ಬೆಂಗಳೂರು: ರಾಜ್ಯ ಸರ್ಕಾರವು ಶಾಶ್ವತ ನಿವಾಸಿ ಪ್ರಮಾಣಪತ್ರ (PRC) ವಿತರಿಸುವ ಅಧಿಕಾರವನ್ನು ಹೊಂದಿಲ್ಲ ಆದಾಗ್ಯೂ ಈ ಕ್ರಮಕ್ಕೆ ಸರ್ಕಾರ ಮುಂದಾಗಿರುವುದು ಸಂವಿಧಾನ ವಿರೋಧಿ ನಡೆ ಎಂದು ಪರಿಷತ್ ಸದಸ್ಯ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, PRC ನೀಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಸೇರಿದ್ದು. ಈ ಅಧಿಕಾರ ರಾಜ್ಯ ಸರ್ಕಾರಕ್ಕೆ ನೀಡಿದ್ದು ಯಾರು? ಅಕ್ರಮ ವಲಸಿಗರನ್ನು ಮತದಾರರ ಪಟ್ಟಿಗೆ ಸೇರಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಆರೋಪಿಸಿದರು.
ಚುನಾವಣಾ ಆಯೋಗಕ್ಕೆ ನಾನು ಮನವಿ ಮಾಡುತ್ತಿದ್ದೇನೆ. ರಾಜ್ಯ ಸರ್ಕಾರ ನೀಡುವ PRCಯನ್ನು ಮಾನ್ಯ ಮಾಡಬೇಡಿ. ಅವರ ಉದ್ದೇಶವಿರುವುದು ಅಕ್ರಮ ಬಾಂಗ್ಲಾ ವಲಸಿಗರನ್ನು, ಪಾಕಿಸ್ತಾನದವರನ್ನು ಮತದಾರರ ಪಟ್ಟಿಗೆ ಸೇರಿಸಿ, ಅವರನ್ನು ಮತದಾರರ ಪಟ್ಟಿಯಲ್ಲಿ ತರಲು ತರಾತುರುಯಲ್ಲಿ ಪಿಆರ್ ಸಿಯನ್ನು ಜಾರಿಗೆ ತಂದಿದ್ದಾರೆ ಎಂದು ಕಿಡಿಕಾರಿದರು.
ಅಧಿಕಾರವೇ ಇಲ್ಲದಿರುವುದನ್ನು ಇವರು ಯಾಕೆ ಚಲಾಯಿಸಲು ಹೋಗುತ್ತಿದ್ದಾರೆ. ಯಾರಿಗೆ ಮತ ಹಾಕಲು ಹಕ್ಕಿಲ್ಲವೋ ಅಂತವರಿಗೆ ಪಿಆರ್ ಸಿ ಕೊಡುವುದು ಇವರ ಉದ್ದೇಶ. ಹೀಗೆ ಮಾಡಲು ಇವರಿಗೆ ಏನು ಅಧಿಕಾರವಿದೆ? ಶಾಶ್ವತ ನಿವಾಸಿ ಪ್ರಮಾಣಪತ್ರ ನೀಡಲು ಸಂವಿಧಾನ ಇವರಿಗೆ ಯಾವಾಗ ಅಧಿಕಾರ ಕೊಟ್ಟಿದೆ? ಇವರ ಪ್ರಕಾರ ಯಾರಾದರೂ ಹತ್ತು ವರ್ಷಗಳ ಕಾಲ ಇಲ್ಲಿಗೆ ಬಂದು ವಾಸಿಸಿದ ಮಾತ್ರಕ್ಕೆ ಅವರಿಗೆ ಶಾಶ್ವತ ನಿವಾಸಿ ಪ್ರಮಾಣ ಪತ್ರ ಕೊಟ್ಟು ಬಿಡುತ್ತಾರಾ? ಬಾಂಗ್ಲಾದವರಾದರೂ ಕೊಡುತ್ತೇವೆ, ಪಾಕಿಸ್ತಾನದವರಾದರೂ ಕೊಡುತ್ತೇವೆ ಎಂದು ಅರ್ಥವೇ? ಇದನ್ನು ಹೇಳಲಿ ಸರ್ಕಾರ ಎಂದರು.
ಈಗಾಗಲೇ ರಾಜ್ಯದಲ್ಲಿ ಬಾಂಗ್ಲಾ ವಲಸಿಗರು ಅಕ್ರಮವಾಗಿ ವಾಸಿಸಿರುವವರು ಪತ್ತೆಯಾಗಿದ್ದಾರೆ. ಪಾಕಿಸ್ತಾನ, ಕೀನ್ಯಾದವರು ಕೂಡ ಅಕ್ರಮ ವಲಸಿಗರು ಪತ್ತೆಯಾಗಿದ್ದಾರೆ. ಇವರೆಲ್ಲ ಅನಧೀಕೃತವಾಗಿ ಇಲ್ಲಿ ವಾಸವಾಗಿರುವ ಬಗ್ಗೆ ಪತ್ತೆಯಾಗಿದೆ. ಹೀಗಿರುವಾಗ ಅವರಿಗೆಲ್ಲ ನೀವು ಪಿಆರ್ ಸಿ ಕೊಡುತ್ತಿದ್ದೀರೆ? ಪಿಆರ್ ಸಿ ಕೊಡಲು ಇರುವ ಮಾನದಂದಗಳೇನು? ಯಾರೇ ಹತ್ತು ವರ್ಷ ವಾಸಿಸಿದರೂ ಕೊಡುತ್ತೇವೆ ಎನ್ನಲು ನಿಮಗೆ ಸಂವಿಧಾನ ಬದ್ಧ ಅಧಿಕಾರ ಎಲ್ಲಿದೆ? ಎಂದು ಪ್ರಶ್ನಿಸಿದ್ದಾರೆ.

