ಬೆಂಗಳೂರು: ಸಾರಿಗೆ ನೌಕರರ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ 2025ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ ನಾಲ್ಕು ಸಾರಿಗೆ ನಿಗಮಗಳ ನೌಕರರ ವೇತನವನ್ನು ಶೇ. 10 ರಿಂದ ಶೇ. 12.5 ರಷ್ಟು ಹೆಚ್ಚಳಕ್ಕೆ ಸರ್ಕಾರದಿಂದ ಮಂಗಳವಾರ ಅಧಿಕೃತ ಆದೇಶ ಪ್ರಕಟಿಸುವ ಸಾಧ್ಯತೆ ಇದೆ.
ಸಾರಿಗೆ ನಿಗಮಗಳು ಶೇಕಡ 7ರಷ್ಟು ವೇತನ ಹೆಚ್ಚಳ ಪ್ರಸ್ತಾಪವನ್ನು ನೌಕರರ ಸಂಘಟನೆಗಳ ಮುಂದಿಟ್ಟು ಮೂರು ಸಭೆಗಳನ್ನು ನಡೆಸಿದ್ದವು. ದಾರಿಗೆ ಸಚಿವ ರಾಮಲಿಂಗಾರೆಡ್ಡಿ ಕೂಡ ನೌಕರರ ಸಂಘಟನೆಗಳ ಮುಖಂಡರೊಂದಿಗೆ ಸಭೆ ನಡೆಸಿ ಶೇಕಡ 7ರ ವೇತನ ಹೆಚ್ಚಳಕ್ಕೆ ಮನವಿ ಮಾಡಿದ್ದರು. ಆದರೆ ಸಾರಿಗೆ ನೌಕರರ ಸಂಘಟನೆಗಳು ಶೇ. 25 ರಷ್ಟು ವೇತನ ಹೆಚ್ಚಳಕ್ಕೆ ಪಟ್ಟು ಹಿಡಿದಿದ್ದವು.
ಮೇ 20ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ನೌಕರರ ಸಂಘಟನೆಗಳು ಘೋಷಿಸಿದ್ದವು. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಸಾರಿಗೆ ಸಚಿವರು ಸಭೆ ನಡೆಸಿ ವೇತನ ಹೆಚ್ಚಳ ಪ್ರಮಾಣ ನಿಗದಿ ಮಾಡಿದ್ದಾರೆ. 2025ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಶೇಕಡ 10 ರಿಂದ 12.5 ರಷ್ಟು ವೇತನ ಹೆಚ್ಚಳ ಮಾಡಿ ಮಂಗಳವಾರ ಆದೇಶಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

