ಬೆಂಗಳೂರು: ಆರತಕ್ಷತೆ ಕಾರ್ಯಕ್ರಮಕ್ಕೆ ಹೋಗಿ ರೂಮಿಗೆ ಬರುವಷ್ಟರಲ್ಲಿ ರೂಮಿನಲ್ಲಿದ್ದ 1 ಕೋಟಿ ರೂ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿರುವ ಘಟನೆ ಬೆಂಗಳೂರಿನ ಎಸ್ ಡಿಪಿ ಕಲ್ಯಾಣ ಮಂಟಪದಲ್ಲಿ ನಡೆದಿದೆ.
ಬೆಂಗಳೂರಿನ ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಮೆರಿಕಾದಲ್ಲಿ ವೈದ್ಯೆಯಾಗಿರುವ ಶ್ರೀದೇವಿ ಎಂಬುವವರ ಚಿನ್ನಾಭರಣಗಳನ್ನು ಕದ್ದು ಕಳ್ಳರು ಪರಾರಿಯಾಗಿದ್ದಾರೆ. ಪರಿಚಯದವರೇ ಈ ಕೃತ್ಯವೆಸಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಶ್ರೀದೇವಿ ತನ್ನ ಅಕ್ಕನ ಮಗನ ಮದುವೆಗೆಂದು ಆಮೆರಿಕಾದಿಂದ ಬಂದಿದ್ದರು. ಸುಮಾರು ೧ ಕೋಟಿ ರೂ ಮೌಲ್ಯದ ಚಿನ್ನಾಭರಣಗಳನ್ನು ರೂಮ್ ನಲ್ಲಿ ಇಟ್ಟು ಲಾಕ್ ಮಾಡಿ ಆರತಕ್ಷತೆ ಕಾರ್ಯಕ್ರಮಕ್ಕೆ ಹೋಗಿದ್ದರು. ವಾಪಸ್ ಬಂದು ನೋಡಿದ್ದಾಗ ಚಿನ್ನಾಭರಣ ನಾಪತ್ತೆಯಾಗಿತ್ತು.
ಮನೆ ಕೆಲಸದವಳ ಮೇಲೆ ಅನುಮಾನವಿದ್ದು, ಈ ಹಿನ್ನೆಲೆಯಲ್ಲಿ ಆವಲಹಳ್ಳಿ ಠಾಣೆಯಲ್ಲಿ ವೈದ್ಯೆ ಮಹಿಳೆ ದೂರು ನೀಡಿದ್ದಾರೆ.

