ಭಾರತೀಯ ಅಂಚೆ ಇಲಾಖೆ ‘ಉಳಿತಾಯ ಸಂಕಲ್ಪ ಅಭಿಯಾನ’ ಆರಂಭಿಸಿದೆ. ಇಲಾಖೆಯಲ್ಲಿ ಲಭ್ಯವಿರುವ ಉಳಿತಾಯ ಯೋಜನೆಗಳ ಕುರಿತು ಜನರಿಗೆ ಮಾಹಿತಿಯನ್ನು ನೀಡಿ, ಉಳಿತಾಯ ಯೋಜನೆಯಲ್ಲಿ ಜನರು ಹೂಡಿಕೆ ಮಾಡುವಂತೆ ಪ್ರೋತ್ಸಾಹ ನೀಡುವುದು ಯೋಜನೆ ಉದ್ದೇಶವಾಗಿದೆ.
ಅಂಚೆ ಇಲಾಖೆ ಸಾರ್ವಜನಿಕರಿಗೆ ಉತ್ತಮ ಆದಾಯ ನೀಡುವ ವಿವಿಧ ಉಳಿತಾಯ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಬಳಸಿಕೊಳ್ಳುವಂತೆ ಜಾಗೃತಿ ಮೂಡಿಸಲು ಹಾಗೂ ಅಂಚೆ ಕಚೇರಿಗಳ ಉಳಿತಾಯ ಮತ್ತು ಹೂಡಿಕೆ ಯೋಜನೆಗಳಿಗೆ ಉತ್ತೇಜನ ನೀಡಲು ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಭಾರತ ಸರ್ಕಾರದ ಭರವಸೆಯೊಂದಿಗೆ ಅಂಚೆ ಕಚೇರಿ ಉಳಿತಾಯ ಬ್ಯಾಂಕ್ (ಪಿಒಎಸ್‌ಬಿ) ಸಾರ್ವಜನಿಕರಿಗೆ ಸುರಕ್ಷಿತ ಮತ್ತು ವಿಶ್ವಾಸಾರ್ಹ ಉಳಿತಾಯ ಹಾಗೂ ಹೂಡಿಕೆ ಯೋಜನೆಗಳನ್ನು ಒದಗಿಸುತ್ತಿದೆ.
ಅಂಚೆ ಕಚೇರಿಗಳ ವಿವಿಧ ಉಳಿತಾಯ ಮತ್ತು ಹೂಡಿಕೆ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ಗ್ರಾಹಕರು ತಮ್ಮ ಹೂಡಿಕೆಯ ಮೇಲೆ ನಿಯಮಿತ ಬಡ್ಡಿ ಹಾಗೂ ನಿರಂತರ ಆದಾಯವನ್ನು ಪಡೆಯಬಹುದು ಎಂದು ತಿಳಿಸಲಾಗಿದೆ.
ಯೋಜನೆಗಳು: ಈ ಯೋಜನೆಗಳು ದೇಶದ ಎಲ್ಲಾ ಅಂಚೆ ಕಚೇರಿಗಳಲ್ಲಿ ವಿಶೇಷವಾಗಿ ಗ್ರಾಮೀಣ ಹಾಗೂ ದೂರದ ಪ್ರದೇಶಗಳಲ್ಲಿಯೂ ಲಭ್ಯವಿವೆ. ಇದಲ್ಲದೆ, ಗ್ರಾಹಕರು ಎಟಿಎಂ, ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ನೆಫ್ಟ್ ಹಾಗೂ ಆರ್‌ಟಿಜಿಎಸ್ ಸೇರಿದಂತೆ ಆಧುನಿಕ ಬ್ಯಾಂಕಿಂಗ್ ಸೌಲಭ್ಯಗಳನ್ನು ಸಹ ಉಪಯೋಗಿಸಬಹುದು.
ಉಳಿತಾಯ ಖಾತೆ ಹೊಂದಿರುವ ಗ್ರಾಹಕರು ಕಡಿಮೆ ಪ್ರೀಮಿಯಂನಲ್ಲಿ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್‌ಬಿವೈ) ಹಾಗೂ ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ) ಗಳಲ್ಲಿ ನೋಂದಾಯಿಸಿಕೊಂಡು, ಅನಿರೀಕ್ಷಿತ ಸಂದರ್ಭಗಳಲ್ಲಿ ತಮ್ಮ ಕುಟುಂಬಕ್ಕೆ ಅಗತ್ಯವಾದ ಆರ್ಥಿಕ ಭದ್ರತೆಯನ್ನು ಒದಗಿಸಬಹುದು.
ಗ್ರಾಮೀಣ ಪ್ರದೇಶಗಳಲ್ಲಿ ವಿಶೇಷವಾಗಿ ಆರ್ಥಿಕ ಒಳಗೊಳ್ಳುವಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಇಂಡಿಯಾ ಪೋಸ್ಟ್ ಇದೀಗ ಉಳಿತಾಯ ಸಂಕಲ್ಪ ಅಭಿಯಾನವನ್ನು ಜಾರಿಗೊಳಿಸಿದೆ.
ಎಲ್ಲಾ ನಾಗರಿಕರು ತಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ ಹೊಸ ಉಳಿತಾಯ ಖಾತೆ ತೆರೆಯುವಂತೆ ಹಾಗೂ ಅಂಚೆ ಕಚೇರಿಗಳ ವಿವಿಧ ಯೋಜನೆಗಳಲ್ಲಿ ಹೂಡಿಕೆ ಮಾಡಿ ನಿಯಮಿತ ಮತ್ತು ನಿರಂತರ ಆದಾಯ ಪಡೆಯುವಂತೆ ವಿನಂತಿಸಲಾಗಿದೆ.
ಈ ಅಭಿಯಾನವನ್ನು ಯಶಸ್ವಿಗೊಳಿಸಲು ಸಾರ್ವಜನಿಕರು ಸಹಕರಿಸಬೇಕು ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡುವ ಮೂಲಕ ಸರ್ಕಾರ ನೀಡಿರುವ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳಬೇಕು ಎಂದು ಕರೆ ನೀಡಲಾಗಿದೆ.

