HomeKarnatakaಜನೋಪಯೋಗಿ ಗ್ಯಾರಂಟಿ ಯೋಜನೆ ಯಶಸ್ವಿಯಾಗಿ ಮುಂದುವರಿಕೆ: ಸಿಎಂ ಸಿದ್ಧರಾಮಯ್ಯ

ಜನೋಪಯೋಗಿ ಗ್ಯಾರಂಟಿ ಯೋಜನೆ ಯಶಸ್ವಿಯಾಗಿ ಮುಂದುವರಿಕೆ: ಸಿಎಂ ಸಿದ್ಧರಾಮಯ್ಯ

ಬೆಂಗಳೂರು: ದೇಶದಲ್ಲೇ ಅತಿ ಹೆಚ್ಚು ಒಣಭೂಮಿ ಹೊಂದಿರುವ ಎರಡನೇ ರಾಜ್ಯ ಕರ್ನಾಟಕ. ಹೀಗಾಗಿ ಒಣಭೂಮಿಯ ಕೃಷಿಗೆ ಆದ್ಯತೆ ನೀಡಿ ಸಂಶೋಧನೆಗಳು ನಡೆಯಬೇಕು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.

ಅವರು ಜಿ.ಕೆ.ವಿ.ಕೆ ಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರೈತ ಸೌರಶಕ್ತಿ ಮೇಳ ಉದ್ಘಾಟಿಸಿ ಮಾತನಾಡಿದರು. ಜನಸಂಖ್ಯೆ ಹೆಚ್ಚಾಗಿ ರೈತರ ಬೆಳೆಗಳ ಇಳುವರಿ ಪ್ರಮಾಣ ಕಡಿಮೆ ಆಗುತ್ತಿದೆ. ಆದ್ದರಿಂದ ಸಮಗ್ರ ಕೃಷಿಗೆ ಹೆಚ್ಚಿನ ಬೆಂಬಲ ನೀಡುವ ಸಲುವಾಗಿ ಕೃಷಿಯ ಉಪಕಸುಬುಗಳ ಬೆಳವಣಿಗೆಗೆ ಸರ್ಕಾರ ಸಂಪೂರ್ಣ ಸಹಕಾರ, ಬೆಂಬಲ ನೀಡುತ್ತಿದೆ ಎಂದರು.‌

ಪ್ರಸ್ತುತ ರಾಜ್ಯದಲ್ಲಿ 32 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಮುಂದಿನ 7 ವರ್ಷಗಳಲ್ಲಿ 60 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಗುರಿ ಹಮ್ಮಿಕೊಂಡಿದ್ದೇವೆ.‌ ಸೋಲಾರ್ ವಿದ್ಯುತ್ ಪಂಪ್ ಸೆಟ್ ಮತ್ತು ಪ್ಯಾನಲ್ ಗಳಿಗೆ ರಾಜ್ಯ ಸರ್ಕಾರದ ಸಬ್ಸಿಡಿ ಮೊತ್ತವನ್ನು ಶೇ.30 ರಿಂದ ಶೇ.50 ಕ್ಕೆ ಹೆಚ್ಚಿಸಿದೆ. ನಮ್ಮ ಸರ್ಕಾರದ ಈ ಸೌಲಭ್ಯವನ್ನು ರೈತರು ಹೆಚ್ಚೆಚ್ಚು ಬಳಸಿಕೊಳ್ಳಬೇಕು. ಸೌರವಿದ್ಯುತ್ ಬಳಕೆಯನ್ನು ಹೆಚ್ಚೆಚ್ಚು ಮಾಡುವ ಮೂಲಕ ವಿದ್ಯುತ್ ಕೊರತೆಯನ್ನು ನೀಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ ಈ ಬಗ್ಗೆ ರೈತರಿಗೆ ಹೆಚ್ಚೆಚ್ಚು ಮನವರಿಕೆ ಮಾಡಿಕೊಡಬೇಕು ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸೌರಶಕ್ತಿ ಕ್ಷೇತ್ರದ ಹೊಸ ಆವಿಷ್ಕಾರಗಳು, ತಂತ್ರಜ್ಞಾನಗಳು ರೈತರ ಮನೆ ಬಾಗಿಲಿಗೆ ತಲುಪಿ, ಕೃಷಿಯಲ್ಲಿ ಬಳಕೆ ಆದರೆ ಮಾತ್ರ ಸಾರ್ಥಕತೆ ಬರುತ್ತದೆ. ಕೃಷಿ ಕ್ಷೇತ್ರದಲ್ಲಿ ಹೆಚ್ಚೆಚ್ಚು ಸಂಶೋಧನೆಗಳು ನಡೆದು ಅವು ರೈತರನ್ನು ಮುಟ್ಟಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ರೈತರು ಹೆಚ್ಚೆಚ್ಚು ಆಹಾರ ಬೆಳೆದು ವಿದೇಶಕ್ಕೂ ರಫ್ತು ಮಾಡುವಂತಾಗಬೇಕು. ಇದಕ್ಕೆ ನಮ್ಮ ಸರ್ಕಾರ ಸಕಲ ನೆರವು ನೀಡುತ್ತದೆ ಎಂದರು.

ಸೋಲಾರ್ ವಿದ್ಯುತ್ ಗೆ ಕೇಂದ್ರ ಸರ್ಕಾರ ಕೇವಲ ಶೇ30 ರಷ್ಟು ಸಬ್ಸಿಡಿ ನೀಡುತ್ತಿದೆ. ಆದರೆ ರಾಜ್ಯ ಸರ್ಕಾರ ಶೇ.50 ರಷ್ಟು ಸಬ್ಸಿಡಿ ನೀಡುತ್ತಿದೆ. ಆದರೂ ಹೆಸರು ಮಾತ್ರ ಮೋದಿಯವರ ಸಬ್ಸಿಡಿ ಎನ್ನುತ್ತಾರೆ. ಇವತ್ತಿನವರೆಗೂ ನಾಡಿನ ಒಂದು ಕೋಟಿ ಇಪ್ಪತ್ತು ಲಕ್ಷ ಕುಟುಂಬಗಳು ಬಳಸುತ್ತಿರುವ 200 ಯೂನಿಟ್ ವರೆಗಿನ ಉಚಿತ ವಿದ್ಯುತ್ ಗಾಗಿ ರಾಜ್ಯ ಸರ್ಕಾರ ಉಚಿತ ವಿದ್ಯುತ್ತಿನ ಬಾಬ್ತು 5,320 ಕೋಟಿ ರೂಪಾಯಿಯನ್ನು ಇಂಧನ ಇಲಾಖೆಗೆ ನೀಡಿದೆ. ನಮ್ಮ ಜನರಿಗೆ ಶೂನ್ಯ ಬಿಲ್ ಬರುತ್ತಿದೆ. ನಮ್ಮ ಸರ್ಕಾರ ಈ ಜನೋಪಯೋಗಿ ಗ್ಯಾರಂಟಿ ಯೋಜನೆಯನ್ನು ಯಶಸ್ವಿಯಾಗಿ ಮುಂದುವರೆಸಲಿದೆ ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular