ಡಿಸೆಂಬರ್ 22 ರಂದು ಕೆನಡಾದ ಎಡ್ಮಂಟನ್‌ನಲ್ಲಿರುವ ‘ಗ್ರೇ ನನ್ಸ್ ಕಮ್ಯುನಿಟಿ ಹಾಸ್ಪಿಟಲ್’ನಲ್ಲಿ (Grey Nuns Community Hospital) ನಡೆದ ಈ ಘಟನೆ ಇಡೀ ಭಾರತೀಯ ಸಮುದಾಯವನ್ನು ಆಘಾತಕ್ಕೀಡುಮಾಡಿದೆ.
ಅಸಲಿಗೆ ನಡೆದಿದ್ದೇನು? 44 ವರ್ಷದ ಪ್ರಶಾಂತ್ ಶ್ರೀಕುಮಾರ್ ಅವರು ಕೆಲಸದಲ್ಲಿದ್ದಾಗ ತೀವ್ರ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿನ ಸಿಬ್ಬಂದಿಗೆ ತಮ್ಮ ನೋವಿನ ತೀವ್ರತೆ “10 ಕ್ಕೆ 15 ರಷ್ಟಿದೆ” ಎಂದು ಪ್ರಶಾಂತ್ ತಿಳಿಸಿದ್ದರು. ಆದರೂ ಅವರನ್ನು ತುರ್ತು ಚಿಕಿತ್ಸಾ ವಿಭಾಗದ ಕಾಯುವ ಕೋಣೆಯಲ್ಲಿ ಕುಳಿತುಕೊಳ್ಳುವಂತೆ ಸೂಚಿಸಲಾಯಿತು.
8 ಗಂಟೆಗಳ ನರಕಯಾತನೆ:
- ಇಸಿಜಿ (ECG) ವರದಿ: ಆಸ್ಪತ್ರೆಯಲ್ಲಿ ಪ್ರಾಥಮಿಕ ಇಸಿಜಿ ಪರೀಕ್ಷೆ ನಡೆಸಲಾಯಿತು. ಆದರೆ ಅದರಲ್ಲಿ ಯಾವುದೇ ಗಂಭೀರ ವ್ಯತ್ಯಾಸ ಕಂಡುಬಂದಿಲ್ಲ ಎಂದು ಹೇಳಿದ ಸಿಬ್ಬಂದಿ, ಅವರಿಗೆ ಕೇವಲ ‘ಟೈಲೆನಾಲ್’ (Tylenol) ಎಂಬ ನೋವು ನಿವಾರಕ ಮಾತ್ರೆ ನೀಡಿ ಕಾಯುವಂತೆ ಮಾಡಿದರು.
- ಹೆಚ್ಚಾದ ರಕ್ತದೊತ್ತಡ: ಪ್ರಶಾಂತ್ ಅವರ ರಕ್ತದೊತ್ತಡ (Blood Pressure) ವೇಗವಾಗಿ ಏರುತ್ತಿತ್ತು. ನೋವು ತಡೆಯಲಾರದೆ ಅವರು ತಮ್ಮ ತಂದೆಯ ಹತ್ತಿರ “ಪಪ್ಪಾ, ನನಗೆ ಈ ನೋವು ಸಹಿಸಲು ಸಾಧ್ಯವಾಗುತ್ತಿಲ್ಲ” ಎಂದು ಅಳುತ್ತಿದ್ದರು.
- ಕೊನೆಯ ಕ್ಷಣ: ಸುಮಾರು 8 ಗಂಟೆಗಳ ಕಾಲ ಕಾದ ನಂತರ, ಅಂತಿಮವಾಗಿ ಅವರನ್ನು ಚಿಕಿತ್ಸಾ ಕೊಠಡಿಗೆ ಕರೆದೊಯ್ಯಲಾಯಿತು. ಅಲ್ಲಿ ಕುಳಿತ ಕೆಲವೇ ಕ್ಷಣಗಳಲ್ಲಿ ಪ್ರಶಾಂತ್ ತಮ್ಮ ಎದೆಯನ್ನು ಬಿಗಿಯಾಗಿ ಹಿಡಿದುಕೊಂಡು ಕುಸಿದುಬಿದ್ದರು. ವೈದ್ಯರು ಅವರನ್ನು ಉಳಿಸಲು ಪ್ರಯತ್ನಿಸಿದರೂ ಅಷ್ಟರಲ್ಲಾಗಲೇ ಪ್ರಶಾಂತ್ ಅವರ ಪ್ರಾಣ ಹೋಗಿತ್ತು.
ಅನಾಥವಾದ ಕುಟುಂಬ: ಮೃತ ಪ್ರಶಾಂತ್ ಅವರಿಗೆ ಪತ್ನಿ ಹಾಗೂ 3, 10 ಮತ್ತು 14 ವರ್ಷದ ಮೂವರು ಮಕ್ಕಳಿದ್ದಾರೆ. ಕುಟುಂಬದ ಆಧಾರಸ್ತಂಭವಾಗಿದ್ದ ಪ್ರಶಾಂತ್ ಅವರ ಸಾವು ಇಡೀ ಕುಟುಂಬವನ್ನು ಬೀದಿಗೆ ತಳ್ಳಿದೆ.
ಆಸ್ಪತ್ರೆಯ ಪ್ರತಿಕ್ರಿಯೆ: ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ‘ಕನ್ವೆಂಟ್ ಹೆಲ್ತ್’ ಸಂಸ್ಥೆಯು, ವೈಯಕ್ತಿಕ ರೋಗಿಗಳ ಬಗ್ಗೆ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ. ಆದರೆ, ಈ ಪ್ರಕರಣವನ್ನು ಮುಖ್ಯ ವೈದ್ಯಕೀಯ ಪರೀಕ್ಷಕರ ಕಚೇರಿಯಿಂದ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿ ಸಂತಾಪ ಸೂಚಿಸಿದೆ.
ಕೆನಡಾದಂತಹ ಮುಂದುವರಿದ ದೇಶದಲ್ಲಿ ಎಮರ್ಜೆನ್ಸಿ ಚಿಕಿತ್ಸೆಗಾಗಿ ಎಂಟು ಗಂಟೆಗಳ ಕಾಲ ಕಾಯಬೇಕಾದ ಸ್ಥಿತಿ ಬಂದಿರುವುದು ಅಲ್ಲಿನ ಭಾರತೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

