಕಬಳ್ಳಾಪುರದಲ್ಲಿ ಬೆಳಕಿಗೆ ಬಂದಿದೆ.
ತನ್ನ ಪರ ಅನುಕೂಲಕರ ತೀರ್ಪು ಬರಬೇಕು ಎಂದು ಮಹಿಳೆ, ಮಹಿಳಾ ನ್ಯಾಯಾಧೀಶರ ಚೇರ್ಗೆ ಮಾಟ-ಮಂತ್ರ ಮಾಡಿದ್ದಾರೆ. ಪ್ರಕರಣ ಸಂಬಂಧ ಚಿಕ್ಕಬಳ್ಳಾಪುರ ನಗರ ಪೊಲೀಸರು ಮಂಜುಳಾ (65) ಎಂಬಾಕೆಯನ್ನು ಬಂಧಿಸಿದ್ದಾರೆ.
ಚಿಕ್ಕಬಳ್ಳಾಪುರ ನಗರದ ವಲಸಣ್ಣ ಬೀದಿ ನಿವಾಸಿಯಾಗಿರುವ ಮಂಜುಳಾ, 1ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರ ಡಯಾಸ್ ಚೇರ್ ಮೇಲೆ ಮಂತ್ರಿಸಿದ ಬಿಳಿ ಸಾಸಿವೆ ಚೆಲ್ಲಿ ಮಾಟಮಂತ್ರ ಮಾಡಿದ್ದರು. ಈ ಕೃತ್ಯ ಎರಡು ದಿನಗಳ ಹಿಂದೆ ನಡೆದಿದ್ದು, ನ್ಯಾಯಾಲಯದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಘಟನೆ ಸಂಬಂಧ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿ ನೇತ್ರಾ ನೀಡಿದ ದೂರಿನ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮಂಜುಳಾ ವಿರುದ್ಧ ಕರ್ನಾಟಕ ಅಮಾನವೀಯ ದುಷ್ಟಪದ್ದತಿ ಹಾಗೂ ವಾಮಾಚಾರ ಪ್ರತಿಬಂಧಕ ಮತ್ತು ನಿರ್ಮೂಲನಾ ಅಧಿನಿಯಮ–2017ರಡಿ ಪ್ರಕರಣ ದಾಖಲಿಸಲಾಗಿದ್ದು, ಸದ್ಯ ಆರೋಪಿಯನ್ನು ಬಂಧಿಸಲಾಗಿದೆ.
ಬಂಧಿತ ಮಂಜುಳಾಳನ್ನ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

