ರೈತರ ಸಾಲ ವಸೂಲು ಮಾಡುವ ಬ್ಯಾಂಕುಗಳು ಹೇಗೆ ಕಿರುಕುಳ ನೀಡುತ್ತವೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಸಕಲೇಶಪುರದ ರೈತನೊಬ್ಬ 50,000 ಸಾಲ ಮರು ಪಾವತಿ ಮಾಡಿದ ತಿಂಗಳುಗಳ ನಂತರ ಬ್ಯಾಂಕ್ ಬಾಕಿ ಉಳಿದಿರುವ ಮೊತ್ತವನ್ನು ಮರು ಪಾವತಿಸಿ ಎಂದು ಕರೆ ಮಾಡಿದೆ.
ಹಾಸನ ಜಿಲ್ಲೆಯ ಸಕಲೇಶಪುರದ ಕೆನರಾ ಬ್ಯಾಂಕ್ ಸುದ್ದಿಯಲ್ಲಿದೆ. ರೈತನೊಬ್ಬ ಬ್ಯಾಂಕಿನಿಂದ 50,000 ರೂ. ಸಾಲ ಪಡೆದಿದ್ದ. ಅದನ್ನು ಆತ ಸರಿಯಾಗಿ ಮರು ಪಾವತಿ ಮಾಡಿದ್ದ. ಆದರೆ ತಿಂಗಳುಗಳ ತರುವಾಯ ಬ್ಯಾಂಕ್‌ನಿಂದ ಮತ್ತೆ ಕರೆ ಬಂದಿದೆ.
ಬ್ಯಾಂಕ್ ಸಿಬ್ಬಂದಿ ನಿಮ್ಮ ಬಾಕಿ ಉಳಿದಿರುವ 9.34 ರೂ. ಸಾಲ ಮರು ಪಾವತಿ ಮಾಡಿ ಎಂದು ರೈತನಿಗೆ ಹೇಳಿದ್ದಾರೆ. ಬ್ಯಾಂಕಿಗೆ ಹೋದ ರೈತ 10 ರೂ. ನೀಡಿ ಸಾಲ ಮರು ಪಾವತಿ ಮಾಡಿದ್ದಾನೆ. ಆದರೆ ರೈತನಿಗೆ ಬಾಕಿ ಉಳಿದಿರುವ ಚಿಲ್ಲರೆಯನ್ನು ಬ್ಯಾಂಕ್ ಸಿಬ್ಬಂದಿ ನೀಡಿಲ್ಲ.
ಕೋರ್ಟ್ ಮೊರೆ ಹೋಗಲು ತಯಾರಿ: ಸಕಲೇಶಪುರದ ನಿವಾಸಿ ಚರಣ್ ಈಗ ಕೆನರಾ ಬ್ಯಾಂಕ್ ವಿರುದ್ಧ ಕೆಂಡಾಮಂಡಲವಾಗಿದ್ದಾರೆ. ನೀವು ರೂ. 9.34 ಸಾಲ ವಾಪಸ್ ಕೇಳಬಹುದು. ನನ್ನ 66 ಪೈಸೆ ವಾಪಸ್ ಕೊಡಿ ಎಂದು ಆಗ್ರಹಿಸಿದ್ದಾನೆ.
ನಿಮ್ಮ ಸಾಲವನ್ನು ದೂರವಾಣಿ ಕರೆ ಬಂದ ತಕ್ಷಣ ಬಂದು ವಾಪಸ್ ನೀಡಿದ್ದೇನೆ. ಬಾಕಿ ಉಳಿದ 66 ಪೈಸೆ ವಾಪಸ್ ಕೊಡಿ ಎಂದು ಅವರು ಬ್ಯಾಂಕ್ ಸಿಬ್ಬಂದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರೂ. 9.34 ಬಾಕಿಗೆ ರೂ. 10 ಪಾವತಿಸಿದರೂ ಉಳಿದ 66 ಪೈಸೆಯನ್ನು ಬ್ಯಾಂಕ್ ವಾಪಸ್ ನೀಡಲಿಲ್ಲ ಎಂದು ಚರಣ್ ಆರೋಪಿಸಿದ್ದಾರೆ. “ನಾನು ಹೆಚ್ಚಾಗಿ ಕೊಟ್ಟ ಹಣವನ್ನು ವಾಪಸ್ ಕೊಡದಿದ್ದರೆ, ನ್ಯಾಯಾಲಯದ ಮೊರೆ ಹೋಗುತ್ತೇನೆ” ಎಂದು ಹೇಳಿದ್ದಾರೆ.

