“ಇದು ನನ್ನ ಜೀವನ ಪಪ್ಪಾ, ನನ್ನ ಮನಸ್ಸಿಗೆ ಹೀಗೇ ಸರಿ ಎನಿಸುತ್ತಿದೆ….. ಬೈ-ಬೈ ಪಪ್ಪಾ” ಎಂದು ಫೋನ್‌ನಲ್ಲಿ ಹೆತ್ತ ತಂದೆಗೆ ಕಣ್ಣೀರಿನ ವಿದಾಯ ಹೇಳಿ, 21 ವರ್ಷದ ಯುವತಿಯೊಬ್ಬಳು ರಭಸವಾಗಿ ಹರಿಯುತ್ತಿದ್ದ ಚೀನಾಬ್ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಅತ್ಯಂತ ಕರುಳುಹಿಂಡುವ ಘಟನೆ ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ನಡೆದಿದೆ.
ದೋಡಾ ಜಿಲ್ಲೆಯ ಪ್ರೇಮ್ ನಗರ ಸಮೀಪದ ಶಿವದಾಲ್ ಸೇತುವೆಯ ಮೇಲಿಂದ ಯುವತಿ ನದಿಗೆ ಜಿಗಿಯುವ ಮುನ್ನ ಸಾರ್ವಜನಿಕರು ಆಕೆಯನ್ನು ತಡೆಯಲು ಎಷ್ಟೇ ಪ್ರಯತ್ನಿಸಿದರೂ, ಆಕೆ ಕೈಬೀಸಿ ‘ಬೈ-ಬೈ’ ಎನ್ನುತ್ತಾ ನದಿಗೆ ಹಾರಿದ ಭಯಾನಕ ಕ್ಷಣಗಳು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸೇತುವೆಯಿಂದ ಚೀನಾಬ್ ನದಿಗೆ ಜಿಗಿತ
ಅಧಿಕಾರಿಗಳ ಮಾಹಿತಿಯ ಪ್ರಕಾರ, ಶನಿವಾರ ಮಧ್ಯಾಹ್ನ ಸುಮಾರು 2 ಗಂಟೆಯ ಸುಮಾರಿಗೆ ಈ ದುರಂತ ಸಂಭವಿಸಿದೆ. ಮೃತ ಯುವತಿಯನ್ನು ಪಾಯಲ್ ದೇವಿ (21) ಎಂದು ಗುರುತಿಸಲಾಗಿದೆ.
ಪ್ರೇಮ್ ನಗರ ಸಮೀಪದ ಶಿವದಾಲ್ ಸೇತುವೆಯ ತುದಿಯಲ್ಲಿ ನಿಂತಿದ್ದ ಪಾಯಲ್ ದೇವಿ, ನದಿಗೆ ಜಿಗಿಯಲು ಮುಂದಾಗಿದ್ದನ್ನು ಗಮನಿಸಿದ ದಾರಿಹೋಕರು ಕೂಗಾಡುತ್ತಾ ಆಕೆಯನ್ನು ತಡೆಯಲು ಪ್ರಯತ್ನಿಸಿದರು. ಆದರೆ, ಯಾರ ಮಾತನ್ನೂ ಕೇಳದ ಆಕೆ ಕೈಬೀಸಿ, “ಬೈ-ಬೈ” ಎನ್ನುತ್ತಾ ರಭಸದ ಪ್ರವಾಹವಿದ್ದ ಚೀನಾಬ್ ನದಿಗೆ ಹಾರಿದ್ದಾಳೆ.
ಕೊನೆಯ ಕರೆಯಲ್ಲಿ ಕಣ್ಣೀರಿಟ್ಟ ತಂದೆ
ಪಾಯಲ್ ದೇವಿಯ ತಂದೆ ಕೃಷ್ಣಲಾಲ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಘಟನೆಗೂ ಮುನ್ನ ಮಗಳು ತನಗೆ ಕರೆ ಮಾಡಿದ್ದ ಕರುಳುಹಿಂಡುವ ಕ್ಷಣಗಳನ್ನು ನೆನೆದು ಕಣ್ಣೀರಿಟ್ಟಿದ್ದಾರೆ.
“ಜಾತ್ರೆಗೆ ಹೋಗಿದ್ದ ಮಗಳು ನನಗೆ ಕರೆ ಮಾಡಿ, ನನಗೆ ಹುಷಾರಿಲ್ಲ, ವೈದ್ಯರ ಬಳಿ ಹೋಗುತ್ತಿದ್ದೇನೆ ಎಂದು ತಿಳಿಸಿದ್ದಳು. ಆದರೆ ಆಸ್ಪತ್ರೆಯಲ್ಲಿ ವೈದ್ಯರು ಸಿಗದ ಕಾರಣ ಆಕೆ ಬೈಕ್‌ನಲ್ಲಿ ಮರಳಿ ಬರುತ್ತಿದ್ದಳು. ಅಷ್ಟರಲ್ಲೇ ಆಕೆಯ ಜೊತೆಗಿದ್ದ ವ್ಯಕ್ತಿಯೊಬ್ಬ ನನಗೆ ಕರೆ ಮಾಡಿ, ಆಕೆ ನದಿಯ ಕಡೆಗೆ ಓಡುತ್ತಿದ್ದಾಳೆ ಎಂದು ಆತಂಕದಿಂದ ಹೇಳಿದ. ನಾನು ತಕ್ಷಣವೇ ಮಗಳಿಗೆ ಕರೆ ಮಾಡಿದೆ,” ಎಂದು ಕೃಷ್ಣಲಾಲ್ ತಿಳಿಸಿದ್ದಾರೆ.
ಫೋನ್‌ನಲ್ಲಿ ಮಾತನಾಡಿದ ಪಾಯಲ್, “ನನ್ನ ಸಮೀಪಕ್ಕೆ ಯಾರೂ ಬರಬೇಡಿ” ಎಂದು ಕಿರುಚಾಡಿದ್ದಳು. ಗಾಬರಿಯಾದ ತಂದೆ, “ಮಗಳೇ ಏನಾಯ್ತು? ಯಾರಾದರೂ ನಿನಗೆ ಏನಾದರೂ ಅಂದರಾ? ಏನಾದರೂ ತೊಂದರೆಯಾಗಿದೆಯಾ?” ಎಂದು ಪದೇಪದೇ ಅಂಗಲಾಚಿ ಕೇಳಿದ್ದಾರೆ. ಆದರೆ ಅದಕ್ಕೆ ಉತ್ತರಿಸಿದ ಪಾಯಲ್, “ಇಲ್ಲ ಪಪ್ಪಾ, ಇದು ನನ್ನ ಸ್ವಂತ ಜೀವನ. ನನ್ನ ಮನಸ್ಸಿಗೆ ಹೀಗೆ ಹೋಗುವುದೇ ಸರಿ ಎನಿಸುತ್ತಿದೆ… ಬೈ-ಬೈ ಪಪ್ಪಾ” ಎಂದು ಹೇಳಿ ಕಾಲ್ ಕಟ್ ಮಾಡಿದ್ದಾಳೆ. ಅದಾದ ಕೆಲವೇ ಕ್ಷಣಗಳಲ್ಲಿ ಆಕೆ ನದಿಗೆ ಜಿಗಿದಿದ್ದಾಳೆ.
ನದಿಯಲ್ಲಿ ಮುಂದುವರಿದ ಶೋಧ ಕಾರ್ಯ
ಘಟನೆ ನಡೆದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಜಿಲ್ಲಾಡಳಿತ, ಪೊಲೀಸ್ ಹಾಗೂ ವಿಪತ್ತು ನಿರ್ವಹಣಾ ರಕ್ಷಣಾ ತಂಡಗಳು ಚೀನಾಬ್ ನದಿಯಲ್ಲಿ ಯುವತಿಯ ಪತ್ತೆಗಾಗಿ ಬೃಹತ್ ಶೋಧ ಕಾರ್ಯಾಚರಣೆ ಆರಂಭಿಸಿವೆ. ನದಿಯ ಹರಿವು ಅತ್ಯಂತ ರಭಸವಾಗಿರುವುದರಿಂದ ಶೋಧ ಕಾರ್ಯಕ್ಕೆ ಅಡ್ಡಿಯುಂಟಾಗಿದೆ.
21 ವರ್ಷದ ಯುವತಿ ಈ ರೀತಿಯ ಕಠಿಣ ಹಾಗೂ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಅಸಲಿ ಕಾರಣವೇನು? ಆಕೆಯ ಮೇಲೆ ಯಾವುದಾದರೂ ಕೌಟುಂಬಿಕ ಅಥವಾ ಮಾನಸಿಕ ಒತ್ತಡವಿತ್ತೇ? ಎಂಬುದರ ಕುರಿತು ದೋಡಾ ಪೊಲೀಸರು ಸಮಗ್ರ ತನಿಖೆ ಆರಂಭಿಸಿದ್ದಾರೆ.

