ಕೊಪ್ಪಳ: ಕೆರೆಗಾಗಿ ಬಲ್ದೋಟಾ ಕಾರ್ಖಾನೆಗೆ ನುಗ್ಗಿದ್ದ ರೈತರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಅಲ್ಲಮಪ್ರಭು ಬೆಟ್ಟದೂರು ಸೇರಿದಂತೆ ಆರು ಹೋರಾಟಗಾರರ ವಿರುದ್ಧ ಕೇಸ್ ದಾಖಲಾಗಿದೆ.
ಕೊಪ್ಪಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ಬಸಾಪುರದ ಯಮನೂರಪ್ಪ, ಮೂಕಪ್ಪ ಎಂ. ಮೇಸ್ತ್ರಿ, ಭೀಮಸೇನ ಕಲಿಕೇರಿ, ಮಲ್ಲಿಕಾರ್ಜುನ ಗೋನಾಳ, ಮಂಗಳೇಶ ರಾಥೋಡ ಎಂಬುವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಕಾರ್ಖಾನೆ ಭದ್ರತಾ ಮ್ಯಾನೇಜರ್ ಮಹೇಶ್ ದೂರಿನ ಮೇರೆಗೆ ಕೇಸ್ ದಾಖಲಿಸಲಾಗಿದೆ. ಕೊಪ್ಪಳ ತಾಲೂಕಿನ ಬಸಾಪುರದ ಬಳಿ ಇರುವ ಬಲ್ದೋಟಾ ಕಾರ್ಖಾನೆ ಕಾಂಪೌಂಡ್ ಒಡೆದು ರೈತರು ಒಳಗೆ ನುಗ್ಗಿದ್ದರು. ಕೆರೆ ಸಾರ್ವಜನಿಕ ಮುಕ್ತ ಮಾಡಬೇಕೆಂದು ರೈತರು ಆಗ್ರಹಿಸಿದ್ದರು. ಕಾರ್ಖಾನೆ ಆವರಣಕ್ಕೆ ಅಕ್ರಮವಾಗಿ ನುಗ್ಗಿ ಕಾಂಪೌಂಡ್ ಗೆ ಹಾನಿ ಮಾಡಿದ ಆರೋಪ ಹಿನ್ನೆಲೆಯಲ್ಲಿ ಕೇಸ್ ದಾಖಲಾಗಿದೆ.
ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಕಾರ್ಖಾನೆ ಎದುರು ಸಮಾವೇಶ ನಡೆಸಲಾಗಿತ್ತು. ಕಾರ್ಖಾನೆ ಎದುರು ಆಯೋಜಿಸಿದ್ದ ಸಮಾವೇಶದಲ್ಲಿ ಪ್ರಚೋದನಕಾರಿ ಭಾಷಣ ಮಾಡಲಾಗಿತ್ತು. ಬಳಿಕ ಕೆಲವರು ಗುಂಪು ಕಟ್ಟಿಕೊಂಡು ಕಾರ್ಖಾನೆಗೆ ಬರುವ ವಾಹನ ತಡೆದು ಕಾಂಪೌಂಡ್ ಒಡೆದು ಅಕ್ರಮವಾಗಿ ಪ್ರವೇಶಿಸಿ ಹಲ್ಲೆಗೈದು ಜೀವ ಬೆದರಿಕೆ ಹಾಕಿದ್ದಾರೆ. ಭದ್ರತಾ ಸಿಬ್ಬಂದಿಗೆ ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪದಡಿ ದೂರು ದಾಖಲಾಗಿದೆ.
ಬಸಾಪುರ ಕೆರೆ ಮತ್ತು ಭೂಸ್ವಾಧೀನಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ನ್ಯಾಯಾಲಯಗಳು ಮತ್ತು ಕೆಐಎಡಿಬಿ ಕಾರ್ಖಾನೆ ಆವರಣ ಖಾಸಗಿ ಸ್ವತ್ತು. ಅನುಮತಿ ಇಲ್ಲದೆ ಪ್ರವೇಶಿಸಲು ಯಾರಿಗೂ ಅವಕಾಶವಿಲ್ಲ ಎಂದು ಕಂಪನಿ ಹೇಳಿದೆ.
ಕಳೆದ ವರ್ಷ ಹೋರಾಟಗಾರರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಕಾರ್ಖಾನೆ ವ್ಯಾಪ್ತಿಯ ಕೆರೆಗೆ ಅತಿಕ್ರಮಣ ಆರೋಪದಡಿ ಕೇಸ್ ದಾಖಲಾಗಿತ್ತು. ಈ ಹಿಂದೆಯೂ ಅಲ್ಲಮ ಪ್ರಭು ಬೆಟ್ಟದೂರು ಎ1 ಆರೋಪಿಯಾಗಿದ್ದರು. ಇದೀಗ ಮತ್ತೆ ಅಲ್ಲಮಪ್ರಭು ಬೆಟ್ಟದೂರು ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ.

