ಬೆಂಗಳೂರು: ಸಿಇಟಿ ಅರ್ಜಿಯಲ್ಲಿ ಕ್ಲಾಸ್ (Clause) A1, B1, B, C, D, E, F, G, H, I, J, K, L, M, N and O ಎಂದು ಕ್ಲೇಮ್ ಮಾಡಿರುವ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ(KEA) ಕಚೇರಿಯಲ್ಲಿ ಸೋಮವಾರ ಆರಂಭವಾಗಿದ್ದು, ಇದು ಮೇ 22ರವರೆಗೆ ನಡೆಯಲಿದೆ.
ಅಭ್ಯರ್ಥಿಗಳು ದಾಖಲೆ ಪರಿಶೀಲನೆಗೆ ಬರುವ ಮುನ್ನ ವೆಬ್ ಸೈಟ್ ನಲ್ಲಿ ನೀಡಿರುವ ಲಿಂಕ್ ನಲ್ಲಿ ಸ್ಲಾಟ್ ಬುಕ್ ಮಾಡಿಕೊಂಡು ಬರಲು ಸೂಚಿಸಲಾಗಿತ್ತು. ಕೆಲವರು ಸ್ಲಾಟ್ ಬುಕ್ ಮಾಡಿಕೊಂಡು ಬಂದಿದ್ದರೆ ಇನ್ನು ಕೆಲವರು ನೇರ ಬಂದು ದಾಖಲೆ ಪರಿಶೀಲನೆಗೆ ಬೇಡಿಕೆ ಸಲ್ಲಿಸಿದರು. ಇದರಿಂದ ಯೋಜನಾಬದ್ಧವಾಗಿ ದಾಖಲೆ ಪರಿಶೀಲನೆ ಆಗಬೇಕು ಎನ್ನುವ ಪ್ರಾಧಿಕಾರದ ಉದ್ದೇಶಕ್ಕೆ ಸ್ವಲ್ಪ ಹಿನ್ನಡೆ ಆಯಿತು. ಹೀಗಾಗಿ ದಯವಿಟ್ಟು ಸ್ಲಾಟ್ ಬುಕ್ ಮಾಡಿಕೊಂಡೇ, ನಿಗದಿತ ದಿನಾಂಕ ಮತ್ತು ಸಮಯಕ್ಕೆ ಬರಲು ಈ ಮೂಲಕ ಸೂಚಿಸಲಾಗಿದೆ. ಇದರಿಂದ ಅನಗತ್ಯ ಗೊಂದಲ, ಸರಥಿ ಸಾಲಿನಲ್ಲಿ ನಿಲ್ಲುವ ತೊಂದರೆ ತಪ್ಪಲಿದೆ.
Y ಅರ್ಹತಾ ಕಂಡಿಕೆಯ ಅಭ್ಯರ್ಥಿಗಳು ದಾಖಲೆಗಳ ಪರಿಶೀಲನೆಗೆ ಹಾಜರಾಗಬೇಕಿಲ್ಲ. ಅನ್ ಲೈನ್ ಹಾಗೂ ಕಾಲೇಜಿನಲ್ಲಿ ದಾಖಲೆ ಪರಿಶೀಲನೆ ಮಾಡಿಕೊಂಡಿರುವ A ಕ್ಲಾಸ್ ನವರು ಕೂಡ ಬರುವ ಅಗತ್ಯ ಇಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.

