ಹೊಸ ವರ್ಷದ ಸಂಭ್ರಮವನ್ನು ಪ್ರತಿಯೊಬ್ಬರೂ ಒಂದೊಂದು ರೀತಿ ಆಚರಿಸುತ್ತಾರೆ. ಕೆಲವರು ಪಾರ್ಟಿ, ಪಟಾಕಿ ಎನ್ನುತ್ತಾ ಸಂಭ್ರಮಿಸಿದರೆ, ಚಂಡೀಗಢದ ಅಸ್ಮಿತಾ ಎಂಬ ಯುವತಿ ಮಾತ್ರ ತನ್ನ ಫಿಟ್‌ನೆಸ್ ಮತ್ತು ಸೃಜನಶೀಲತೆಯ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. 2026ರ ಹೊಸ ವರ್ಷದ ಸ್ವಾಗತಕ್ಕಾಗಿ ಇವರು ನಗರದ ರಸ್ತೆಗಳಲ್ಲಿ ಬರೋಬ್ಬರಿ 26 ಕಿಲೋಮೀಟರ್ ಓಡಿ ದಾಖಲೆ ನಿರ್ಮಿಸಿದ್ದಾರೆ.
ಮ್ಯಾಪ್‌ನಲ್ಲಿ ಮೂಡಿತು ’26’ ಅಂಕಿ: ಅಸ್ಮಿತಾ ಅವರು ತಮ್ಮ ಓಟವನ್ನು ಕೇವಲ ವ್ಯಾಯಾಮಕ್ಕೆ ಸೀಮಿತಗೊಳಿಸದೆ, ಅದಕ್ಕೊಂದು ಕಲಾತ್ಮಕ ರೂಪ ನೀಡಿದ್ದಾರೆ. ಚಂಡೀಗಢದ ಸೆಕ್ಟರ್‌ಗಳ ನಕ್ಷೆಯನ್ನು ಬಳಸಿಕೊಂಡು, ತಾವು ಓಡುವ ಹಾದಿಯು ನಿಖರವಾಗಿ ’26’ ಎಂಬ ಅಂಕಿಯ ಆಕಾರದಲ್ಲಿ ಬರುವಂತೆ ಯೋಜಿಸಿದ್ದರು. ತಮ್ಮ ಫಿಟ್‌ನೆಸ್ ಆ್ಯಪ್‌ನಲ್ಲಿ ಈ ಓಟದ ಹಾದಿಯನ್ನು ದಾಖಲಿಸಿದ್ದು, ಮ್ಯಾಪ್‌ನಲ್ಲಿ ’26’ ಎಂಬ ಸಂಖ್ಯೆ ಅತ್ಯಂತ ಸ್ಪಷ್ಟವಾಗಿ ಮೂಡಿಬಂದಿದೆ. 2026ನೇ ವರ್ಷಕ್ಕೆ ಸ್ವಾಗತ ಕೋರಲು ಅವರು ಒಟ್ಟು 26.26 ಕಿಲೋಮೀಟರ್ ದೂರವನ್ನು ಕ್ರಮಿಸಿದ್ದಾರೆ.
ಪಕ್ಕಾ ಪ್ಲಾನಿಂಗ್ ಮತ್ತು ಶ್ರಮ: ಚಂಡೀಗಢದ ಆರ್ ಬಿ ಐ (RBI) ಪಾರ್ಕ್ ಬಳಿ ಆರಂಭವಾದ ಈ ಓಟ ನಗರದ ವಿವಿಧ ರಸ್ತೆಗಳ ಮೂಲಕ ಸಾಗಿತು. ನಗರದ ನಕ್ಷೆಯಲ್ಲಿ ನಿಖರವಾದ ಆಕಾರ ಮೂಡಿಸಲು ರಸ್ತೆಗಳ ಜ್ಞಾನ ಮತ್ತು ವೇಗದ ಮೇಲೆ ನಿಯಂತ್ರಣ ಬಹಳ ಮುಖ್ಯವಾಗಿತ್ತು. ಚಂಡೀಗಢದ ವ್ಯವಸ್ಥಿತ ರಸ್ತೆ ವಿನ್ಯಾಸ ಅಸ್ಮಿತಾ ಅವರ ಈ ಸಾಹಸಕ್ಕೆ ಪೂರಕವಾಗಿತ್ತು. ಪ್ರತಿ ವರ್ಷವೂ ಹೊಸ ವರ್ಷದಂದು ಹೀಗೆ ವಿಭಿನ್ನವಾಗಿ ಓಡುವುದು ನನ್ನ ಸಂಪ್ರದಾಯ ಎಂದು ಅವರು ಹಂಚಿಕೊಂಡಿದ್ದಾರೆ.
ನೆಟ್ಟಿಗರ ಮೆಚ್ಚುಗೆ: ಅಸ್ಮಿತಾ ಅವರು ತಮ್ಮ ಓಟದ ಮ್ಯಾಪ್ ಸ್ಕ್ರೀನ್‌ಶಾಟ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಬೆನ್ನಲ್ಲೇ ಸಾವಿರಾರು ಜನರು ಫಿದಾ ಆಗಿದ್ದಾರೆ. “ಹೊಸ ವರ್ಷವನ್ನು ಬರಮಾಡಿಕೊಳ್ಳಲು ಇದಕ್ಕಿಂತ ಕೂಲ್ ಆದ ದಾರಿ ಇನ್ನೊಂದಿಲ್ಲ” ಎಂದು ಜನರು ಕಮೆಂಟ್ ಮಾಡುತ್ತಿದ್ದಾರೆ. ಯುವತಿಯ ಈ ಸೃಜನಶೀಲತೆ ಮತ್ತು ದೈಹಿಕ ಶ್ರಮ ಈಗ ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ.

