ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟಕ್ಕೆ ಪೋಷಕರೊಂದಿಗೆ ಪಾದಯಾತ್ರೆ ಸಾಗುತ್ತಿದ್ದ ಬಾಲಕನ ಮೇಲೆ ಚಿರತೆ ದಾಳಿ ನಡೆಸಿ ಬಾಲಕನನ್ನು ಬಲಿ ಪಡೆದ ಪ್ರಕರಣಕ್ಕೆ ಸಂಅಬ್ಂಧಿಸಿದಂತೆ ಮೃತ ಬಾಲಕನ ಕುಟುಂಬಕ್ಕೆ ರಾಜ್ಯ ಸರ್ಕಾರ 20 ಲಕ್ಷ ರೂ. ಪರಿಹಾರ ಘೋಷಿಸಿದೆ.
ಮೇ 10ರಂದು ಮಲೆ ಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ಹೋಗುವ ವೇಳೆ ೮ ವರ್ಷದ ಬಾಲಕ ಹರ್ಷಿತ್ ಮೇಲೆ ಚಿರತೆ ದಾಳಿ ನಡೆಸಿತ್ತು. ಈ ವೇಳೆ ಬಾಲಕ ಸಾವನ್ನಪ್ಪಿದ್ದ. ಸದ್ಯ ಅರಣ್ಯ ಇಲಾಖೆ ಬಾಲಕನ ಕುಟುಂಬಸ್ಥರಿಗೆ 20 ಲಕ್ಷ ರೂ. ಪರಿಹಾರ ಘೋಷಿಸಿದ್ದು, ಈಗಾಗಲೇ 5 ಲಕ್ಷ ರೂ. ಚೆಕ್ ನೀಡಲಾಗಿದೆ.
ಇನ್ನುಳಿದ ಹಣವನ್ನು ಅಕೌಂಟ್ ಮಾಹಿತಿ ಪಡೆದು ಶೀಘ್ರದಲ್ಲೇ ಕಳುಹಿಸಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಬಾಲಕನನ್ನು ಬಲಿಪಡೆದ ಚಿರತೆಯ ಚಲನವಲನ ಥರ್ಮಲ್ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೀಗಾಗಿ ಸದ್ಯ ಅರಣ್ಯ ಇಲಾಖೆ ಚಿರತೆ ಸೆರೆಗೆ ಮುಂದಾಗಿದ್ದು, ನಾಲ್ಕು ಬೋನ್ ಅಳವಡಿಕೆ ಮಾಡಿದೆ.
ಸ್ಥಳದಲ್ಲಿ 30ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಬೀಡುಬಿಟ್ಟಿದ್ದಾರೆ. ಥರ್ಮಲ್ ಡ್ರೋನ್ ಟೀಂ ಕೂಡ ಹಗಲು-ರಾತ್ರಿ ಚಿರತೆಯ ಮೇಲೆ ನಿಗಾ ವಹಿಸಿದ್ದು, ತಾತ್ಕಾಲಿಕವಾಗಿ ನಾಗಮಲೆಗೆ ಹೋಗುವ ಮಾರ್ಗವನ್ನು ಭಕ್ತರಿಗೆ ನಿರ್ಬಂಧಿಸಲಾಗಿದೆ.

