HomeLatest Newsಮಾದಕ ವಸ್ತುಗಳ ನಿರ್ಮೂಲನೆ ಮಾಡುವ ಸರ್ಕಾರದ ಸಂಕಲ್ಪಕ್ಕೆ ಮತ್ತೊಂದು ಯಶಸ್ಸು: ಪ್ರಿಯಾಂಕ್ ಖರ್ಗೆ

ಮಾದಕ ವಸ್ತುಗಳ ನಿರ್ಮೂಲನೆ ಮಾಡುವ ಸರ್ಕಾರದ ಸಂಕಲ್ಪಕ್ಕೆ ಮತ್ತೊಂದು ಯಶಸ್ಸು: ಪ್ರಿಯಾಂಕ್ ಖರ್ಗೆ

ಬೆಂಗಳೂರು: ರಾಜ್ಯದಲ್ಲಿ ಮಾದಕ ವಸ್ತುಗಳ ಜಾಲವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಕರ್ನಾಟಕ ಸರ್ಕಾರದ ಸಂಕಲ್ಪಕ್ಕೆ ಮತ್ತೊಂದು ಮಹತ್ವದ ಯಶಸ್ಸು ದೊರೆತಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಬೆಂಗಳೂರು ನಗರ ಪೊಲೀಸರು ನಡೆಸಿದ ನಿರಂತರ ಕಾರ್ಯಾಚರಣೆಗಳಲ್ಲಿ ಅಂತರರಾಜ್ಯ ನಿಷೇಧಿತ ಮಾದಕ ದ್ರವ್ಯ ಕಳ್ಳಸಾಗಣೆ ಜಾಲವನ್ನು ಭೇದಿಸಿ, ಒಟ್ಟು 29 ಕೆಜಿ ಎಂಡಿಎಂಎ, 20 ಗ್ರಾಂ ಕೊಕೇನ್ ಹಾಗೂ 1,000 ಎಕ್ಸ್ಟಸಿ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದು, ಇವುಗಳ ಅಂದಾಜು ಮೌಲ್ಯ ₹30.43 ಕೋಟಿ (ಮಾರುಕಟ್ಟೆ ಮೌಲ್ಯ ₹60.86 ಕೋಟಿ) ಆಗಿದೆ ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಂಪೂರ್ಣ ಕಾರ್ಯಾಚರಣೆಯಲ್ಲಿ 5 ಪ್ರಕರಣಗಳನ್ನು ದಾಖಲಿಸಿ, ಒಬ್ಬ ವಿದೇಶಿ ಪ್ರಜೆ ಸೇರಿದಂತೆ 8 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಮೂರು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಭಾರೀ ಯಶಸ್ಸು

ಉತ್ತರ ವಿಭಾಗದ ಹೆಬ್ಬಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ, ವಿದೇಶಿ ಪ್ರಜೆಯೊಬ್ಬನನ್ನು ಬಂಧಿಸಿ 17 ಕೆಜಿ 282 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ ₹17.28 ಕೋಟಿ ಆಗಿದ್ದು, ಅಂತರರಾಜ್ಯ ಮಟ್ಟದಲ್ಲಿ ಮಾದಕ ವಸ್ತು ಪೂರೈಕೆ ಜಾಲದ ಕುರಿತು ತನಿಖೆ ಮುಂದುವರಿದಿದೆ ಎಂದು ಸಚಿವರು ತಿಳಿಸಿದ್ದಾರೆ.

ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳ ನಡೆಸಿದ ಮತ್ತೊಂದು ಕಾರ್ಯಾಚರಣೆಯಲ್ಲಿ 6 ಕೆಜಿ 718 ಗ್ರಾಂ ಎಂಡಿಎಂಎ ಹಾಗೂ 20 ಗ್ರಾಂ ಕೊಕೇನ್ ವಶಪಡಿಸಿಕೊಳ್ಳಲಾಗಿದ್ದು, ಇದರ ಮೌಲ್ಯ ₹7.15 ಕೋಟಿ ಎಂದು ಅವರು ಹೇಳಿದ್ದು, ಈ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಮಾದಕ ವಸ್ತುಗಳ ಮೂಲ ಹಾಗೂ ಹಣಕಾಸಿನ ಜಾಲದ ಬಗ್ಗೆ ತನಿಖೆ ತೀವ್ರಗೊಳಿಸಲಾಗಿದೆ ಎಂಬ ಮಾಹಿತಿ ಹಂಚಿಕೊಂಡಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಗಿರಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 5 ಕೆಜಿ ಎಂಡಿಎಂಎ ಮತ್ತು 1,000 ಎಕ್ಸ್ಟಸಿ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದರ ಮೌಲ್ಯ ₹6 ಕೋಟಿ ಎಂದು ಸಚಿವರು ತಿಳಿಸಿದ್ದಾರೆ.

ಮಾದಕ ಜಾಲದ ವಿರುದ್ಧ ಶೂನ್ಯ ಸಹಿಷ್ಣುತೆ

ರಾಜ್ಯದಲ್ಲಿ ಮಾದಕ ವಸ್ತುಗಳ ವಿರುದ್ಧ “ಶೂನ್ಯ ಸಹಿಷ್ಣುತೆ” ನೀತಿಯನ್ನು ಸರ್ಕಾರ ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದು, ಯುವಜನರ ಬದುಕನ್ನು ಹಾಳು ಮಾಡುವ ಡ್ರಗ್ಸ್ ಜಾಲವನ್ನು ಬೇರು ಸಮೇತ ಕಿತ್ತುಹಾಕಲು ಪೊಲೀಸ್ ಇಲಾಖೆ ನಿರಂತರ ಕಾರ್ಯಾಚರಣೆ ನಡೆಸುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಮಾದಕ ವಸ್ತುಗಳ ಉತ್ಪಾದನೆ, ಸಾಗಾಣಿಕೆ, ಮಾರಾಟ ಹಾಗೂ ಬಳಕೆಯಲ್ಲಿ ತೊಡಗಿರುವವರ ವಿರುದ್ಧ ಯಾವುದೇ ರೀತಿಯ ರಾಜಿ ಇಲ್ಲ. ರಾಜ್ಯದ ಎಲ್ಲ ಪೊಲೀಸ್ ಘಟಕಗಳು ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿದ್ದು, ಅಂತಾರಾಜ್ಯ ಹಾಗೂ ಅಂತರರಾಷ್ಟ್ರೀಯ ಜಾಲಗಳ ಮೇಲೂ ನಿಗಾ ವಹಿಸಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ಇತ್ತೀಚಿನ ಕಾರ್ಯಾಚರಣೆಗಳಲ್ಲೂ ಗಮನಾರ್ಹ ಸಾಧನೆ

ಕಳೆದ ಕೆಲವು ವಾರಗಳಲ್ಲಿ ಬೆಂಗಳೂರು ನಗರ ಪೊಲೀಸರು ನಡೆಸಿದ ಕಾರ್ಯಾಚರಣೆಗಳಲ್ಲಿ ನೂರಾರು ಪ್ರಕರಣಗಳನ್ನು ದಾಖಲಿಸಿ, ಹಲವಾರು ಆರೋಪಿಗಳನ್ನು ಬಂಧಿಸಲಾಗಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ವಿವಿಧ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳುವ ಮೂಲಕ ರಾಜ್ಯದಲ್ಲಿ ಡ್ರಗ್ಸ್ ಜಾಲಕ್ಕೆ ನಿರಂತರವಾಗಿ ಹೊಡೆತ ನೀಡಲಾಗುತ್ತಿದೆ ಎಂದು ಸಚಿವರು ವಿವರಿಸಿದ್ದಾರೆ.

ಮಾದಕ ವ್ಯಸನದ ವಿರುದ್ಧ ಸಾರ್ವಜನಿಕರು, ವಿಶೇಷವಾಗಿ ಪೋಷಕರು ಹಾಗೂ ಶಿಕ್ಷಣ ಸಂಸ್ಥೆಗಳು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಬೇಕು. ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ಸಮಾಜವನ್ನು ಡ್ರಗ್ಸ್ ಮುಕ್ತವಾಗಿಸಲು ಎಲ್ಲರೂ ಸಹಕರಿಸಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮನವಿ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular