ಬೆಂಗಳೂರು: ದಾ.ರಾಜ್ ಕುಮಾರ್ ಸಮಾಧಿ ಸಲುವಾಗಿ ರಾಜ್ಯ ಸರ್ಕಾರ ಎರಡೂವರೆ ಎಕರೆ ಜಾಗ ನೀಡಿರುವ ವಿಚಾರಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ನಟ ಚೇತನ್ ಅಹಿಂಸಾ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ತಮ್ಮ ಹೇಳಿಕೆಗಳಿಗೆ ಚೇತನ್ ಕ್ಷಮೆಯಾಚಿಸಬೇಕು ಎಂದು ರಾಜ್ ಅಭಿಮಾನಿಗಳು ಮತ್ತು ಕನ್ನಡಪರ ಹೋರಾಟಗಾರರು ಆಗ್ರಹಿಸಿದ್ದಾರೆ. ಈನಡುವೆ ತನಗೆ ಕ್ಷಮೆ ಕೇಳಿಸಲು ಬಂದವರು ತನ್ನ ಮೇಲೆ ದಬ್ಬಾಳಿಕೆ ಮಾಡಿದ್ದಾರೆ ಎಂದು ಚೇತನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿನಡೆಸಿದ ನಟ ಚೇತನ್ ಅಹಿಂಸಾ, ನನ್ನ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದೇನೆ. ನನ್ನ ವಿಚಾರವನ್ನು ನಾನು ಹೇಳಿದ್ದೇನೆ. ಆದರೆ ನನ್ನ ಮೇಲೆ ದಬ್ಬಾಳಿಕೆ ಮಾಡುವುದನ್ನು ನಾನು ಒಪ್ಪಲ್ಲ ಎಂದು ಕಿಡಿಕಾರಿದ್ದಾರೆ.
ಯಾರ ಭಾವನೆಗೂ ಧಕ್ಕೆ ತರುವ ಉದ್ದೇಶದಿಂದ ನಾನು ಹೇಳಿಕೆ ನೀಡಿಲ್ಲ. ನನ್ನ ಹೇಳಿಕೆಯಿಂದ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ಒಂದು ವೇಳೆ ಧಕ್ಕೆ ತಂದಿದ್ದರೆ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಿ. ಅದನ್ನು ಎದುರಿಸಲು ನಾನು ಸಿದ್ಧ. ಯಾರೇ ಬಂದು ದಬ್ಬಾಳಿಕೆ ಮಾಡುವುದು ಪ್ರಜಾಪ್ರಭುತ್ವ ಅಲ್ಲ. ನಾನು ವಿಷಾದ ವ್ಯಕ್ತಪಡಿಸಿದ್ದೇನೆ. ನಾನು ವಿಷಾದ ವ್ಯಕ್ತಪಡಿಸಿದ ಮಾತ್ರಕ್ಕೆ ನಾನು ಹೇಳಿದ ವಿಚಾರ ಸುಳ್ಳಾಗಲ್ಲ ಎಂದಿದ್ದಾರೆ.
ನಾನು ಹೇಳಿದ ವಿಚಾರ ಸುಳ್ಳಲ್ಲ. ನಾನು ಹೇಳಿದ್ದರಲ್ಲಿ ಸತ್ಯ ಇದೆ. ಈಗಲೂ ನಾನು ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ. ಅಣ್ಣಾವ್ರು ಬದುಕಿದ್ದಾಗ ಎರಡೂವರೆ ಎಕರೆ ಜಾಗವನ್ನು ನಿಮ್ಮ ಸ್ಮಾರಕಕ್ಕೆ ನೀಡುತ್ತೇವೆ ಎಂದಿದ್ದರೆ ಅವರೇ ಬೇಡ ಅಂತ ಹೇಳುತ್ತಿದ್ದರು. ಅಂತಹ ಮೇರು ವ್ಯಕ್ತಿ ಅವರು. ನಾನು ಪ್ರಚಾರಕ್ಕೋಸ್ಕರ ಈ ರೀತಿ ಹೇಳಿಲ್ಲ. ಇದು ವಿಚಾರಕ್ಕೋಸ್ಕರ ಮಾತ್ರ ಎಂದು ತಿಳಿಸಿದ್ದಾರೆ.
ನಮಗೆ ಅಣ್ಣಾವ್ರ ಕುಟುಂಬಕ್ಕೆ ಏನೂ ತಕರಾರು ಇಲ್ಲ. ಅವರ ಅಭಿಮಾನಿ ಬಳಗದ ಬಗ್ಗೆಯೂ ತಕರಾರು ಇಲ್ಲ. ಸರ್ಕಾರದ ಯೋಜನೆಗಳಲ್ಲಿ ಒಬ್ಬರಿಗೆ ಜಾಗ ಕೊಟ್ಟು, ಇನ್ನುಳಿದವರಿಗೆ ಕೊಟ್ಟಿಲ್ಲ ಎಂದರೆ ಚಿತ್ರರಂಗದಲ್ಲಿ ಬೇರೆ ಬೇರೆ ಸಮಸ್ಯೆಗಳು ಆಗುತ್ತವೆ. ಇರುವ ಸಮಸ್ಯೆಗೆ ಪರಿಹಾರ ಸಿಗಲ್ಲ. ಸ್ಟಾರ್ ಸಂಸ್ಕೃತಿಯನ್ನು ನಾನು ವಿರೋಧಿಸುತ್ತೇನೆ ಎಂದಿದ್ದಾರೆ.
ಸೌಜನ್ಯದಿಂದ ಮಾತನಾಡಿದರೆ ಮಾತ್ರ ನಾನು ಬದ್ಧನಾಗಿರುತ್ತೇನೆ. ಆದರೆ ಗೂಂಡಾ ವರ್ತನೆ ಮಾಡಿದರೆ, ಮಹಿಳೆ ಬಗ್ಗೆ ನಿಂದನಾತ್ಮಕವಾಗಿ ಮಾತನಾಡಿದರೆ ಅದಕ್ಕೆ ಕಾನೂನಿನ ಕ್ರಮ ತೆಗೆದುಕೊಳ್ಳಬೇಕು. ಪೊಲೀಸರು ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ನನಗೆ ಯಾರ ಮೇಲೂ ವೈಯಕ್ತಿಕ ದ್ವೇಷವಿಲ್ಲ. ಪ್ರಜಾಪ್ರಭುತ್ವ ಎತ್ತಿ ಹಿಡಿಯುತ್ತೇನೆ ಎಂದು ತಿಳಿಸಿದ್ದಾರೆ.

