HomeKarnatakaBIG NEWS : ಕೇಂದ್ರ ಸರ್ಕಾರ ರಾಜ್ಯಗಳನ್ನು ತಮ್ಮ ಅಧೀನದ ಮಾಂಡಲಿಕರ ರೀತಿ ನಡೆಸಿಕೊಳ್ಳುತ್ತಿದೆ :...

BIG NEWS : ಕೇಂದ್ರ ಸರ್ಕಾರ ರಾಜ್ಯಗಳನ್ನು ತಮ್ಮ ಅಧೀನದ ಮಾಂಡಲಿಕರ ರೀತಿ ನಡೆಸಿಕೊಳ್ಳುತ್ತಿದೆ : CM ಸಿದ್ದರಾಮಯ್ಯ ವಾಗ್ಧಾಳಿ

ಬೆಂಗಳೂರು : ರಾಜ್ಯಗಳಿಗೆ ನೀಡುವ ತೆರಿಗೆ ಪಾಲನ್ನು ಶೇಕಡಾ 41ರಿಂದ 40ಕ್ಕೆ ಇಳಿಸಲು ಶಿಫಾರಸು ಮಾಡುವಂತೆ ಹಣಕಾಸು ಆಯೋಗಕ್ಕೆ ಕೇಂದ್ರದ ಎನ್ಡಿಎ ಸರ್ಕಾರ ಸಿದ್ಧತೆ ನಡೆಸಿರುವುದು ಒಕ್ಕೂಟ ವಿರೋಧಿ ನಡೆ ಕೇಂದ್ರ ಸರ್ಕಾರ ರಾಜ್ಯಗಳನ್ನು ತಮ್ಮ ಅಧೀನದ ಮಾಂಡಲಿಕರ ರೀತಿ ನಡೆಸಿಕೊಳ್ಳುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದರು.

ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ‘ ರಾಜ್ಯಗಳಿಗೆ ನೀಡುವ ತೆರಿಗೆ ಪಾಲನ್ನು ಶೇಕಡಾ 41ರಿಂದ 40ಕ್ಕೆ ಇಳಿಸಲು ಶಿಫಾರಸು ಮಾಡುವಂತೆ ಹಣಕಾಸು ಆಯೋಗಕ್ಕೆ ಕೇಂದ್ರದ ಎನ್‌ಡಿಎ ಸರ್ಕಾರ ಸಿದ್ಧತೆ ನಡೆಸಿರುವುದು ಒಕ್ಕೂಟ ವಿರೋಧಿ ನಡೆ ಕೇಂದ್ರ ಸರ್ಕಾರ ರಾಜ್ಯಗಳನ್ನು ತಮ್ಮ ಅಧೀನದ ಮಾಂಡಲಿಕರ ರೀತಿ ನಡೆಸಿಕೊಳ್ಳುತ್ತಿದೆ. ಗ್ಯಾರಂಟಿಗಳ ಮೂಲಕ ಕನ್ನಡಿಗರ ಮನಗೆದ್ದಿರುವ ಕಾಂಗ್ರೆಸ್ ಸರ್ಕಾರದ ಹೆಸರು ಕೆಡಿಸುವ ಪ್ರಯತ್ನವಿದು. ಕೇಂದ್ರದ ಅನ್ಯಾಯಗಳ ವಿರುದ್ಧದ ಮನವಿ – ಮಾತುಕತೆ ವಿಫಲವಾದರೆ ಬೀದಿಗಿಳಿದು ಹೋರಾಡಲು ನಾವು ಸಿದ್ಧ. ರಾಜ್ಯಕ್ಕೆ ನ್ಯಾಯಬದ್ಧವಾಗಿ ನೀಡಬೇಕಾಗಿರುವ ತೆರಿಗೆ ಪಾಲನ್ನು ಇನ್ನಷ್ಟು ಕಡಿತಗೊಳಿಸಲು ಕೇಂದ್ರ ಸರ್ಕಾರ ಮಾಡುತ್ತಿರುವ ಪ್ರಯತ್ನ ಕರ್ನಾಟಕ ವಿರೋಧಿ ಮಾತ್ರವಲ್ಲ ಒಕ್ಕೂಟ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸಾರುವ ಸಂವಿಧಾನಕ್ಕೆ ಕೂಡಾ ವಿರುದ್ಧವಾಗಿದೆ. ರಾಜ್ಯದ ತೆರಿಗೆ ಪಾಲನ್ನು ಶೇಕಡಾ 41ರಿಂದ 40ಕ್ಕೆ ಇಳಿಸಲು ಶಿಫಾರಸು ಮಾಡುವಂತೆ ಹಣಕಾಸು ಆಯೋಗಕ್ಕೆ ಕೇಂದ್ರದ ಎನ್‌ಡಿಎ ಸರ್ಕಾರ ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ. ನರೇಂದ್ರ ಮೋದಿ ಅವರು ಪ್ರಧಾನಿಯಾದ ದಿನದಿಂದ ಕೇಂದ್ರ ಸರ್ಕಾರದ ನೀತಿ-ನಿರ್ಧಾರಗಳನ್ನು ಗಮನಿಸುತ್ತಾ ಬಂದರೆ ನಿರಂತರವಾಗಿ ರಾಜ್ಯಗಳ ಸಂವಿಧಾನಬದ್ಧ ಅಧಿಕಾರಗಳನ್ನು ಮೊಟಕುಗೊಳಿಸುತ್ತಾ ಅವುಗಳನ್ನು ದುರ್ಬಲಗೊಳಿಸುತ್ತಾ ಬಂದಿರುವುದನ್ನು ಕಾಣಬಹುದು. ರಾಜ್ಯಗಳು ಸಂಗ್ರಹಿಸಿ ಕೇಂದ್ರ ಸರ್ಕಾರಕ್ಕೆ ನೀಡುವ ತೆರಿಗೆಯಲ್ಲಿ ನ್ಯಾಯಬದ್ಧ ಪಾಲು ರಾಜ್ಯಗಳಿಗೆ ಹಂಚಿಕೆಯಾಗುವಂತೆ ನೋಡಿಕೊಳ್ಳಬೇಕಾಗಿರುವ ಜವಾಬ್ದಾರಿಯನ್ನು ಹೊಂದಿರುವ ಕೇಂದ್ರ ಹಣಕಾಸು ಆಯೋಗ ರಾಜ್ಯಗಳ ಹಕ್ಕುಗಳನ್ನು ದಮನಿಸಲು ಹೊರಟ ಕೇಂದ್ರ ಸರ್ಕಾರದ ಕೈಗಳ ಆಯುಧವಾಗಿರುವುದು ದುರಂತವೇ ಸರಿ. ರಾಜ್ಯಗಳು ಕೇಂದ್ರ ಸರ್ಕಾರದ ಮರ್ಜಿ ಕಾಯುವಂತಹ ಪರವಾಲಂಬಿ ಸ್ಥಿತಿಗೆ ನೂಕುವುದು ಈ ಹುನ್ನಾರದ ದುರುದ್ದೇಶವಾಗಿರುವಂತೆ ಕಾಣುತ್ತಿದೆ. ಇದನ್ನ ಸಹಿಸಲು ಸಾಧ್ಯ ಇಲ್ಲ. ಅಧಿಕಾರದ ವಿಕೇಂದ್ರೀಕರಣ ಪ್ರಜಾಪ್ರಭುತ್ವ, ಅಧಿಕಾರದ ಕೇಂದ್ರಿಕರಣ ಸರ್ವಾಧಿಕಾರ. ದೇಶದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಯಾಗಿ ಎಂಟು ದಶಕಗಳು ಪೂರ್ಣಗೊಳ್ಳುತ್ತಿರುವ ಇಂದಿನ ಸ್ಥಿತಿಯಲ್ಲಿ ಪ್ರಜಾಪ್ರಭುತ್ವವನ್ನು ಇನ್ನಷ್ಟು ವಿಕಾಸಗೊಳಿಸಿ ಅಧಿಕಾರದ ವಿಕೇಂದ್ರಿಕರಣ ಮಾಡಬೇಕಾದ ಕಾಲದಲ್ಲಿ ಕೇಂದ್ರ ಸರ್ಕಾರ ರಾಜ್ಯಗಳನ್ನು ತಮ್ಮ ಅಧೀನದ ಮಾಂಡಲಿಕರ ರೀತಿ ನಡೆಸಿಕೊಳ್ಳುತ್ತಿರುವುದು ವಿಷಾದನೀಯ. ಪ್ರತಿ ವರ್ಷ ಕನ್ನಡಿಗರಿಂದ ಸಂಗ್ರಹಿಸಲಾದ ಅಂದಾಜು ನಾಲ್ಕು ಲಕ್ಷ ಕೋಟಿ ರೂಪಾಯಿಗಳನ್ನು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಸಲ್ಲಿಸುತ್ತದೆ. ಅದರಲ್ಲಿ ರಾಜ್ಯಕ್ಕೆ ವಾಪಸು ಬರುವುದು ರೂಪಾಯಿಗೆ 15 ಪೈಸೆ ಮಾತ್ರ. ಹದಿನೈದನೇ ಹಣಕಾಸು ಆಯೋಗ ತೆರಿಗೆ ಹಂಚಿಕೆಯ ಪ್ರಮಾಣವನ್ನು ಶೇಕಡಾ 4.713ರಿಂದ ಶೇಕಡಾ 3.64ಕ್ಕೆ ಇಳಿಸಿದ್ದ ಕಾರಣದಿಂದಾಗಿ ಕರ್ನಾಟಕ ಕಳೆದ ಐದು ವರ್ಷಗಳಲ್ಲಿ 68,775 ಕೋಟಿ ರೂಪಾಯಿಯನ್ನು ಕಳೆದುಕೊಂಡಿದೆ. 15ನೇ ಹಣಕಾಸು ಆಯೋಗದ ಅವಧಿ ಮುಂದಿನ ವರ್ಷ ಪೂರ್ಣಗೊಳ್ಳಲಿದ್ದರೂ ಇಲ್ಲಿಯ ವರೆಗೆ ಆಯೋಗವೇ ಶಿಫಾರಸು ಮಾಡಿರುವ ವಿಶೇಷ ಅನುದಾನ ರೂ.5495 ಕೋಟಿ ಮತ್ತು ರಾಜ್ಯ ಕೇಂದ್ರಿತ ₹6000 ಕೋಟಿ ಮೊತ್ತದ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿಲ್ಲ.

ಕೇಂದ್ರ ಹಣಕಾಸು ಆಯೋಗ ತಾನು ಶಿಫಾರಸು ಮಾಡಿದ್ದಕ್ಕಿಂತ ಕಡಿಮೆ ಮೊತ್ತದ ಹಣವನ್ನು ರಾಜ್ಯ ಸರ್ಕಾರಕ್ಕೆ ನೀಡುತ್ತಾ ಬಂದಿದೆ. 2021-22, 2022-23 ಮತ್ತು 2023-24ರ ಹಣಕಾಸು ವರ್ಷದಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ₹1,311 ಕೋಟಿ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳಿಗೆ ₹775 ಕೋಟಿ ಕಡಿಮೆ ಅನುದಾನ ನೀಡಲಾಗಿದೆ. 2022-23 ಮತ್ತು 2023-24ರ ಹಣಕಾಸು ವರ್ಷದಲ್ಲಿ, ಆರೋಗ್ಯ ಅನುದಾನದಲ್ಲಿ ರೂ.826 ಕೋಟಿ, ಎಸ್ ಡಿ ಆರ್ ಎಫ್ ಅಡಿಯಲ್ಲಿ ರೂ.340 ಕೋಟಿ ಹಣವನ್ನು ಕಡಿತ ಮಾಡಲಾಗಿದೆ. ಈ ಒಟ್ಟು ಬಾಕಿ ರೂ.3,300 ಕೋಟಿ ರೂಪಾಯಿ ಮತ್ತು 2024-25 ಮತ್ತು 2025-26ರ ಅವಧಿಯಲ್ಲಿ ಆಯೋಗ ಶಿಫಾರಸು ಮಾಡಿರುವ ವಿಶೇಷ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಬೇಕು. ಕೇಂದ್ರ ಸರ್ಕಾರ ರಾಜ್ಯಗಳಲ್ಲಿ ವಸೂಲು ಮಾಡುತ್ತಿರುವ ಸೆಸ್ ಮತ್ತು ಸರ್ಚಾರ್ಜ್ ಗಳಲ್ಲಿ ರಾಜ್ಯಗಳಿಗೆ ಪಾಲು ನೀಡಲಾಗುತ್ತಿಲ್ಲ. ಸೆಸ್ ಮತ್ತು ಸರ್ಚಾರ್ಜ್ ಅನ್ನು ತೆರಿಗೆ ನಿಧಿಯಿಂದ ಹೊರಗಿಟ್ಟಿರುವ ಕಾರಣ 2017-18ರಿಂದ 2024-25ರ ಅವಧಿಯಲ್ಲಿ ಕರ್ನಾಟಕ ₹53,359 ಕೋಟಿ ಕಳೆದುಕೊಂಡಿದೆ. 2010-11ರಲ್ಲಿ ಒಟ್ಟು ತೆರಿಗೆಯ ಶೇಕಡಾ 8.1ರಷ್ಟಿದ್ದ ಸೆಸ್ ಮತ್ತು ಸರ್ಚಾರ್ಜ್ ನ ಪ್ರಮಾಣ 2024-25ರಲ್ಲಿ ಶೇಕಡಾ 14ಕ್ಕೆ ಏರಿಕೆಯಾಗಿದೆ. ಇದರಿಂದಾಗಿ ಕರ್ನಾಟಕಕ್ಕೆ ಬರುವ ತೆರಿಗೆ ಪಾಲಿನಲ್ಲಿ ಕಡಿತ ಉಂಟಾಗಿದೆ. ಇದರ ಜೊತೆಯಲ್ಲಿ ಕೇಂದ್ರದ ಸಹಾಯ ಧನ ಕೂಡಾ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಸೆಸ್ ಮತ್ತು ಸರ್ಚಾರ್ಜ್ ರದ್ದುಗೊಳಿಸಬೇಕು ಇಲ್ಲವೆ ಅದನ್ನು ಒಟ್ಟು ತೆರಿಗೆಯ ನಿಧಿಗೆ ಸೇರಿಸಿ ಅದನ್ನು ರಾಜ್ಯಗಳಿಗೆ ಹಂಚಿಕೆ ಮಾಡಬೇಕು. ಜಿಎಸ್ ಟಿ ಅನುಷ್ಠಾನದಿಂದಾಗಿ ರಾಜ್ಯ ಸರ್ಕಾರಗಳಿಗೆ ಆಗುವ ನಷ್ಟಕ್ಕೆ ಪರಿಹಾರ ನೀಡಲು ಜಿಎಸ್ ಟಿ ಪರಿಹಾರ ಸೆಸ್ ಜಾರಿಗೊಳಿಸಲಾಗಿತ್ತು. 2022ರ ಜುಲೈ ತಿಂಗಳಲ್ಲಿಯೇ ಪರಿಹಾರ ನೀಡುವುದನ್ನು ನಿಲ್ಲಿಸಿದರೂ 2026ರ ವರೆಗೆ ಸೆಸ್ ಸಂಗ್ರಹವನ್ನು ಮುಂದುವರಿಸಲಾಗಿದೆ. ಈ ಸೆಸ್ ಬದಲಿಗೆ ಹೆಚ್ಚುವರಿ ರಾಜ್ಯ ಸರಕು ಮತ್ತು ಸೇವಾ ತೆರಿಗೆ (ಎಸ್ ಜಿಎಸ್ ಟಿ) ಸಂಗ್ರಹಕ್ಕೆ ರಾಜ್ಯ ಸರ್ಕಾರಕ್ಕೆ ಅವಕಾಶ ನೀಡಬೇಕು. 1985ರಿಂದ ಸೇವಾ ತೆರಿಗೆಯನ್ನು ಪರಿಷ್ಕರಿಸಿಲ್ಲ, ಈ ದೀರ್ಘಾವಧಿಯಲ್ಲಿ ನಡೆದಿರುವ ಆರ್ಥಿಕ ಬೆಳವಣಿಗೆಯನ್ನು ಗಮನದಲ್ಲಿಟ್ಟು ಸೇವಾ ತೆರಿಗೆಯ ಗರಿಷ್ಠ ಮಿತಿಯನ್ನು ಹೆಚ್ಚಿಸಲು ಸಂವಿಧಾನಕ್ಕೆ ತಿದ್ದುಪಡಿ ಮಾಡಬೇಕು. ರಾಜ್ಯದಲ್ಲಿ ಸಂಗ್ರಹವಾಗುವ ತೆರಿಗೆಯಲ್ಲಿ ಕನಿಷ್ಠ ಅರ್ಧದಷ್ಟನ್ನಾದರೂ ರಾಜ್ಯಕ್ಕೆ ನೀಡಬೇಕು. ಸಂವಿಧಾನಕ್ಕೆ ತಿದ್ದುಪಡಿ ಮಾಡಿ ತೆರಿಗೆಯೇತರ ಆದಾಯವನ್ನು ಕೂಡಾ ತೆರಿಗೆ ನಿಧಿಗೆ ಸೇರಿಸಬೇಕು ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular